ದೆಹಲಿ ಚುನಾವಣೆ: ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ

ನವದೆಹಲಿ: ಆಪ್ ಮತ್ತು ಬಿಜೆಪಿ ಜಿದ್ದಾಜಿದ್ದಿ ಹೋರಾಟದ ಕಾರಣ ದೇಶದ ಗಮನ ಸೆಳೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಮಾಣದ ಅಂಕಿಅಂಶಗಳು ಇದೀಗ ಬಹಿರಂಗಗೊಂಡಿವೆ. ಒಟ್ಟಾರೆ ಮತದಾನದ ಪ್ರಮಾಣ ಕಳೆದ 2015ರ ಚುನಾವಣೆಗಿಂತಲೂ ಕಡಿಮೆಯಾಗಿದೆ. ಆದರೆ ಅಲ್ಪಸಂಖ್ಯಾತರು ಗಣನೀಯ ಪ್ರಮಾಣದಲ್ಲಿರುವ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ನಡೆದ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಒಟ್ಟಾರೆ ಸರಾಸರಿಗಿಂತಲೂ ಹೆಚ್ಚು ದಾಖಲಾಗಿದೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟ ಮತ್ತು ಕಾಯ್ದೆಯನ್ನು ರಾಷ್ಟ್ರೀಯವಾದಕ್ಕೆ ಸಮೀಕರಿಸಿ ಮತಯಾಚಿಸುವ ಬಿಜೆಪಿ ಯತ್ನದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.
ಮುಸ್ಲಿಂ ಸಮುದಾಯದ ಸಂಖ್ಯಾ ಬಾಹುಳ್ಯವಿರುವ ಮುಸ್ತಾಫಾಬಾದ್, ಮಾತಿಯಾ ಮಹಲ್ ಮತ್ತು ಸೀಲಾಂಪುರ್ ಕ್ಷೇತ್ರಗಳಲ್ಲಿ ಒಟ್ಟಾರೆ ಸರಾಸರಿಗಿಂತಲೂ ಹೆಚ್ಚಿನ ಪ್ರಮಾಣದ ಮತದಾನ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳು ಶನಿವಾರ ಸಂಜೆ 5 ಗಂಟೆಗೆ ನೀಡಿದ ಮಾಹಿತಿ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈಶಾನ್ಯ ದೆಹಲಿಯ ಮುಸ್ತಫಾಬಾದ್‌ನಲ್ಲಿ ಶೇ 66.29, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅತಿಹೆಚ್ಚು ಪ್ರತಿಭಟನೆಗಳು ವರದಿಯಾದ ಹಳೇ ದೆಹಲಿಯ ಮಾತಿಯಾ ಮಹಲ್‌ನಲ್ಲಿ ಶೇ 65.62, ಸೀಲಾಂಪುರದಲ್ಲಿ ಶೇ 64.92ರಷ್ಟು ಮತದಾನವಾಗಿದೆ ಎಂದು ಪಿಟಿಐ ವರದಿ ಹೇಳಿದೆ.
ರಾತ್ರಿ 9 ಗಂಟೆಯ ವೇಳೆಗೆ ಬಹಿರಂಗಗೊಂಡ ಚುನಾವಣೆ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿರುವ ‘ಹಿಂದೂಸ್ತಾನ್ ಟೈಮ್ಸ್’ ಸೀಲಾಂಪುರದಲ್ಲಿ ಶೇ 71.4, ಮುಸ್ತಾಫಾಬಾದ್‌ನಲ್ಲಿ ಶೇ 70.56 ಮತ್ತು ಮಾತಿಯಾ ಮಹಲ್‌ನಲ್ಲಿ ಶೇ 70.33ರಷ್ಟು ಮತದಾನವಾಗಿದೆ ಎಂದು ವರದಿ ಪ್ರಕಟಿಸಿದೆ.
ಜಾಫ್ರಾಬಾದ್, ಜಾಮಿಯಾ ನಗರ್, ತುರ್ಕ್‌ಮನ್ ಗೇಟ್ ಮತ್ತು ಶಾಹೀನ್ ಬಾಗ್ ಕ್ಷೇತ್ರಗಳಲ್ಲಿ ಮತಗಟ್ಟೆಗಳ ಎದುರು ಉದ್ದನೆ ಸಾಲುಗಳು ಕಂಡುಬಂದಿದ್ದವು. ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಕ್ಕೆ ಸಮೀಪದ ಮತಗಟ್ಟೆಯಲ್ಲಿ ಮಹಿಳೆಯರು ಗುಂಪುಗುಂಪಾಗಿ ಮತಚಲಾಯಿಸಿದ್ದರು.
ಮತದಾನದ ಪ್ರಮಾಣ ಕಡಿಮೆ
ಕಳೆದ ಬಾರಿಗೆ (2015) ಹೋಲಿಸಿದರೆ ಈ ಬಾರಿಯ ಒಟ್ಟಾರೆ ಮತದಾನದ ಪ್ರಮಾಣ ಶೇ 5.42ರಷ್ಟು ಕಡಿಮೆಯಾಗಿದೆ. ಈ ಬಾರಿ ಒಟ್ಟಾರೆ ಶೇ 61.46ರಷ್ಟು ಮತದಾನವಾಗಿದೆ. 2015ರ ಚುನಾವಣೆಯಲ್ಲಿ ಶೇ 67.47ರಷ್ಟು ಮತದಾನವಾಗಿತ್ತು.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಫೆ.11ಕ್ಕೆ ಪ್ರಕಟವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.