ಮಂಗಳವಾರ, ಏಪ್ರಿಲ್ 7, 2020
19 °C

‘ಮೋದಿ’ ಸಿನಿಮಾ ಬಿಡುಗಡೆಗೆ ತಡೆ: ನಿರ್ಮಾಪಕರ ಮನವಿ ತಿರಸ್ಕರಿಸಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಪ್ರದರ್ಶನವನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ತಡೆ ಹಿಡಿಯುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್‌ ತಿರಸ್ಕರಿಸಿದೆ.

ಪ್ರಧಾನಿ ಮೋದಿ ಅವರ ಜೀವನ ಆಧಾರಿತ ಸಿನಿಮಾದ ನಿರ್ಮಾಪಕ ಸಂದೀಪ್‌ ವಿನೋದ್‌ ಕುಮಾರ್‌ ಸಿಂಗ್‌ ಅವರು ಆಯೋಗದ ವರದಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿ ದೀಪಕ್‌ ಗುಪ್ತಾ ಹಾಗೂ ಸಂಜೀವ್‌ ಖನ್ನಾ ಅವರಿದ್ದ ಪೀಠವು ಅದನ್ನು ವಜಾಮಾಡಿದೆ.

ಚುನಾವಣಾ ಆಯೋಗವು ಸಿನಿಮಾ ವೀಕ್ಷಣೆ ಬಳಿಕ ಸುಪ್ರೀಂಗೆ ಸಲ್ಲಿಸಿದ್ದ ಆರು ಪುಟಗಳ ವರದಿಯಲ್ಲಿ, ‘ಸಿನಿಮಾದಲ್ಲಿ ಪ್ರಧಾನಮಂತ್ರಿ ಪರವಾದ ಅಂಶಗಳಿದ್ದು, ವಿರೋಧ ಪಕ್ಷಗಳ ನಾಯಕರನ್ನು ಲಘುವಾಗಿ ತೋರಿಸಲಾಗಿದೆ’ ಎಂದು ಅಭಿಪ್ರಾಯಪಟ್ಟಿತ್ತು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಅಂಶವುಳ್ಳ ಯಾವುದೇ ಸಿನಿಮಾ/ಬಯೋಪಿಕ್‌ಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಡುಗಡೆ ಮಾಡದಂತೆ ತಡೆ ನೀಡಬೇಕು ಎಂದು ಉಲ್ಲೇಖಿಸಿತ್ತು. ಮಾತ್ರವಲ್ಲದೆ, ಮುಂದಿನ ಆದೇಶ ಬರುವವರೆಗೂ ಸಿನಿಮಾ ಪ್ರದರ್ಶನ ಮಾಡದಂತೆ ನಿರ್ಮಾಪಕರಿಗೂ ನೋಟಿಸ್‌ ಸೂಚಿಸಿತ್ತು.

ವರದಿಯನ್ನು ನಿರಾಕರಿಸಿದ್ದ ನಿರ್ಮಾಪಕ, ಚುನಾವಣಾ ಆಯೋಗವು ಸಿನಿಮಾಗೆ ತಡೆ ನೀಡುವಂತೆ ಸಲ್ಲಿಸಿರುವ ವರದಿಯು ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದರು.

ನಟ ವಿವೇಕ್‌ ಒಬೇರಾಯ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ತಡೆಕೋರಿ ಕಾಂಗ್ರೆಸ್‌ ನಾಯಕ ಅಮನ್‌ ಪಾನ್ವಾರ್‌ ಅವರು ಏಪ್ರಿಲ್‌ 09ರಂದು, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ್ದ ಸುಪ್ರೀಂ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು(ಸಿಬಿಎಫ್‌ಸಿ) ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ಮುನ್ನವೇ ಅದಕ್ಕೆ ತಡೆಕೋರಿ ಅರ್ಜಿ ಸಲ್ಲಿಸಿರುವುದು ‘ಅಕಾಲಿಕ’ ಎಂದು ಉಚ್ಛರಿಸಿತ್ತು.

ಮಾತ್ರವಲ್ಲದೆ, ಸಿನಿಮಾ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಇಲ್ಲವೇ ಎಂಬುದನ್ನು ಚುನಾವಣಾ ಆಯೋಗ ನಿರ್ಧಿರಿಸುತ್ತದೆ ಎಂದು ತಿಳಿಸಿತ್ತು. ಬಳಿಕ ಸಿನಿಮಾ ವೀಕ್ಷಿಸಿ, ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು