ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸಾ ಮಾರ್ಗದರ್ಶಿ ಸೂತ್ರ ಪರಿಷ್ಕರಣೆ

ಕೆಲ ಪ್ರಯಾಣಿಕರಲ್ಲಿ ಕೋವಿಡ್‌–19 ದೃಢ: ಪ್ರಯಾಣ ಮುಂದೂಡಲು ರೈಲ್ವೆ ಇಲಾಖೆ ಮನವಿ
Last Updated 21 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌), ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಶನಿವಾರ ಪರಿಷ್ಕರಿಸಿದೆ.

ತೀವ್ರ ಸ್ವರೂಪದ ಉಸಿರಾಟ ತೊಂದರೆ, ಜ್ವರ, ಕೆಮ್ಮು ಕಾಣಿಸಿಕೊಂಡಿರುವ ಎಲ್ಲ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಐಸಿಎಂಆರ್‌ ಸೂಚನೆ ನೀಡಿದೆ.ಈ ಲಕ್ಷಣಗಳು ಇಲ್ಲದಿದ್ದರೂ, ಕೋವಿಡ್‌ ಇರುವ ಜನರೊಂದಿಗೆ ಸಂಪರ್ಕದಿಂದ ಬಂದಿರುವ ವ್ಯಕ್ತಿಗಳನ್ನು 5ನೇ ಮತ್ತು 14ನೇ ದಿನ ಪರೀಕ್ಷೆಗೆ ಒಳಪಡಿಸಬೇಕು ಎಂದೂ ಸೂಚಿಸಿದೆ.

ಮನವಿ: ರೈಲುಗಳಲ್ಲಿ ಪ್ರಯಾಣಿಸಿದ ಕೆಲವರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ. ಹೀಗಾಗಿ ಸೋಂಕು ಮತ್ತಷ್ಟು ವ್ಯಾಪಕವಾಗುವುದನ್ನು ತಡೆಯಲು ಪ್ರಯಾಣವನ್ನು ಮುಂದೂಡುವಂತೆ ಭಾರತೀಯ ರೈಲ್ವೆ ಜನರಲ್ಲಿ ಮನವಿ ಮಾಡಿದೆ.

‘ರೈಲುಗಳಲ್ಲಿ ಪ್ರಯಾಣಿಸಿದವರ ಪೈಕಿ 12 ಜನರಲ್ಲಿ ಈ ಮಾರಕ ಸೋಂಕು ಇರುವುದು ತಿಳಿದು ಬಂದಿದೆ. ಇದರಿಂದ ರೈಲಿನಲ್ಲಿ ಪ್ರಯಾಣಿಸುವುದು ಅಪಾಯಕಾರಿ’ ಎಂದು ರೈಲ್ವೆ ಇಲಾಖೆ ಶನಿವಾರ ಟ್ವೀಟ್‌ ಮಾಡಿದೆ.ರೈಲನ್ನು ಹತ್ತುವ ಮೊದಲು ಪ್ರತಿಯೊಬ್ಬ ಪ್ರಯಾಣಿಕರನ್ನು ಪರೀಕ್ಷಿಸುವ ವ್ಯವಸ್ಥೆಯನ್ನು ಕೂಡಲೇ ಅಳವಡಿಸಿಕೊಳ್ಳುವಂತೆ ಎಲ್ಲಾ ವಲಯ ಕಚೇರಿಗಳಿಗೆ ಸೂಚನೆ ನೀಡಿರುವ ರೈಲ್ವೆ, ಈ ಉದ್ದೇಶಕ್ಕಾಗಿ ಆಯಾ ರಾಜ್ಯ ಸರ್ಕಾರಗಳ ನೆರವು ಪಡೆಯುವಂತೆಯೂ ಸೂಚಿಸಿದೆ.

ರೈಲಿನಿಂದ ದಂಪತಿಯನ್ನು ಇಳಿಸಿದ ಅಧಿಕಾರಿಗಳು: ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ಸೂಚನೆಯ ಮೊಹರು ವ್ಯಕ್ತಿಯೊಬ್ಬರ ಕೈ ಮೇಲೆ ಇರುವುದನ್ನು ಸಹ ಪ್ರಯಾಣಿಕರು ಗಮನಿಸಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆ ಕ್ಷಣವೇ ಆ ವ್ಯಕ್ತಿ ಮತ್ತು ಪತ್ನಿಯನ್ನು ರೈಲಿನಿಂದ ಕೆಳಗಿಳಿಸಿದ ಘಟನೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಶನಿವಾರ ನಡೆದಿದೆ.

ಬೆಂಗಳೂರು–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲನ್ನು ಈ ದಂಪತಿ ಸಿಕಂದರಾಬಾದ್‌ನಲ್ಲಿ ಶನಿವಾರ ಬೆಳಿಗ್ಗೆ ಹತ್ತಿದ್ದಾರೆ. ಬೆಳಿಗ್ಗೆ 9.45ರ ಸುಮಾರಿಗೆ ತೆಲಂಗಾಣದ ಕಾಜಿಪೇಟ್‌ ಎಂಬಲ್ಲಿ ಸಹಪ್ರಯಾಣಿಕರೊಬ್ಬರು ಪತಿಯ ಕೈಮೇಲೆ ಮೊಹರು ಇರುವುದನ್ನು ಗಮನಿಸಿದ್ದಾರೆ. ಪತ್ನಿಯ ಕೈಮೇಲೂ ಅಂಥದೇ ಮೊಹರು ಇರುವುದು ಸಹ ಗೊತ್ತಾಗಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕಾಜಿಪೇಟ್‌ದಲ್ಲಿಯೇ ರೈಲನ್ನು ನಿಲ್ಲಿಸಿ, ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು ನಂತರ ಇಡೀ ರೈಲನ್ನು ಶುಚಿಗೊಳಿಸಲು ಕ್ರಮ ಕೈಗೊಂಡರು. ನಂತರ ಬೆಳಿಗ್ಗೆ 11.30ಕ್ಕೆ ರೈಲು ಅಲ್ಲಿಂದ ಹೊರಟಿತು.

ರೈಲ್ವೆ ಟಿಕೆಟ್‌ ನಿಯಮಾವಳಿ ಬದಲು:ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಹಾಗೂ ಪ್ರಯಾಣಿಕರ ಕೊರತೆ ಕಾರಣದಿಂದ ರೈಲ್ವೆ ಇಲಾಖೆ ಮಾರ್ಚ್‌ 21 ರಿಂದ ಏಪ್ರಿಲ್‌ 15ರ ನಡುವೆ 150ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಟಿಕೆಟ್‌ ಹಣ ವಾಪಸಾತಿ ನಿಯಮಾವಳಿಗಳನ್ನು ಬದಲಾಯಿಸಿದೆ. ರದ್ದುಗೊಂಡ ರೈಲುಗಳಲ್ಲಿ ಟಿಕೆಟ್‌ ಕಾಯ್ದರಿಸಿದ್ದ ಪ್ರಯಾಣಿಕರು, 45 ದಿನದೊಳಗಾಗಿ ಕೌಂಟರ್‌ಗೆ ತೆರಳಿ ಹಣ ವಾಪಸ್‌ ಪಡೆಯಬಹುದು. ಈ ಹಿಂದೆ ಮೂರು ಗಂಟೆಯೊಳಗಾಗಿ ಹಣ ಪಡೆಯಬೇಕು ಎಂಬ ನಿಯಮವಿತ್ತು.

ಒಂದು ವೇಳೆ ಪ್ರಯಾಣಿಕರು ಟಿಕೆಟ್‌ ರದ್ದುಗೊಳಿಸಲು ಇಚ್ಛಿಸಿದರೆ, ನಿಲ್ದಾಣದಲ್ಲಿ 30 ದಿನದೊಳಗಾಗಿ ಟಿಡಿಆರ್‌(ಟಿಕೆಟ್‌ ಡೆಪಾಸಿಟ್‌ ರಿಸಿಟ್‌) ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.

ಸ್ಯಾನಿಟೈಸರ್‌ ಗರಿಷ್ಠ ಮಾರಾಟ ದರ ನಿಗದಿ

ಕೇಂದ್ರ ಸರ್ಕಾರವುಸ್ಯಾನಿಟೈಸರ್‌ನ ರಿಟೇಲ್‌ ಮಾರಾಟ ದರ 200 ಎಂಎಲ್‌ ಬಾಟಲ್‌ಗೆ ಗರಿಷ್ಠ ₹100ರಂತೆ ನಿಗದಿಪಡಿಸಿದೆ. ‘ಎರಡು ಪದರಗಳಿರುವ ಸರ್ಜಿಕಲ್‌ ಮಾಸ್ಕ್‌ ಒಂದಕ್ಕೆ ₹ 8 ಹಾಗೂ ಮೂರು ಪದರಗಳಿರುವುದಕ್ಕೆ ₹ 10 ದರ ನಿಗದಿಪಡಿಸಲಾಗಿದೆ. ಜೂನ್‌ 30ರವರೆಗೂ ಇದು ಜಾರಿಯಲ್ಲಿರಲಿದೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್ ತಿಳಿಸಿದ್ದಾರೆ.

‘ಫೇಸ್‌ ಮಾಸ್ಕ್‌ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ ತಯಾರಿಕೆಗೆ ಬಳಕೆಯಾಗುತ್ತಿರುವ ಕಚ್ಚಾ ವಸ್ತುಗಳ ದರದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಈ ದರ ಮಿತಿ ವಿಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT