ಭಾನುವಾರ, ಜೂನ್ 7, 2020
22 °C

ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಎಎಐ: ಆರೋಗ್ಯ ಸೇತು ಆ್ಯಪ್‌ ಕಡ್ಡಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಹಾರಾಟಕ್ಕೆ ಸಜ್ಜಾಗುತ್ತಿರುವ ವಿಮಾನಗಳು– ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್‌–19 ಲಾಕ್‌ಡೌನ್‌ನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದ ನಾಗರಿಕ ವಿಮಾನಗಳು ಮೇ 25ರಿಂದ ಹಾರಾಟ ಪುನರಾರಂಭಿಸುವುದಾಗಿ ಸರ್ಕಾರ ಬುಧವಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡಕ್ಕೆ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ ವಲಯದಲ್ಲಿ ಕಡ್ಡಾಯವಾಗಿ ನಡೆದು ಬರಬೇಕಿದೆ. ದೇಹದ ಉಷ್ಣಾಂಶ ತಪಾಸಣೆ ಬಳಿಕ ಟರ್ಮಿನಲ್‌ ಪ್ರವೇಶಿಸಬಹುದು. ಪ್ರಯಾಣಿಕರ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಹೊಂದಿರಬೇಕಿದೆ. ಆದರೆ, 14 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಆರೋಗ್ಯ ಸೇತು ಆ್ಯಪ್‌ ಅಗತ್ಯವಿಲ್ಲ ಎಂದು ಏಕರೂಪದ ಕಾರ್ಯಾಚರಣಾ ಮಾರ್ಗಸೂಚಿಗಳಲ್ಲಿ (ಎಸ್‌ಒಪಿ) ತಿಳಿಸಲಾಗಿದೆ. 

ಇತರೆ ಪ್ರಮುಖಾಂಶಗಳು: 

* ವಿಮಾನ ಹೊರಡುವ ಎರಡು ಗಂಟೆಗೂ ಮುನ್ನ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಿರಬೇಕು.

* ಪ್ರಯಾಣಿಸಲಿರುವ ವಿಮಾನ ಹೊರಡುವ ಸಮಯ 4 ಗಂಟೆಗಿಂತಲೂ ಕಡಿಮೆ ಇದ್ದರೆ ಮಾತ್ರ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ವಲಯದೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. 

* ಎಲ್ಲ ಪ್ರಯಾಣಿಕರು ಮಾಸ್ಕ್ ಹಾಗೂ ಕೈಗವಸು ಧರಿಸುವುದು ಕಡ್ಡಾಯ

* 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊರತು ಪಡಿಸಿ ಎಲ್ಲರೂ ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್‌ ಹೊಂದಿರಬೇಕು. ಸರ್ಕಾರದ ಸಂಪರ್ಕ ಪತ್ತೆ ಹಚ್ಚುವಿಕೆ ಆ್ಯಪ್‌ ಹೊಂದಿರದಿದ್ದರೆ, ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ.

* ಎಲ್ಲರೂ ಥರ್ಮಲ್‌ ಸ್ಕ್ರೀ‌ನ್‌ ಮೂಲಕ ತಪಾಸಣೆಗೆ ಒಳಗಾಗುವುದು ಕಡ್ಡಾಯ.

* ವಿಶೇಷ ಪರಿಸ್ಥಿತಿಗಳನ್ನು ಹೊರತು ಪಡಿಸಿ, ಟ್ರಾಲಿಗಳ ಬಳಕೆಗೆ ಅವಕಾಶವಿಲ್ಲ. ಬಳಸುವ ಟ್ರಾಲಿಗಳ ಸೋಂಕು ನಿವಾರಕಗೊಳಿಸಿರಬೇಕು.

* ವಿಮಾನ ನಿಲ್ದಾಣಗಳಿಗೆ ತಲುಪಲು ಪ್ರಯಾಣಿಕರು ಹಾಗೂ ವಿಮಾನಯಾನ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಹಾಗೂ ಆಡಳಿತ ಸಾರ್ವಜನಿಕ ಸಾರಿಗೆ, ಖಾಸಗಿ ಟ್ಯಾಕ್ಸಿಗಳ ವ್ಯವಸ್ಥೆ ಕಲ್ಪಿಸಬೇಕು.

* ಖಾಸಗಿ ವಾಹನಗಳು ಅಥವಾ ಆಯ್ಕೆ ಮಾಡಿದ ಕ್ಯಾಬ್‌ ಸೇವೆಗಳ ಮೂಲಕ ಮಾತ್ರವೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗಲು ಅವಕಾಶ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ, ಮೇ 25ರಿಂದ ನಾಗರಿಕ ವಿಮಾನಯಾನ ಸೇವೆಗಳು ಆರಂಭವಾಗಲಿವೆ ಎಂದು ಟ್ವೀಟ್‌ ಮಾಡಿದ್ದರು. ಮಧ್ಯದ ಸೀಟ್‌ಗಳನ್ನು ಖಾಲಿ ಬಿಡುವುದು ಕಾರ್ಯಸಾಧ್ಯವಾಗುವುದಿಲ್ಲ. ಅದರಿಂದ ಟಿಕೆಟ್‌ ಬೆಲೆ ಏರಿಕೆಯಾಗುತ್ತದೆ ಎಂದಿದ್ದಾರೆ. 

ಕೊರೊನಾ ವೈರಸ್‌ ಸೋಂಕು ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಮಾರ್ಚ್‌ ಕೊನೆಯ ವಾರದಲ್ಲಿ ನಾಗರಿಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಇದೀಗ ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾಚರಣೆ ಆರಂಭಿಸಲು ಸಜ್ಜಾಗುತ್ತಿವೆ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮನುಷ್ಯ ಸಂಪರ್ಕವಿಲ್ಲದ ರೀತಿಯಲ್ಲಿ ಭದ್ರತಾ ತಪಾಸಣೆ ವ್ಯವಸ್ಥೆ ಮಾಡಲಾಗುತ್ತಿದೆ ಹಾಗೂ ಆಹಾರ ದೊರೆಯುವ ಸ್ಥಳಗಳಲ್ಲಿಯೂ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ. 

ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವ ಕಾರುಗಳಿಗೆ ಸ್ಟಿಕ್ಕರ್‌ ವ್ಯವಸ್ಥೆ ನೀಡುವ ಕುರಿತು ಕ್ಯಾಬ್‌ ಸೇವಾಧಾರ ಕಂಪನಿಗಳೊಂದಿಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ವಾಹನವನ್ನು ಸೋಂಕು ನಿವಾರಕಗೊಳಿಸುವುದು ಹಾಗೂ ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧವಿರುವುದನ್ನು ಸ್ಟಿಕ್ಕರ್‌ಗಳ ಮೂಲಕ ಸೂಚಿಸುವ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತಿದೆ. 

ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸುವ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. 

ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ವಿಮಾನಗಳು, ಆರೋಗ್ಯ ತುರ್ತು ಸೇವೆಗಳು ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನಗಳ ಹಾರಾಟ ಕಾರ್ಯಾಚರಣೆಗಳು ಲಾಕ್‌ಡೌನ್‌ ಅವಧಿಯಲ್ಲೂ ನಡೆದಿದೆ. 

ನಾಗರಿಕ ವಿಮಾನ ಸಚಿವಾಲಯದಿಂದ ಪ್ರಯಾಣಿಕರ ಮಾರ್ಗಸೂಚಿ ಇನ್ನೂ ಪ್ರಕಟಗೊಂಡಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು