ಮತದಾನ ಆರಂಭ: ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ ತೆಲಂಗಾಣ

7

ಮತದಾನ ಆರಂಭ: ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ ತೆಲಂಗಾಣ

Published:
Updated:

ಹೈದರಾಬಾದ್‌: 119 ಸ್ಥಾನಬಲದ ತೆಲಂಗಾಣ ವಿಧಾನಸಭೆಗೆ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಿಗ್ಗೆ ಆರಂಭವಾಗಿದೆ. 13 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಜೆ ನಾಲ್ಕು ಗಂಟೆಗೆ ಮತದಾನ ಪ್ರಕ್ರಿಯೆಯನ್ನು ಆಂತ್ಯಗೊಳಿಸಲು ನಿರ್ಧರಿಸಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಸಂಜೆ ಐದು ಗಂಟೆವರೆಗೂ ಮುಂದುವರಿಯಲಿದೆ.

ಸೆಪ್ಟೆಂಬರ್‌ನಲ್ಲಿ ವಿಧಾನಸಭೆ ವಿಸರ್ಜನೆಗೂ ಮುನ್ನ ಅಧಿಕಾರದಲ್ಲಿದ್ದ ತೆಲಂಗಾಣ ರಾಷ್ಟ ಸಮಿತಿ(ಟಿಆರ್‌ಎಸ್‌) ಕಳೆದ ಚುನಾವಣೆಯಲ್ಲಿ 63 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿರುವುದು ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ಗೆ ಮುಳುವಾಗುವ ಸಾಧ್ಯತೆ ಇದೆ.

ಈ ಬಾರಿ ಚುನಾವಣೆಯಲ್ಲಿ ಟಿಆರ್‌ಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌, ತೆಲುಗು ದೇಶಂ ಪಕ್ಷ(ಟಿಡಿಪಿ) ಮೈತ್ರಿ ಕೂಟಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ತೆಲಂಗಾಣ ಜನ ಸಮಿತಿ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷಗಳೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ರಾಜ್ಯವು ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ.

1,41,56,182 ಪುರುಷರು ಹಾಗೂ 1,39,05,811 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,80,64,864 ಹೆಸರುಗಳು ಮತಪಟ್ಟಿಯಲ್ಲಿವೆ. ಮತದಾನಕ್ಕಾಗಿ 44,415 ಸಾಮಾನ್ಯ ಘಟಕ, 7,557 ಮೀಸಲು ಘಟಕಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 32,016 ನಿಯಂತ್ರಕ ಘಟಕ, 4,432 ಮೀಸಲು ನಿಯಂತ್ರಕ ಘಟಕಗಳನ್ನು ತೆರೆಯಲಾಗಿದ್ದು, ಒಟ್ಟು 37,277 ವಿವಿಪ್ಯಾಟ್‌ (ವಿವಿಪಿಎಟಿ- ವೋಟರ್ ವೈರಿಫೈಡ್ ಪೇಪರ್ ಆಡಿಟ್ ಟ್ರೈಲ್)ಗಳನ್ನು ಅಳವಡಿಸಲಾಗಿದೆ.

ಮಲ್ಕಾಜ್‌ಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು (42) ಸ್ಪರ್ಧಿಗಳು ಕಣಕ್ಕಿಳಿದಿದ್ದರೆ, ಬನ್‌ಸ್ವಾಡದಲ್ಲಿ ಕೇವಲ 6 ಮಂದಿ ಮಾತ್ರವೇ ಸ್ಪರ್ಧಿಸಿದ್ದಾರೆ. ಒಟ್ಟಾರೆ 1,821 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 32,815 ಕೇಂದ್ರಗಳಲ್ಲಿ ಐದು ಜನ ಸಿಬ್ಬಂದಿ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿರುವ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮತ್ತಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಫಲಿತಾಂಶವು ಡಿಸೆಂಬರ್‌ 11ರಂದು ಹೊರಬೀಳಲಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !