ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕೈಹಿಡಿದ ತೆಲಂಗಾಣ ಸರ್ಕಾರ: ಕರ್ನಾಟಕಕ್ಕೂ ಮಾದರಿ ಈ ಪ್ರಯತ್ನ

ರೈತರು ಗ್ರಾಹಕರಿಗೆ ಅನುಕೂಲ
Last Updated 2 ಏಪ್ರಿಲ್ 2020, 15:52 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಗೆ ದೇಶವ್ಯಾಪಿ ವಿಧಿಸಿರುವ ಲಾಕ್‌ಡೌನ್‌ನಿಂದ ರೈತರು ಅನುಭವಿಸಿರುವ ಆರ್ಥಿಕ ಸಂಕಷ್ಟ ಅರ್ಥ ಮಾಡಿಕೊಂಡಿರುವ ತೆಲಂಗಾಣ ಸರ್ಕಾರ, ತುರ್ತಾಗಿ ಅವರ ನೆರವಿಗೆ ಧಾವಿಸಲು ನಿರ್ಧರಿಸಿದೆ. ರೈತರಿಂದ₹ 40 ಸಾವಿರ ಕೋಟಿ ಮೌಲ್ಯದ ಆಹಾರ ಧಾನ್ಯ ಖರೀದಿಸುವುದಾಗಿ ಘೋ‍ಷಿಸಿ, ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದೆ.

ಶೀಘ್ರ ಹಾಳಾಗುವ ಹಣ್ಣು ಮತ್ತು ತರಕಾರಿ ಮಾರಾಟಕ್ಕೂ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಜಿಲ್ಲಾ ಮಟ್ಟದಲ್ಲಿ ಐಪಿಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿಸಿದೆ. ಜಿಲ್ಲಾ ಮಟ್ಟದ ಫೋನ್ ಕಾಲ್ ರೈತು ಬಜಾರ್‌ಗಳನ್ನೂ ಚಾಲ್ತಿಗೆ ತರಲಾಗಿದೆ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಸರಕು ಸಾಗಣೆ ವಾಹನಗಳಿಗೆ ಪರ್ಮಿಟ್ ನೀಡುವ ಮತ್ತು ರೈತರು-ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ದುಡಿಯುತ್ತಿದ್ದಾರೆ.

ಹಣ್ಣು ಮತ್ತು ತರಕಾರಿಗಳಿಗೆ ಸರ್ಕಾರ ಬೆಲೆ ನಿಗದಿಪಡಿಸುತ್ತದೆ. ಗ್ರಾಹಕರು ತಮ್ಮ ಬೇಡಿಕೆಯನ್ನು ಕಾಲ್‌ ಸೆಂಟರ್‌ಗೆ ದಾಖಲಿಸುತ್ತಾರೆ. ಅನಂತರ ರೈತರು ನೇರವಾಗಿ ಗ್ರಾಹಕರ ಮನೆಗಳಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸುತ್ತಾರೆ. ತುರ್ತಾಗಿ ಹಾಳಾಗುವ ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಈ ಮೂಲಕ ಸರ್ಕಾರ ನೆರವಾಗುತ್ತಿದೆ.

ಮಾರುಕಟ್ಟೆ ಸಮಸ್ಯೆಯಿದ್ದರೆ ಕಾಲ್‌ ಸೆಂಟರ್‌ಗೆ ದೂರು ನೀಡಬೇಕು. ಯಾವುದೇ ಕಾರಣಕ್ಕೂ ಬೆಳೆ ಹಾಳು ಮಾಡಬಾರದು ಎಂದು ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಹೈದರಾಬಾದ್‌ನಲ್ಲಿ ಹಸಿಮೆಣಸಿನಕಾಯಿ ಮೂಟೆ ಸಾಗಿಸುತ್ತಿರುವ ಮಾಸ್ಕ್‌ ಧಾರಿ ಹಮಾಲಿ

'ನಮ್ಮ ಸರ್ಕಾರವೂ ಏನಾದರೂ ಮಾಡಬೇಕು'

'ರೈತರ ಕೈಹಿಡಿಯಲುತೆಲಂಗಾಣ ಸರ್ಕಾರ ಶ್ಲಾಘನೀಯ ಪ್ರಯತ್ನ ಮಾಡುತ್ತಿದೆ. ಅದು ಕರ್ನಾಟಕಕ್ಕೂ ಮಾದರಿ. ನಮ್ಮ ಸಚಿವರು ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಶೀಘ್ರ ಹಾಳಾಗುವ ತೋಟಗಾರಿಕೆ ಉತ್ಪನ್ನಗಳ ಮಾರಾಟದ ಬಗ್ಗೆ ನಮ್ಮ ಸರ್ಕಾರವೂ ಏನಾದರೂ ಮಾಡಬೇಕು' ಎಂದು ಒತ್ತಾಯಿಸುತ್ತಾರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹಲವು ಸಮಾಜ ಸೇವೆ ಚಟುವಟಿಕೆ ಮಾಡುತ್ತಿರುವ ಸ.ರಘುನಾಥ.

'ತೆಲಂಗಾಣದಲ್ಲಿ ರೈತರು ತಮ್ಮ ಉತ್ಪನ್ನ ಮಾರಾಟಕ್ಕೆ ಕಾಲ್ ಸೆಂಟರ್‌ ಮೂಲಕವೇ ಪರ್ಮಿಟ್‌ಗೂ ವಿನಂತಿ ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳನ್ನು ಖಾತ್ರಿಪಡಿಸಿದ ತಕ್ಷಣ ಪರ್ಮಿಟ್ ವಿತರಣೆಗೆ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಾಕೃಷಿ ಉತ್ಪನ್ನ ಸಾಗಿಸುವ ರೈತರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ' ಎಂದು ಅವರು ವಿವರಿಸಿದರು.

'ಹಳ್ಳಿಗಳಲ್ಲಿ ಸಕ್ರಿಯವಾಗಿರುವ ರೈತು ಸಮಿತಿಯಿಂದ ಆಹಾರ ದಾನ್ಯಗಳ ಖರೀದಿಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಮಾರುಕಟ್ಟೆ ಬೆಲೆಯನ್ನೇ ಕೊಡುತ್ತಿದ್ದಾರೆ. ತೋಟಗಾರಿಕೆ ಉತ್ಪನ್ನಗಳ್ನು ಸರ್ಕಾರ ಖರೀದಿಸುತ್ತಿಲ್ಲ. ಆದರೆ ಸುರಕ್ಷಿತ ರೀತಿಯಲ್ಲಿಗ್ರಾಹಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿದೆ. ತೆಲಂಗಾಣಕ್ಕೆಯಾವುದೇ ರಾಜ್ಯದಿಂದ ತೋಟಗಾರಿಕೆ ಉತ್ಪನ್ನ ಬರಬಹುದು, ನಾವೂ ಸಹ ಯಾವುದೇ ರಾಜ್ಯಕ್ಕೆ ಹಣ್ಣು-ತರಕಾರಿ ಕಳಿಸಬಹುದಾಗಿದೆ. ಕರ್ನಾಟಕದಿಂದ ಇಂದು (ಗುರುವಾರ) ಸಾಕಷ್ಟು ಟೊಮೆಟೊ ಲಾರಿಗಳು ಹೈದರಾಬಾದ್‌ಗೆ ಬಂದವು' ಎಂದು ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ರೈತಪರ ಹೋರಾಟಗಾರ ಎಂ.ಶ್ರೀಹರಿ ಹೈದರಾಬಾದ್‌ನಿಂದ ಪ್ರತಿಕ್ರಿಯಿಸಿದರು.

'ಲಾಕ್‌ಡೌನ್ ಆರಂಭವಾಗುವ ಮೊದಲೇ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಕುಸಿದಿತ್ತು. ಪಕ್ಕದ ಆಂಧ್ರ ಮತ್ತು ತೆಲಂಗಾಣದಲ್ಲಿಯೂ ಟೊಮೆಟೊ ಫಸಲು ಚೆನ್ನಾಗಿದೆ. ನಾವು ಉತ್ತರ ಭಾರತಕ್ಕೆ ಸರಕು ಕಳಿಸಲು ಸಾಧ್ಯವಾದರೆ ಮಾತ್ರ ತಕ್ಕಷ್ಟು ಬೆಲೆ ಸಿಗಬಲ್ಲದು' ಎನ್ನುವುದು ಶ್ರೀನಿವಾಸಪುರ ತಾಲ್ಲೂಕು ಯಲ್ದೂರಿನ ರೈತಮೋಹನ್ ಅವರ ಅಭಿಪ್ರಾಯ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT