ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಹಿಂಸೆಗೆ ತಿರುಗಿದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ,3 ಬಸ್ಸಿಗೆ ಬೆಂಕಿ

ಭಾನುವಾರ ಪ್ರತಿಭಟನೆಗಿಳಿದ ಜಾಮಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳು
Last Updated 15 ಡಿಸೆಂಬರ್ 2019, 15:46 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ರಾಜಧಾನಿ ದೆಹಲಿಯಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರ ಸಂಜೆ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆತಿರುಗಿತು.ಪರಿಣಾಮ ಮೂರು ಬಸ್ಸುಗಳು, ನೂರಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಬೆಂಕಿಗೆ ಅಹುತಿಯಾಗಿ ಮೂವರು ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದಾರೆ. ಕಲ್ಲು ತೂರಾಟದಲ್ಲಿಇಬ್ಬರುಅಗ್ನಿಶಾಮಕದಳದ ಸಿಬ್ಬಂದಿ, ಒಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ದೆಹಲಿ ಮೆಟ್ರೋ ರೈಲು ಸಂಚರಿಸುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ, ಮಜೆಂತಾ ಲೈನ್ ಮಾರ್ಗದಲ್ಲಿ ರೈಲು ಸಂಚಾರ ನಿಲ್ಲಿಸಲಾಗಿತ್ತು. ಸುಖದೇವ್ ವಿಹಾರ್ ನಿಲ್ದಾಣ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಒಕ್ಲಾ ವಿಹಾರ್ ಮತ್ತು ಜಸೊಲಾ ವಿಹಾರ್ ಸಹೀನ್ ಭಾಗ್, ಆಶ್ರಮ ನಿಲ್ದಾಣದ ಗೇಟ್ ನಂಬರ್ 3ಅನ್ನು ಮುಚ್ಚಬೇಕಾಯಿತು.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲಾ ಪ್ರತಿಭಟನಾಕಾರರ ಜೊತೆ ಸೇರಿಕೊಂಡರು. ಆಗ ಕಲ್ಲು ತೂರಿ ಬರಲು ಆರಂಭಿಸಿದವು. ಈ ಸಮಯದಲ್ಲಿ ಪೊಲೀಸರು ಕಲ್ಲೇಟು ತಪ್ಪಿಸಿಕೊಂಡು ಪ್ರತಿಭಟನಾಕಾರರ ವಿರುದ್ಧ ಲಾಠಿ ಪ್ರಹಾರ ನಡೆಸಿದರು. ಅಲ್ಲದೆ, ಅಶ್ರುವಾಯು ಸಿಡಿಸಿದರು.

ನೋಡ ನೋಡುತ್ತಿದ್ದಂತೆ ವಿವಿ ಆವರಣ ಪ್ರತಿಭಟನಾಕಾರರು ಹಾಗೂ ಪೊಲೀಸರನಡುವಿನ ಘರ್ಷಣೆಯಿಂದಾಗಿರಣಾಂಗಣವಾಗಿ ಪರಿಣಮಿಸಿತು. ವಿಷಯ ತಿಳಿದ ಕೂಡಲೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದರು.ಮತ್ತೊಂದು ಕಡೆ ಅಪರಿಚಿತರು ಮೂರು ಬಸ್ಸುಗಳಿಗೆ ಬೆಂಕಿ ಹಚ್ಚಿದರು. ಒಂದು ಬಸ್ಸಿನಲ್ಲಿ ಪ್ರಯಾಣಿಕರು ಇದ್ದರೂ ಲೆಕ್ಕಿಸದ ದುಷ್ಕರ್ಮಿಗಳು ಆ ಬಸ್ಸಿಗೇ ಬೆಂಕಿ ಹಚ್ಚಿದರು. ಕೂಡಲೆ ಪ್ರಯಾಣಿಕರು ಒಬ್ಬರ ಮೇಲೊಬ್ಬರು ಬಿದ್ದು ಹೊರಗೆ ಬರಬೇಕಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಾದ ನಂತರ ಪೊಲೀಸರು ವಿವಿಯ ಆವರಣಕ್ಕೆ ನುಗ್ಗಿ ಗ್ರಂಥಾಲಯದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಎಳೆದೊಯ್ದಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದರು.

ವಿವಿಯ ಮುಖ್ಯ ಆಡಳಿತಾಧಿಕಾರಿ ವಸೀಮ್ ಅಹಮದ್ ಖಾನ್ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಕ್ಯಾಂಪಸ್ಸಿನ ಒಳಗೆ ಪ್ರವೇಶಿಸಲು ಯಾರಿಗೂ ಅವಕಾಶ ನೀಡಿಲ್ಲ. ಆದರೂ ಪೊಲೀಸರು ಅಕ್ರಮವಾಗಿ ವಿವಿ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಸಂಜೆ ವಿವಿ ಆಡಳಿತ ಮಂಡಳಿಯಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳುಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಭಾಗಿಯಾಗುವುದನ್ನು ನಾವು ವಿರೋಧಿಸುತ್ತೇವೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಕೆಲ ವಿದ್ಯಾರ್ಥಿನಿಯರ ಜೊತೆ ಕೆಟ್ಟದಾಗಿ ವರ್ತಿಸಿಹಲ್ಲೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಲ ಅಪರಿಚಿತರು ಭಾಗಿಯಾಗಿದ್ದು ತನಿಖೆ ನಡೆಸುವಂತೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಮನವಿ


ಪ್ರತಿಭಟನೆ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಯಾರೊಬ್ಬರೂ ಹಿಂಸಾಚಾರದಲ್ಲಿ ಭಾಗಿಯಾಗುವುದನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜ್ಯಪಾಲರಿಗೆ ಮನವಿ ಮಾಡಿದ್ದು,ಘಟನೆಯಲ್ಲಿ ನಿಜವಾಗಿಯೂ ಭಾಗಿಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT