ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ, ಕಣ್ಣೂರು, ಸ್ವಿಟ್ಜರ್ಲೆಂಡ್: ತವರು ಭೇಟಿಯ ಪುಳಕದಲ್ಲಿ ಸ್ವಿಸ್ ಸಂಸದ

4ನೇ ವಯಸ್ಸಿನಲ್ಲಿ ದತ್ತು ಪಡೆದಿದ್ದ ಜರ್ಮನ್ ದಂಪತಿ; ಮಗಳಿಗೆ ತಾಯಿ ‘ಅನಸೂಯ’ ಹೆಸರು
Last Updated 1 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ತಿರುವನಂತಪುರ: ನಿಕ್ಲಾಸ್ ಸ್ಯಾಮುಯೆಲ್ ಗುಗ್ಗರ್ (49) ಸ್ವಿಟ್ಜರ್ಲೆಂಡ್ ದೇಶದ ಸಂಸದ. ಇವರಿಗೆ ಕೇರಳ ಎಂದರೆ ಅದೇನೋ ಪುಳಕ. ಇದೇ ಮೊದಲ ಬಾರಿಗೆ ಕೇರಳದ ಕಣ್ಣೂರಿಗೆ ಕುಟುಂಬ ಸಮೇತ ಭೇಟಿ ನೀಡಿ ಅವರು ತವರುಮನೆಯ ಹಿಗ್ಗು ಅನುಭವಿಸಿದರು. ಇದಕ್ಕೆ ಕಾರಣವೂ ಇದೆ.

ನಿಕ್ಲಾಸ್ ಅವರನ್ನುಜರ್ಮನಿಯ ದಂಪತಿ ದತ್ತು ಪಡೆದಾಗ ಅವರ ವಯಸ್ಸು ಕೇವಲ ನಾಲ್ಕು ವರ್ಷ. ಅಲ್ಲಿವರೆಗೆ ಅವರು ಕೇರಳದಲ್ಲಿ ತಮ್ಮ ಬಾಲ್ಯ ಕಳೆದಿದ್ದರು.

1970ರ ಅವಧಿಯಲ್ಲಿ ಕಣ್ಣೂರಿನ ಅನಾಥಾಶ್ರಮದಲ್ಲಿ ತಾವು ಬಾಲ್ಯ ಕಳೆದ ವಿಡಿಯೊ ತುಣುಕುಗಳನ್ನು ನಿಕ್ಲಾಸ್‌ ಅವರು ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ‘ನನ್ನ ಬಾಲ್ಯ ಹೇಗಿತ್ತು ಎಂದು ತಿಳಿಸುವ ಸಲುವಾಗಿ ನನ್ನ ತಂದೆ ಈ ವಿಡಿಯೊ ಚಿತ್ರೀಕರಿಸಿದ್ದರು. ಆರಂಭಿಕ ದಿನಗಳನ್ನು ಕಳೆದ ತನ್ನ ಊರಿನಲ್ಲಿ ನಾನಿಂದು ಇದ್ದೇನೆ’ ಎಂದು ಹೇಳಿದ ನಿಕ್ಲಾಸ್ ಭಾವುಕರಾದರು.

ತಮ್ಮ ತವರು ಜಿಲ್ಲೆಗೆ ಭೇಟಿ ನೀಡಲು ಆಹ್ವಾನ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಿಕ್ಲಾಸ್ ಧನ್ಯವಾದ ಹೇಳಿದರು. ‘ವರ್ಷದ ಆರಂಭದಲ್ಲಿ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದ್ದ ಪಿಣರಾಯಿ ಅವರು ನನಗೆ ಆಹ್ವಾನ ನೀಡಿದ್ದರು. ನನ್ನ ಪತ್ನಿ, ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದೇನೆ’ ಎಂದರು. ಪಿಣರಾಯಿ ಕೂಡ ಕಣ್ಣೂರು ಜಿಲ್ಲೆಯವರು.

ಇವಾಂಜೆಲಿಕಲ್ ಪೀಪಲ್ಸ್ ಪಾರ್ಟಿಯನ್ನು ನಿಕ್ಲಾಸ್ ಅವರು ಪ್ರತಿನಿಧಿಸುತ್ತಿದ್ದಾರೆ. ಪ್ರವಾಸೋದ್ಯಮ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೇರಳ ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಬಾಂಧವ್ಯ ವೃದ್ಧಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಯೋಜನೆಯನ್ನು ಅವರು ಹೊಂದಿದ್ದಾರೆ.

ಉಡುಪಿಯಲ್ಲಿ ಜನನ–ತಾಯಿ ಅನಸೂಯ
ನಿಕ್ಲಾಸ್ ನಂಟು ಕರ್ನಾಟಕದ ಉಡುಪಿಗೂ ಇದೆ. ಅವರು ಹುಟ್ಟಿದ್ದು ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ. ಇವರ ತಾಯಿ ಅನಸೂಯ. ಮಗ ಎಲ್ಲೋ ಒಂದು ಕಡೆ ಚೆನ್ನಾಗಿ ಬದುಕಲಿ ಎಂಬ ಉದ್ದೇಶದಿಂದ ಆಕೆ ಪುತ್ರನನ್ನು ತ್ಯಜಿಸಿದ್ದರು. ಮಗ ತನ್ನನ್ನು ಹುಡುಕಿಕೊಂಡು ಬರಬಾರದು ಎಂದೂ ಬಯಸಿದ್ದರು. ಹೀಗಾಗಿ ನಿಕ್ಲಾಸ್ ಅವರು ನಾಲ್ಕನೇ ವಯಸ್ಸಿನಲ್ಲಿ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ಇಲ್ಲಿಕುನ್ನು ಎಂಬಲ್ಲಿನ ಅನಾಥಾಶ್ರಮ ಸೇರುವಂತಾಯಿತು.

ಫ್ರಿಟ್ಜ್ ಹಾಗೂ ಎಲಿಜಬೆತ್ ಎಂಬ ಜರ್ಮನ್ ದಂಪತಿ ಇಕ್ಲಾಸ್‌ ಅವರನ್ನು ದತ್ತು ಪಡೆದರು. ಫ್ರಿಟ್ಜ್ ಅವರು ತಲಶ್ಶೇರಿಯ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನದಲ್ಲಿ ಆಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆಗಲೇ ಅವರು ಮಗನ ಬಾಲ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಜನ್ಮನೀಡಿದ ತಾಯಿ ಅನಸೂಯ ಅವರ ಹೆಸರನ್ನೇ ನಿಕ್ಲಾಸ್ ತಮ್ಮ ಮಗಳಿಗೆ ಇಡುವ ಮೂಲಕ ಅಮ್ಮನ ನೆನಪನ್ನು ಹಸಿರಾಗಿಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT