ಭಾನುವಾರ, ಸೆಪ್ಟೆಂಬರ್ 26, 2021
28 °C

26 ವರ್ಷಗಳ ನಂತರ ಎಸ್‌ಪಿ–ಬಿಎಸ್‌ಪಿ ಮೈತ್ರಿ: ಗಮನಿಸಬೇಕಾದ ಅಂಶಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ: 26 ವರ್ಷಗಳ ನಂತರ ಕೈಜೋಡಿಸಿರುವ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಮಣಿಸುವ ಗುರಿ ಹೊಂದಿವೆ. 

ಈ ಹಿಂದೆ 1993ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ, ಎರಡೇ ವರ್ಷಗಳಲ್ಲಿ 1995ರಲ್ಲಿ ಲಖನೌದ ಮೀರಾಬಾಯಿ ಮಾರ್ಗ ಅತಿಥಿ ಗೃಹದಲ್ಲಿ ನಡೆದ ಅಹಿತಕರ ಪ್ರಕರಣವೊಂದು ಎರಡೂ ಪಕ್ಷಗಳ ಸಂಬಂಧಕ್ಕೆ ಹುಳಿ ಹಿಂಡಿತು. 

ಮೀರಾಬಾಯಿ ಮಾರ್ಗದ ಸರ್ಕಾರಿ ಅತಿಥಿಗೃಹಕ್ಕೆ ನುಗ್ಗಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮಾಯಾವತಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಕೋಠಡಿಯನ್ನು ಧ್ವಂಸಗೊಳಿಸಿದ್ದರು. ಬಿಎಸ್‌ಪಿ ಶಾಸಕರ ಎದುರೇ ಮಾಯಾವತಿ ಅವರನ್ನು ಥಳಿಸಲಾಗಿತ್ತು.

ಇದನ್ನೂ ಓದಿ: ಎಸ್‌ಪಿ–ಬಿಎಸ್‌ಪಿ ತಲಾ 38 ಸ್ಥಾನಗಳಲ್ಲಿ ಸ್ಪರ್ಧೆ

ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಯಾವತಿ ಆರೋಪ ಮಾಡಿದ ನಂತರ ಎರಡೂ ಪಕ್ಷಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು. ಅವು ಬದ್ಧ ರಾಜಕೀಯ ವಿರೋಧಿಗಳಾದವು. 2018ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆ ವೇಳೆ ಈ ಸಂಬಂಧ ಮತ್ತೆ ಸುಧಾರಿಸಿತು. ರಾಜ್ಯಸಭೆ ಚುನಾವಣೆಯಲ್ಲೂ ಮುಂದುವರಿತು. ನಂತರದ ದಿನಗಳಲ್ಲಿ ಮತ್ತಷ್ಟು ಗಟ್ಟಿಗೊಂಡಿತು.‌

ವೈಷಮ್ಯ ಮರೆತು ಒಂದಾಗಿರುವ ಎರಡೂ ಪಕ್ಷಗಳು: ಗಮನಿಸಬೇಕಾದ ಅಂಶಗಳು

* ಎರಡೂ ಪಕ್ಷಗಳ ನಾಯಕರ ಸ್ವಹಿತಾಸಕ್ತಿ ಘರ್ಷಣೆ ಉಂಟುಮಾಡುವ ಸಾಧ್ಯತೆ ಇದ್ದು, ಕೊನೆಗೆ ಇದೇ ಸಮಸ್ಯೆ ಉಂಟುಮಾಡಲಿದೆ.  ಎರಡೂ ಪಕ್ಷಗಳ ವೋಟ್‌ ಬ್ಯಾಂಕ್‌ ಗುರಿ ಒಂದೇ ಆಗಿದೆ. ಬಿಎಸ್‌ಪಿಗೆ ದಲಿತ ವರ್ಗಗಳ ಬೆಂಬಲವಿದೆ. ಇನ್ನೂ ಎಸ್‌ಪಿಗೆ ಹಿಂದುಳಿದ ವರ್ಗಗಳು ಬೆನ್ನೆಲುಬಾಗಿವೆ. ಹೀಗಾಗಿ ಈ ಎರಡೂ ಪಕ್ಷಗಳೂ ಈಗ ಮುಸ್ಲಿಂ, ಹಿಂದುಳಿದ ವರ್ಗಗಳು ಮತ್ತು ಇತರೆ ಸಣ್ಣ ಜಾತಿಗಳನ್ನು ಸೆಳೆಯುವ ಯತ್ನ ಮಾಡುತ್ತಿವೆ.

* ಎರಡೂ ಪಕ್ಷಗಳೂ ಪರಸ್ಪರ ರಾಜಕೀಯ ಅವಕಾಶ ಬಿಟ್ಟುಕೊಡುವ ಬಗ್ಗೆ ಆತಂಕ ಹೊಂದಿವೆ. ಲೋಕಸಭೆ ಚುನಾವಣೆಗೆ ಒಂದಾಗಿದ್ದರೂ, ಭವಿಷ್ಯದಲ್ಲಿ ಈಗಿನ ಸ್ನೇಹ–ವೈರತ್ವಕ್ಕೆ ತಿರುಗಿದಾಗ ಸ್ವತಂತ್ರವಾಗಿ ಸ್ಪರ್ಧಿಸಲು ಶಕ್ತವಾಗಿರಬೇಕೆಂದೇ ಎರಡೂ ಪಕ್ಷಗಳು ಬಯಸುತ್ತವೆ.

* ಬಿಎಸ್‌ಪಿ ನಾಯಕಿ ಮಾಯಾವತಿ ಚತುರ ರಾಜಕಾರಣಿ. ಈ ಮೈತ್ರಿಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಅವರಿಗೆ ತಿಳಿಸಿದೆ. ಉದಾಹರಣೆಗೆ, 1995 ಎಸ್‌ಪಿಯೊಂದಿಗಿನ ಮೈತ್ರಿಯಿಂದ ಹೊರಬಂದು, ಬಿಜೆಪಿ ಜೊತೆ ಸೇರಿ ಮೊದಲ ದಲಿತ ಮುಖ್ಯಮಂತ್ರಿಯಾದರು. ಇತ್ತೀಚೆಗಷ್ಟೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ ಕೆಲ ದಿನಗಳಲ್ಲಿಯೇ, ಬೆಂಬಲ ಹಿಂಪಡೆಯುವ ಬೆದರಿಕೆಯೊಡ್ಡಿ ಬಿಜೆಪಿ ಸರ್ಕಾರ ದಲಿತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯುವುದರಲ್ಲಿ ಯಶಸ್ವಿಯಾದರು.

* ಬಿಎಸ್‌ಪಿ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ತಲೆದೋರಬಹುದಾದ ಸವಾಲುಗಳನ್ನು ಎದುರಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸಿದ್ಧರಾಗಿರಬೇಕು. ಜೊತೆಗೆ, ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವ್‌ಪಾಲ್‌ ಸಿಂಗ್‌ ಯಾದವ್‌ ಇಲ್ಲಿ ಉಂಟಾವ ಸಮಸ್ಯೆಯ ಲಾಭ ಪಡೆಯಲು ತುದಿಗಾಲಿನಲ್ಲಿದ್ದು, ಅತೃಪ್ತ ನಾಯಕರನ್ನು ತಮ್ಮತ್ತ ಸೆಳೆದುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು