ಗುರುವಾರ , ಜೂನ್ 24, 2021
27 °C

‘ನಕ್ಸಲ್‌ ನಂಟು ಪುರಾವೆ ಉಂಟು’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐವರು ಸಾಮಾಜಿಕ ಕಾರ್ಯಕರ್ತರ ಬಂಧನವು ಭಿನ್ನಮತ ಅಥವಾ ಭಿನ್ನ ರಾಜಕೀಯ ಸಿದ್ಧಾಂತವನ್ನು ದಮನ ಮಾಡುವ ಉದ್ದೇಶಕ್ಕಾಗಿ ಮಾಡಿರುವುದಲ್ಲ. ನಿಷೇಧಿತ ಸಂಘಟನೆ ಮತ್ತು ಅದರ ಚಟುವಟಿಕೆಗಳ ಜತೆಗೆ ಅವರು ಹೊಂದಿರುವ ನಂಟಿನ ಕಾರಣಕ್ಕಾಗಿಯೇ ಬಂಧನ ನಡೆದಿದೆ ಎಂದು ಸು‍ಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಭೀಮಾ– ಕೋರೆಗಾಂವ್‌ ಹಿಂಸಾಚಾರದಲ್ಲಿ ನಂಟು ಹೊಂದಿರುವ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಐವರನ್ನು ಬಂಧಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ 2:1 ಬಹುಮತದಲ್ಲಿ ನಿರಾಕರಿಸಿದೆ. ಬಂಧನ ಪ್ರಕರಣವನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂಬ ಕೋರಿಕೆಯನ್ನೂ ತಿರಸ್ಕರಿಸಿದೆ. 

ಸಾಮಾಜಿಕ ಕಾರ್ಯಕರ್ತರಾದ ಕವಿ ವರವರ ರಾವ್‌, ಅರುಣ್‌ ಪೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಮತ್ತು ಗೌತಮ್‌ ನವ್‌ಲೇಖಾ ಅವರನ್ನು ಆಗಸ್ಟ್‌ 29ರಂದು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬಳಿಕ ಇವರನ್ನು ಗೃಹಬಂಧನಕ್ಕೆ ಕಳುಹಿಸಲಾಗಿತ್ತು. ಈಗ ಗೃಹಬಂಧನದ ಅವಧಿಯನ್ನು ಇನ್ನೂ ನಾಲ್ಕು ವಾರ ವಿಸ್ತರಿಸಲಾಗಿದೆ. ಐವರು ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬ ಕೋರಿಕೆಯನ್ನೂ ಪೀಠವು ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದರು. ದೀಪಕ್‌ ಮಿಶ್ರಾ ಮತ್ತು ತಮ್ಮ ಪರವಾಗಿ ಖಾನ್ವಿಲ್ಕರ್‌ ಅವರು ತೀರ್ಪು ಬರೆದಿದ್ದಾರೆ. ಚಂದ್ರಚೂಡ್‌ ಅವರು ಪ್ರತ್ಯೇಕ ತೀರ್ಪು ಬರೆದು, ಉಳಿದ ಇಬ್ಬರು ನ್ಯಾಯಮೂರ್ತಿಗಳಿಗಿಂತ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು