ಸೋಮವಾರ, ಫೆಬ್ರವರಿ 17, 2020
15 °C

’ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಕೊಲೆ; ತನಿಖೆ ದಿಕ್ಕು ತಪ್ಪಿಸಲು ಶವವನ್ನು ಹೂತರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಾಗಪುರ: ಕಳೆದ ಡಿಸೆಂಬರ್‌ನಲ್ಲಿ 32 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಅಪರಾಧ ಬೆಳಕಿಗೆ ಬಾರದಂತೆ ತಡೆಯಲು ಶವವನ್ನು ಹೂತು ಹಾಕಿದ್ದ ಮೂವರು ಆರೋಪಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹಲ್ದಿರಾಮ್ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಂಕಜ್ ದಿಲೀಪ್ ಗಿರ್ಮಾಂಕರ್ ಎಂಬಾತನನ್ನು ಆರೋಪಿಗಳು ಹತ್ಯೆ ಮಾಡಿದ್ದರು. 2015ರಲ್ಲಿ ತೆರೆಕಂಡ ಅಜಯ್ ದೇವಗನ್ ನಟನೆಯ ದೃಶ್ಯಂ ಚಿತ್ರದ ಮಾದರಿಯಲ್ಲಿ ಆರೋಪಿಗಳು ನಾಗಪುರದ ಕಾಪ್ಸಿ ಪ್ರದೇಶದಲ್ಲಿದ್ದ ಡಾಬಾದ ಹಿಂದೆ ಆತನನ್ನು ಸಮಾಧಿ ಮಾಡಿ ಮೋಟಾರ್ ಸೈಕಲ್‌ ಅನ್ನು ಸುಟ್ಟು ಹಾಕಿದ್ದರು.

ಡಾಬಾದ ಮಾಲೀಕನಾಗಿದ್ದ ಪ್ರಕರಣದ ಪ್ರಮುಖ ಆರೋಪಿ 24 ವರ್ಷದ ಅಮರ್ಸಿಂಗ್ ಲಲ್ಲು ಜೋಗೇಂದ್ರಸಿಂಗ್ ಠಾಕೂರ್, ಗಿರ್ಮಾಂಕರ್ ಅವರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮೀಷನರ್ ನಿಲೇಶ್ ಭರ್ನೆ ತಿಳಿಸಿದ್ದಾರೆ.

ಠಾಕೂರ್‌ನಿಂದ ತನ್ನ ಪತ್ನಿಯನ್ನು ದೂರವಿಡಲೆಂದು ಕಳೆದ ಡಿಸೆಂಬರ್  28ರಂದು ಗಿರ್ಮಾಂಕರ್ ತನ್ನ ಕುಟುಂಬವನ್ನು ನೆರೆಯ ವಾರ್ಧಾ ಜಿಲ್ಲೆಗೆ ಸ್ಥಳಾಂತರಿಸಿದ್ದ. ಈ ವೇಳೆ ಡಾಬಾದ ಬಳಿಗೆ ಬಂದಿದ್ದ ಗಿರ್ಮಾಂಕರ್, ತನ್ನ ಪತ್ನಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಬೇಕೆಂದು ಆರೋಪಿಗೆ ಹೇಳಿದ್ದಾನೆ.

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಠಾಕೂರ್, ಸುತ್ತಿಗೆಯಿಂದ ಗಿರ್ಮಾಂಕರ್ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಡಾಬಾದಲ್ಲಿದ್ದ ಅಡುಗೆಯವ ಮತ್ತು ತನ್ನ ಸಹಚರನ ಸಹಾಯದಿಂದ ಸ್ಟೀಲ್ ಡ್ರಂವೊಂದಕ್ಕೆ ಶವವನ್ನು ತುಂಬಿಸಿದ್ದಾನೆ. ಬಳಿಕ ಡಾಬಾದ ಹಿಂದೆಯೇ 10 ಅಡಿ ಆಳದ ಗುಂಡಿ ತೋಡಿ 50 ಕೆ.ಜಿ. ಉಪ್ಪನ್ನು ತುಂಬಿಸಿ  ಅದರೊಳಗೆ ಶವವನ್ನಿಟ್ಟು ಮಣ್ಣಿನಿಂದ ಮುಚ್ಚಿದ್ದಾನೆ. ಸಮಾಧಿಯ ಮೇಲೆಯೇ ಮೋಟಾರ್‌ ಸೈಕಲ್ ಅನ್ನು ಕೂಡ ಸುಟ್ಟು ಹಾಕಿದ್ದಾನೆ ಎಂದು ಭರ್ನೆ ತಿಳಿಸಿದ್ದಾರೆ.

ಸಂತ್ರಸ್ತನ ಮೊಬೈಲ್ ಫೋನ್ ಅನ್ನು ರಾಜಸ್ತಾನಕ್ಕೆ ತೆರಳುತ್ತಿದ್ದ ಟ್ರಕ್ ಮೇಲೆ ಎಸೆದಿದ್ದಾನೆ. ಗಿರ್ಮಾಂಕರ್ ಮನೆಗೆ ಹಿಂತಿರುಗದಿದ್ದರಿಂದ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. 

ತನಿಖೆ ಕೈಗೊಂಡ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯ ಡಾಬಾದಲ್ಲಿ ಅಡುಗೆಯವನಾಗಿದ್ದ ಮನೋಜ್ ಅಲಿಯಾಸ್ ಮುನ್ನಾ ರಾಂಪ್ರವೇಶ್ ತಿವಾರಿ (37) ಮತ್ತು ಮತ್ತೋರ್ವ ಸಹಚರ ಶುಭಂ ಅಲಿಯಾಸ್ ತುಶಾರ್ ರಾಕೇಶ್ ದೊಂಗ್ರಿ (28) ಎಂಬವರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು