ಬುಧವಾರ, ಜನವರಿ 22, 2020
19 °C

ಬಿತ್ತನೆ ಬೀಜ ಮಸೂದೆ: ನಿರೀಕ್ಷೆ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿರ್ಬಂಧ ಹೇರುವ, ‘ಬಿತ್ತನೆ ಬೀಜಗಳ ಮಸೂದೆ–2019’ನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ. ಕರಡು ಮಸೂದೆಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದ ಕೇಂದ್ರ ಕೃಷಿ ಸಚಿವಾಲಯವು, ಸಾರ್ವಜನಿಕರ ಆಕ್ಷೇಪವನ್ನು ಆಹ್ವಾನಿಸಿತ್ತು. ಮಸೂದೆಯು ಸಂಸತ್ತಿನಲ್ಲಿ ಮಂಡನೆ ಆಗಬೇಕಿದೆ. ಬಿತ್ತನೆ ಬೀಜಗಳಲ್ಲಿನ ವೈವಿಧ್ಯಕ್ಕೆ ಈ ಸಮೂದೆಯು ಧಕ್ಕೆ ತರಲಿದೆ ಮತ್ತು ಬಿತ್ತನೆ ಬೀಜ ಕಂಪನಿಗಳ ಏಕಸ್ವಾಮ್ಯತೆಗೆ ದಾರಿಮಾಡಿಕೊಡಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಬೆಲೆ ನಿಯಂತ್ರಣಕ್ಕೆ ಅವಕಾಶವಿಲ್ಲ

ಬಿತ್ತನೆ ಬೀಜಗಳ ಬೆಲೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಎಂಬುದು ರೈತ ಸಮುದಾಯದ ಬೇಡಿಕೆಯಾಗಿತ್ತು. 1966ರ ಬಿತ್ತನೆ ಬೀಜ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ಹೊಸ ಬಿತ್ತನೆ ಬೀಜ ಮಸೂದೆಯಲ್ಲಿ ಬೆಲೆ ನಿಯಂತ್ರಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಈ ಮಸೂದೆಯನ್ನು 2004ರಲ್ಲಿ ರಚಿಸಲಾಯಿತು. ಆನಂತರ ಮಸೂದೆಗೇ ನಾಲ್ಕು ಬಾರಿ ತಿದ್ದುಪಡಿ ತರಲಾಗಿದೆ. ಆದರೆ 2019ರ ಮಸೂದೆಯಲ್ಲೂ ಬಿತ್ತನೆ ಬೀಜದ ಬೆಲೆಯನ್ನು ಸರ್ಕಾರವು ನಿಯಂತ್ರಿಸಲು ಅವಕಾಶವಿಲ್ಲ

* ಕಂಪನಿಗಳು ತಮ್ಮ ಬಿತ್ತನೆ ಬೀಜಗಳಿಗೆ ತಾವೇ ಬೆಲೆಯನ್ನು ನಿಗದಿಪಡಿಸಬಹುದಾಗಿದೆ. ಬೆಲೆಗೆ ಗರಿಷ್ಠ ಮಿತಿ ಇಲ್ಲ

* ತುರ್ತು ಸಂದರ್ಭದಲ್ಲಿ ಮತ್ತು ಬಿತ್ತನೆ ಬೀಜಗಳ ಕೊರತೆ ಉಂಟಾದ ಸಂದರ್ಭದಲ್ಲಿ ಮಾತ್ರ ಸರ್ಕಾರವು ಬೆಲೆಯನ್ನು ನಿಯಂತ್ರಿಸಬಹುದಾಗಿದೆ

ಪರಿಹಾರ: ಕಂಪನಿ ಉತ್ತರದಾಯಿ ಅಲ್ಲ

ಬಿತ್ತನೆ ಬೀಜವು ಮೊಳಕೆ ಒಡೆಯದಿದ್ದಲ್ಲಿ ಮತ್ತು ಬೆಳೆ ಬಂದರೂ, ಕಂಪನಿ ಹೇಳಿದಷ್ಟು ಇಳುವರಿ ಬರದೇ ಇದ್ದಲ್ಲಿ ಬಿತ್ತನೆ ಬೀಜವು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಬಿತ್ತನೆ ಬೀಜದ ಕಂಪನಿಯನ್ನು ಹೊಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ ನೂತನ ಮಸೂದೆಯಲ್ಲಿ ಇದಕ್ಕೆ ಅವಕಾಶ ಇಲ್ಲ

* ಬೆಳೆ ವಿಫಲವಾದಲ್ಲಿ ರೈತನು ಗ್ರಾಹಕ ನ್ಯಾಯಾಲಯಗಳ ಮೊರೆ ಹೋಗಬೇಕು. ಮೊಕದ್ದಮೆ ಹೂಡಿ, ಪರಿಹಾರಕ್ಕೆ ಮನವಿ ಮಾಡಿಕೊಳ್ಳಬೇಕು

* ಕಂಪನಿ ಸೂಚಸಿರುವಂತೆಯೇ ಬಿತ್ತನೆ ಬೀಜವನ್ನು ಸಂಸ್ಕರಿಸಿ, ಬಿತ್ತನೆ ಮಾಡಿದ್ದರೆ ಮಾತ್ರ ರೈತ ಪರಿಹಾರಕ್ಕೆ ಅರ್ಹನಾಗುತ್ತಾನೆ

* ಕಂಪನಿ ನಿಗದಿಪಡಿಸಿದಷ್ಟು ನೀರು, ಗೊಬ್ಬರ, ಔಷಧ ಬಳಕೆ ಮಾಡಿದ್ದರೆ ಮತ್ತು ಕಂಪನಿ ಸೂಚಿಸಿದಂತೆ ಗಿಡಗಳನ್ನು ಆರೈಕೆ ಮಾಡಿದ್ದರೆ ಮಾತ್ರ ರೈತ ಪರಿಹಾರಕ್ಕೆ ಅರ್ಹನಾಗುತ್ತಾನೆ

* ಬಿತ್ತನೆ ಬೀಜಕ್ಕೆ ವ್ಯಯ ಮಾಡಿದ ಹಣವನ್ನು ಮಾತ್ರ ಪರಿಹಾರವಾಗಿ ಕೊಡಲಾಗುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ

* ಬಿತ್ತನೆಗೆ ಮಾಡಿದ ವೆಚ್ಚ, ಗೊಬ್ಬರ, ನೀರು, ಔಷಧದ ವೆಚ್ಚವನ್ನೂ ಪರಿಹಾರವಾಗಿ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟಪಡಿಸಿಲ್ಲ

* ಗಿಡ ಬೆಳೆದು ಇಳುವರಿ ನೀಡುವವರೆಗಿನ ಅವಧಿ ಮತ್ತು ರೈತರ ಶ್ರಮಕ್ಕೂ ಪರಿಹಾರ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟಪಡಿಸಿಲ್ಲ

ಎಲ್ಲರೂ ಮಾರಾಟ ಮಾಡುವಂತಿಲ್ಲ

* ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ಬಿತ್ತನೆ ಬೀಜ ಮಾರಾಟ ಮಾಡುವವರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗುತ್ತದೆ

* ರೈತರು ಸ್ವಬಳಕೆಗೆ ಮತ್ತು ಸಣ್ಣ ಪ್ರಮಾಣದ ಮರಾಟದ ಉದ್ದೇಶದಿಂದ ಬಿತ್ತನೆ ಬೀಜಗಳನ್ನು ಉತ್ಪಾದನೆ, ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ ಮಾಡಬಹುದು

* ರೈತ ಸಹ ಬಿತ್ತನೆ ಬೀಜಗಳನ್ನು ತಮ್ಮ ಸ್ವಂತ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಬೇಕೆಂದರೆ, ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ

* ಮಾರಾಟ ಮಾಡಬೇಕಾದ ಬಿತ್ತನೆ ಬೀಜಗಳನ್ನೂ, ನೋಂದಣಿ ಮಾಡಿಸುವುದು ಕಡ್ಡಾಯ

* ಬಿತ್ತನೆ ಬೀಜಗಳನ್ನು ಮಾರಾಟಕ್ಕೆ ನೋಂದಣಿ ಮಾಡಿಸುವ ಮುನ್ನ ಅವುಗಳ ತಳಿ, ಬೆಳೆ ವಿಧಾನ, ಇಳುವರಿ ಪ್ರಮಾಣ, ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಪ್ರಮಾಣ ಪತ್ರ ಒದಗಿಸಬೇಕು

* ಇದಕ್ಕಾಗಿ ಬೆಳೆ ಬೆಳೆದು, ಸಂಶೋಧನೆ ನಡೆಸಿ ಅದರ ಫಲಿತಾಂಶವನ್ನು ದಾಖಲಿಸುವುದು ಕಡ್ಡಾಯ

ಆಕ್ಷೇಪಗಳು

ಹಲವು ರೈತ ಸಂಘಟನೆಗಳು, ಸ್ವಯಂಸೇವಾ ಸಂಘಟನೆಗಳು ಮತ್ತು ಭಾರತೀಯ ರಾಷ್ಟ್ರೀಯ ಬಿತ್ತನೆ ಬೀಜ ಸಂಘಟನೆಯು ಈ ಮಸೂದೆಗೆ ಆಕ್ಷೇಪ ಸಲ್ಲಿಸಿವೆ

* ಬೆಲೆ ನಿಯಂತ್ರಣಕ್ಕೆ ಅವಕಾಶ ಇಲ್ಲದ ಕಾರಣ, ಬಿತ್ತನೆ ಬೀಜಕ್ಕಾಗಿ ರೈತರು ಭಾರಿ ವೆಚ್ಚ ಮಾಡಬೇಕಾಗುತ್ತದೆ

* ಬೆಳೆ ವಿಫಲವಾದರೆ ರೈತನು ಗ್ರಾಹಕ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಪರಿಹಾರ ದೊರೆಯುವಷ್ಟರಲ್ಲಿ ವಿಳಂಬವಾಗುತ್ತದೆ

* ಕಂಪನಿ ಸೂಚಿಸಿದಂತೆಯೇ ಬಿತ್ತನೆ ಮತ್ತು ಬೆಳೆ ಆರೈಕೆ ಮಾಡಿದರೆ ಮಾತ್ರ ರೈತ ಪರಿಹಾರಕ್ಕೆ ಅರ್ಹನಾಗುತ್ತಾನೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳ ದಾಖಲೆಯನ್ನು ರೈತ ನಿರ್ವಹಣೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮಸೂದೆಯಲ್ಲಿ ಯಾವುದೇ ಮಾರ್ಗಸೂಚಿಯನ್ನು ತೋರಿಸಿಲ್ಲ

* ವಾಣಿಜ್ಯ ಮಾರಾಟದ ಉದ್ದೇಶದಿಂದ ಉತ್ಪಾದಿಸುವ ಬಿತ್ತನೆ ಬೀಜಗಳ ನೋಂದಣಿ ಕಡ್ಡಾಯವಾಗಲಿದೆ. ಬೆಳೆ ವಿಧಾನ, ಇಳುವರಿ, ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಪ್ರಮಾಣಪತ್ರ ಪಡೆಯುವುದೂ ಕಡ್ಡಾಯವಾಗಲಿದೆ. ಸಣ್ಣ ರೈತರಿಂದ ಈ ಪ್ರಕ್ರಿಯೆ ಕಷ್ಟ ಸಾಧ್ಯ

* ರೈತರೇ ಸ್ವಂತ ಬ್ರ್ಯಾಂಡ್‌ನಲ್ಲಿ ಬಿತ್ತನೆ ಬೀಜ ಮಾರಾಟ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಇದು ಜಾಗತಿಕ ಕಂಪನಿಗಳ ಏಕಸ್ವಾಮ್ಯತೆಗೆ ನಾಂದಿಯಾಗಲಿದೆ. ಬಿತ್ತನೆ ಬೀಜಗಳಲ್ಲಿನ ವೈವಿಧ್ಯವೂ ನಾಶವಾಗಲಿದೆ

ಆಧಾರ: ಕೃಷಿ ಸಚಿವಾಲಯ, ಬಿತ್ತನೆ ಬೀಜ ಕರಡು ಮಸೂದೆ–2019, ಭಾರತೀಯ ರಾಷ್ಟ್ರೀಯ ಬಿತ್ತನೆ ಬೀಜ ಸಂಘಟನೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು