ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ | ಅರವಿಂದ ಕೇಜ್ರಿವಾಲ್‌ಗೆ ಹೊಸ ಮುಖ ಸುನಿಲ್ ಯಾದವ್ ಸವಾಲು

Last Updated 23 ಜನವರಿ 2020, 9:15 IST
ಅಕ್ಷರ ಗಾತ್ರ
ADVERTISEMENT
""

ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಆಮ್‌ ಆದ್ಮಿ ಪಾರ್ಟಿಯ (ಆಪ್‌) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಬಿಜೆಪಿ ಈ ಬಾರಿ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ದೆಹಲಿ ಘಟಕದ ಯುವ ಮೋರ್ಚಾ ಅಧ್ಯಕ್ಷ ಸುನಿಲ್‌ ಯಾದವ್‌ ಅವರನ್ನು ಕಣಕ್ಕೆ ಇಳಿಸಿದೆ.

2013ರ ಡಿಸೆಂಬರ್‌ 28ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್,49 ದಿನಗಳ ಕಾಲ ಆಡಳಿತ ನಡೆಸಿದ್ದರು. 2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಆಪ್ ತನ್ನದಾಗಿಸಿಕೊಂಡಿತು. ಕೇಜ್ರಿವಾಲ್ ನಿಚ್ಚಳ ಬಹುಮತದ ಸರ್ಕಾರದ ಚುಕ್ಕಾಣಿ ಹಿಡಿದುಮುಖ್ಯಮಂತ್ರಿಯಾಗಿದ್ದರು. ಒಟ್ಟು 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ‘ಆಪ್‌’ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

ಮುಂದಿನ ತಿಂಗಳ8ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರನ್ನು ಮಣಿಸಲು ‘ಕಮಲ’ ಪಕ್ಷದ ವರಿಷ್ಠರು ಹೊಸ ಮುಖವಾದ ಯುವ ನಾಯಕ ಸುನಿಲ್‌ ಯಾದವ್‌ರನ್ನು ನೆಚ್ಚಿಕೊಂಡಿದ್ದಾರೆ.

ಸಂಘಟನಾ ಚತುರಸುನಿಲ್‌ ಯಾದವ್‌

ಬಿಜೆಪಿ ಯುವ ಮೋರ್ಚಾ ಘಟಕದ ಮಂಡಲ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ಸುನಿಲ್ ಯಾದವ್ ಅವರ ವಯಸ್ಸು44 ವರ್ಷ. ವೃತ್ತಿಯಲ್ಲಿ ವಕೀಲರು. ಸದ್ಯ ಬಿಜೆಪಿ ಯುವ ಮೋರ್ಚಾ ದೆಹಲಿ ಘಟಕದ ಅಧ್ಯಕ್ಷರಾಗಿರುವ ಅವರು ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದವರು. ಪಕ್ಷ ಸಂಘಟನೆಯಲ್ಲಿ ಅವರ ಪರಿಶ್ರಮವನ್ನು ಗುರುತಿಸಿದ ನಾಯಕರು, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿನೇಮಿಸಿದ್ದರು. ಬಳಿಕ ದೆಹಲಿ ವಲಯದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

2013 ಹಾಗೂ 2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸುನಿಲ್‌ ಯಾದವ್‌ಗೆ ಟಿಕೆಟ್‌ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಇನ್ನೊಬ್ಬ ವಕೀಲರಾದ ನೂಪುರ್‌ ಶರ್ಮಾ ಅವರಿಗೆ ಪಕ್ಷದ ಟಿಕೆಟ್‌ ನೀಡಿದ್ದರಿಂದ ಯಾದವ್‌ ಅವರಿಗೆ ಸ್ಪರ್ಧಿಸುವ ಅವಕಾಶ ಲಭಿಸಿರಲಿಲ್ಲ.

ಸುನಿಲ್ ಯಾದವ್

ಪ್ರಭಾವಿ ಎದುರು ಹೊಸಮುಖ

ಅರವಿಂದ ಕೇಜ್ರಿವಾಲ್‌ ಅವರಂತಹ ಪ್ರಭಾವಿ ಜನನಾಯಕನಿಗೆ ಎದುರಾಳಿಯಾಗುವ ಮೂಲಕ ಸುನಿಲ್‌ ಯಾದವ್‌ ಈ ಬಾರಿ ದೇಶದ ಗಮನ ಸೆಳೆದಿದ್ದಾರೆ. ಹಲವು ಜನಪ್ರಿಯ ಯೋಜನೆಗಳ ಮೂಲಕ ಜನಮನ್ನಣೆ ಗಳಿಸಿರುವ ಕೇಜ್ರಿವಾಲ್‌ ಎದುರು ಬಿಜೆಪಿ ಹೊಸ ಮುಖವನ್ನು ಕಣಕ್ಕೆ ಇಳಿಸಿದೆ. ಕಳೆದ ಬಾರಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ರಣತಂತ್ರವನ್ನೂ ರೂಪಿಸುತ್ತಿದೆ.

ನವದೆಹಲಿ (ನ್ಯೂಡೆಲ್ಲಿ) ಕ್ಷೇತ್ರದ ಮೇಲೆ ಸುನಿಲ್‌ ಯಾದವ್‌ ಹಿಡಿತ ಸಾಧಿಸಿದ್ದು, ಈ ಬಾರಿಯ ಚುನಾವಣೆ ಕೇಜ್ರಿವಾಲ್‌ ಅವರ ಪಾಲಿಗೆ ದುಬಾರಿಯಾದರೂ ಆಶ್ಚರ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಸುನಿಲ್‌ ಯಾದವ್‌ ಕ್ರಿಯಾಶೀಲರಾಗಿದ್ದಾರೆ. ಅವರ ಟ್ವಿಟರ್‌ ಖಾತೆಯನ್ನು 16 ಸಾವಿರಕ್ಕೂ ಹೆಚ್ಚು ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಫೇಸ್‌ಬುಕ್‌ ಖಾತೆಯಲ್ಲಿ ಸುಮಾರು ಒಂದು ಲಕ್ಷ ‘ಲೈಕ್‌’ಗಳಿರುವುದು ವಿಶೇಷವಾಗಿದೆ. ಸಾಮಾಜಿಕ ಜಾಲತಾಣಗಳನ್ನೂ ಇವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ.

ಉತ್ತರ ಪ್ರದೇಶ ಮೂಲ

ಸುನಿಲ್‌ ಯಾದವ್‌ ಅವರ ತವರೂರು ಉತ್ತರ ಪ್ರದೇಶದ ಪ್ರತಾಪಗಡ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಹಾಗೂ ಉತ್ತಮ ಉದ್ಯೋಗಾವಕಾಶ ಹುಡುಕಿಕೊಂಡು ಸುನಿಲ್‌ ಅವರ ತಂದೆ ಹಾಗೂ ತಾಯಿ 1980ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ ವಲಸೆ ಬಂದಿದ್ದರು. ಸುನಿಲ್‌ ಯಾದವ್‌ ಅವರು ಉತ್ತರ ಪ್ರದೇಶದಲ್ಲಿ ಹುಟ್ಟಿದ್ದರೂ ಬೆಳೆದಿದ್ದೆಲ್ಲ ನವದೆಹಲಿಯಲ್ಲೇ. ಸಲ್ವಾನ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಶಿಕ್ಷಣ ಪೂರೈಸಿದ ಬಳಿಕ ಅವರು ಕಿರೊರಿ ಮಾಲ್‌ ಕಾಲೇಜಿನಲ್ಲಿ ಓದಿದ್ದರು. ಬಳಿಕ ಮೀರತ್‌ನ ಚೌಧರಿ ಚರಣ್‌ ಸಿಂಗ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು. ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಅವರಿಂದ ಪ್ರಭಾವಿತರಾಗಿದ್ದರು.

ನಾಮಪತ್ರ ಸಲ್ಲಿಸಲು ತೆರಳುತ್ತಿರುವ ಸುನಿಲ್ ಯಾದವ್

ಗಲ್ಲಿ ಹುಡುಗ–ಶ್ರೀಮಂತ ಸಾಮಾನ್ಯ ಮನುಷ್ಯನ ನಡುವಿನ ಸ್ಪರ್ಧೆ

‘ಗಲ್ಲಿ ಹುಡುಗ ಹಾಗೂ ಶ್ರೀಮಂತ ಸಾಮಾನ್ಯ ಮನುಷ್ಯ (ಅಲೈಟ್‌ ಆಮ್‌ ಆದ್ಮಿ) ನಡುವೆ ಹಾಗೂ ಸ್ಥಳೀಯ ಹಾಗೂ ಹೊರಗಿನವರ ನಡುವೆ ಸ್ಪರ್ಧೆ ನಡೆಯುತ್ತಿದೆ. ನಾನು ಇಲ್ಲಿನ ಓಣಿಗಳಲ್ಲಿ ಬೆಳೆದ ಹುಡುಗ. ನಾನು ನವದೆಹಲಿಯ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್‌ ಆಡಿದ್ದೇನೆ. ಕೇಜ್ರಿವಾಲ್‌ ಅವರ ಯೋಚನೆಗಳೇನಿದ್ದರೂ ಶ್ರೀಮಂತರ ಪರವಾಗಿದೆ. ನಾನು ಯುವಕರ ಹಾಗೂ ಇಲ್ಲಿನ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಕೇಜ್ರಿವಾಲ್‌ ಇಲ್ಲಿ ನೆಲೆಸುತ್ತಿಲ್ಲ. ದಿನದ 24 ಗಂಟೆಯೂ ನಾನು ಜನರ ಕೈಗೆ ಸಿಗುತ್ತೇನೆ. ಹೀಗಾಗಿ ಈ ಬಾರಿ ಕೇಜ್ರಿವಾಲ್‌ ಅವರನ್ನು ಸುಲಭವಾಗಿ ಸೋಲಿಸುತ್ತೇನೆ’ ಎಂಬುದು ಸುನಿಲ್‌ ಯಾದವ್‌ ಅವರ ವಿಶ್ವಾಸದ ನುಡಿ.

ಉತ್ತಮ ಕ್ರಿಕೆಟ್‌ ಆಟಗಾರರೂ ಆಗಿದ್ದ ಸುನಿಲ್‌ ಅವರು, ಹಲವು ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಆಟವಾಡಿದ್ದಾರೆ. ಜೊತೆಗೆ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ)ಯ ನಿರ್ದೇಶಕರಾಗಿಯೂ ಸರ್ಕಾರದಿಂದ ನಾಮನಿರ್ದೇಶನ ಹೊಂದಿದ್ದರು.

‘ಇಂದು ಈ ಹಂತಕ್ಕೆ ತಲುಪಲು ನಾನು ಬಹಳಷ್ಟು ಪರಿಶ್ರಮ ಪಟ್ಟಿದ್ದೇನೆ. ಪಕ್ಷದಲ್ಲಿ ತಳಮಟ್ಟದಿಂದ ಕೆಲಸ ಆರಂಭಿಸಿ, ಬ್ಲಾಕ್‌ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಜನ ನನ್ನ ಕೆಲಸವನ್ನು ಗುರುತಿಸಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಒಲವನ್ನು ತೋರಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂಬಸುನಿಲ್‌ ಯಾದವ್‌ ಅವರ ಹೇಳಿಕೆಗಳನ್ನು ಹಿಂದಿ ಪತ್ರಿಕೆಗಳು ವರದಿ ಮಾಡಿವೆ.

ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಕೇಜ್ರಿವಾಲ್‌ ವಿರುದ್ಧ ಕಾಂಗ್ರೆಸ್‌ನಿಂದ ರೊಮೇಶ್‌ ಸಬರವಾಲ್‌ (55) ಸ್ಪರ್ಧಿಸಿದ್ದಾರೆ. ರೊಮೇಶ್‌ ಅವರು ದೆಹಲಿಯ ಎನ್‌ಎಸ್‌ಯುಐ ಮಾಜಿ ಅಧ್ಯಕ್ಷರಾಗಿದ್ದರು.

ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿರುವ ಕೇಜ್ರಿವಾಲ್‌ ಅವರಿಗೆ ಸುನಿಲ್‌ ಯಾದವ್‌ ಅಥವಾ ರೊಮೇಶ್‌ ಸಬರವಾಲ್‌ ಅವರು ಆಘಾತ ನೀಡಲಿದ್ದಾರೆಯೇ ಎಂಬುದಕ್ಕೆ ಫೆಬ್ರುವರಿ 11ರಂದು ಹೊರಬರಲಿರುವ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ವಿನಾಯಕ ಭಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT