ನವದೆಹಲಿ: ಪೂರ್ವ ಅನುಮತಿ ಇಲ್ಲದೆ ಭಾರತ ವಿಮಾನ ಸೇವೆ ನಡೆಸುವಂತಿಲ್ಲ ಎಂದು ಅಮೆರಿಕ ನಿರ್ಬಂಧ ಹೇರಿದೆ. ಉಭಯ ದೇಶಗಳ ನಡುವೆ ಅಮೆರಿಕದ ವಿಮಾನಗಳನ್ನು ಕಾರ್ಯನಿರ್ವಹಿಸಲು ಭಾರತ ಅನುಮತಿ ನೀಡದೇ ಇರುವುದಕ್ಕೆ ಪ್ರತೀಕಾರವಾಗಿ ಜುಲೈ 22 ರಿಂದ ಏರ್ ಇಂಡಿಯಾ ವಿಮಾನಗಳಿಗೆ ಅಮೆರಿಕ ಈ ನಿರ್ಬಂಧ ವಿಧಿಸಿದೆ.
ಅಮೆರಿಕದ ವಿಮಾನಗಳ ಕಾರ್ಯಾಚರಣೆಯ ಹಕ್ಕುಗಳಿಗೆ ಭಾರತ ಸರ್ಕಾರ ತಡೆಯೊಡ್ಡಿದೆ ಮತ್ತು ಅಮೆರಿಕದ ವಿಮಾನ ಸೇವೆಗಳಿಗೆ ಸಂಬಂಧಿಸಿದಂತೆ ತಾರತಮ್ಯ ಮತ್ತು ಅನ್ಯಾಯದ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕದ ಸಾರಿಗೆ ಇಲಾಖೆ (ಡಿಒಟಿ) ಸೋಮವಾರ ಪ್ರಕಟಣೆಯೊಂದನ್ನು ಹೊರಡಿಸಿದೆ.
ಅಮೆರಿಕ ವಿಮಾನ ಸಂಸ್ಥೆಗಳ ಚಾರ್ಟರ್ ವಿಮಾನಗಳ ಹಾರಾಟದ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸುವುದಕ್ಕೆ ಭಾರತ ನಿರ್ಬಂಧ ಹೇರಿದೆ ಎಂದು ಹೇಳಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಅಮೆರಿಕ- ಭಾರತ ನಡುವಿನ ಚಾರ್ಟರ್ ವಿಮಾನ ಸೇವೆಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೇರ ಮಾರಾಟ ಮತ್ತು ಇತರ ವಿತರಣೆ ವ್ಯವಸ್ಥೆಗಳನ್ನು ಬಳಸುವುದಕ್ಕೆ ಭಾರತ ಸರ್ಕಾರ ಅಮೆರಿಕ ವಿಮಾನಗಳಿಗೆ ನಿರ್ಬಂಧ ಹೇರಿದೆ.
ಇತ್ತ ಅಮೆರಿಕವು ಭಾರತ- ಅಮೆರಿಕ ನಡುವಿನ ಚಾರ್ಟರ್ ಸೇವೆಗಳಿಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ. ಒಪ್ಪಂದದ ಪ್ರಕಾರ ಪ್ರಯಾಣಿಕರಿಗೆ ಸಂಪೂರ್ಣವಾಗಿ ಸೇವೆ ಒದಗಿಸಲು ಏರ್ ಇಂಡಿಯಾ ಮುಕ್ತವಾಗಿದೆ ಎಂದು ಡಿಒಟಿ ಹೇಳಿದೆ.
ಕೊರೊನಾವೈರಸ್‌ನಿಂದಾಗಿ ಮಾರ್ಚ್ 25ರಂದು ಭಾರತ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಿತ್ತು.
ಲಾಕ್‍ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರುವುದಕ್ಕಾಗಿ ಭಾರತ ಸರ್ಕಾರ ಮೇ 6ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನ ಸೌಕರ್ಯ ಏರ್ಪಡಿಸಿತ್ತು. ಮೇ.18ರಿಂದ ಏರ್ ಇಂಡಿಯಾ ವಿಮಾನ ಸಂಸ್ಥೆಯಚಾರ್ಟರ್ ವಿಮಾನಗಳು ಅಮೆರಿಕ-ಭಾರತ ನಡುವೆ ಹಾರಾಟ ನಡೆಸುತ್ತಿದ್ದು ಉಭಯ ರಾಷ್ಟ್ರಗಳಲ್ಲಿ ವಿಮಾನ ಟಿಕೆಟ್ ದರ ಮಾರಾಟವಾಗಿದೆ.
ಭಾರತ- ಅಮೆರಿಕ ನಡುವಿನ ಪ್ರಯಾಣಕ್ಕೆ ಏರ್ ಇಂಡಿಯಾ ವೆಬ್‌ಸೈಟ್ ಮೂಲಕ ಟಿಕೆಟ್ ಮಾರಾಟವಾಗುತ್ತಿದೆ. ಅದೇ ವೇಳೆ ಅಮೆರಿಕದಿಂದ ಭಾರತಕ್ಕೆ ಬರುವುದಾದರೆ ಪ್ರಯಾಣಿಕರು ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬೇಕಿದೆ.
ಏರ್ ಇಂಡಿಯಾ ಸೇವೆಯಂತೆಯೇ ತಮಗೂಚಾರ್ಟರ್ ವಿಮಾನ ಸೇವೆ ಆರಂಭಿಸಲು ಅವಕಾಶ ನೀಡಿ ಎಂದು 2020 ಮೇ 26ರಂದು ಡೆಲ್ಟಾ ವಿಮಾನ ಸಂಸ್ಥೆ ಭಾರತೀಯ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿತ್ತು. ಆದರೆ ಇಲ್ಲಿಯವರೆಗೆ ಡೆಲ್ಟಾ ವಿಮಾನ ಸಂಸ್ಥೆಗೆ ಅನುಮತಿ ಸಿಕ್ಕಿಲ್ಲ.
ಹೆಚ್ಚುವರಿ ವಿಮಾನ ಸೇವೆಗಳ ಬಗ್ಗೆ ಜೂನ್ 3ರಂದು ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದ್ದು ಅದರಲ್ಲಿ ಜೂನ್ 10- ಜುಲೈ1 ರವರೆಗೆ ಅಮೆರಿಕ-ಭಾರತ ನಡುವೆ 49 ಚಾರ್ಟರ್ ವಿಮಾನ ಸೇವೆಗಳು ಇರುವುದಾಗಿ ಹೇಳಿತ್ತು. ಜೂನ್ 13ರಂದು ಏರ್ ಇಂಡಿಯಾ ಜೂನ್ 20- ಜುಲೈ 3ರ ವರೆಗೆ 10 ಹೆಚ್ಚುವರಿ ವಿಮಾನಗಳು ಹಾರಾಟ ನಿಗದಿ ಪಡಿಸಿರುವುದಾಗಿ ಹೇಳಿತ್ತು ಎಂದು ಡಿಒಟಿ ಹೇಳಿದೆ.
ಮಾರ್ಚ್ 25ರಂದು ವಿಮಾನ ಹಾರಾಟ ರದ್ದು ಮಾಡುವ ಮುನ್ನ ಏರ್ ಇಂಡಿಯಾ ಅಮೆರಿಕದಿಂದ ಪ್ರತಿ ವಾರ 34 ವಿಮಾನ ಸೇವೆ ನಡೆಸಿತ್ತು.
2020 ಜೂನ್ 10- ಜುಲೈ 3ರವರೆಗೆ 59 ವಿಮಾನಗಳ ಸೇವೆ ಇರುವುದಾಗಿ ಹೇಳಿದ್ದು ಏರ್ ಇಂಡಿಯಾ ಈ ಹಿಂದೆ ನಿಗದಿತ ಸೇವೆಗಳಂತೆ ನಿರ್ವಹಿಸಿದ ಕಾರ್ಯಾಚರಣೆಯಲ್ಲಿ ಶೇಕಡಾ 53 ರಷ್ಟು ಚಾರ್ಟರ್ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಡಿಒಟಿ ಉಲ್ಲೇಖಿಸಿದೆ.
ಅಮೆರಿಕ- ಇಂಡಿಯಾ ವಾಯು ಸಾರಿಗೆ ಒಪ್ಪಂದದ ಅಡಿಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಹಕ್ಕುಗಳಿಗೆ ಅನುಗುಣವಾಗಿ ಸೇವೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೀತಿಯ ಅನುಮತಿ ಅಮೆರಿಕದ ವಿಮಾನಗಳಿಗೆ ಇಲ್ಲ. ಹಾಗಾಗಿ ಭಾರತ ಮತ್ತು ಅಮೆರಿಕದ ವಿಮಾನಸೇವೆ ನಡುವೆ ಇದು ಸ್ಪರ್ಧಾತ್ಮಕ ಅನಾನುಕೂಲತೆಯನ್ನು ಸೃಷ್ಟಿಸುತ್ತದೆ.
ಪ್ರಯಾಣಿಕರಿಗೆ ಅಥವಾ ಇತರ ವಿತರಣಾ ವ್ಯವಸ್ಥೆಗಳ ಮೂಲಕ ಟಿಕೆಟ್‌ಗಳನ್ನು ನೇರವಾಗಿ ಮಾರಾಟ ಮಾಡಲು ಭಾರತ ಸರ್ಕಾರವು ಏರ್ ಇಂಡಿಯಾಕ್ಕೆ ಅನುಮತಿ ನೀಡಿದ್ದರೂ, ಅಮೆರಿಕ ಮೂಲದ ವಿಮಾನಗಳಿಗೆ ಈ ರೀತಿ ಅನುಮತಿ ಇಲ್ಲ. ಭಾರತವನ್ನು ಸಂಪರ್ಕಿಸುವ ಚಾರ್ಟರ್ ವಿಮಾನ ಸೇವೆಗಳಿಗೆ ಅನುಮತಿ ಇದ್ದರೂ ಭಾರತಕ್ಕೆ ಇರುವ ಸೌಲಭ್ಯಗಳು ಅಮೆರಿಕದ ವಿಮಾನಗಳಿಗೆ ಇಲ್ಲ ಎಂದು ಜೂನ್ 22ರಂದು ಹೊರಡಿಸಿರುವ ಆದೇಶವನ್ನು ಡಿಒಟಿ ಉಲ್ಲೇಖಿಸಿದೆ.
ಈ ಆದೇಶವು ಜಾರಿಯಾದ ದಿನದಿಂದ 30 ದಿನಗಳವರೆಗೆ ಇದರ ಕಾಲಾವಧಿ ಇದೆ. ಅನುಮತಿ ಲಭಿಸುವವರೆಗೆ ನಾವು ಬೇರೆ ಯಾವುದೇ ಚಾರ್ಟರ್ ವಿಮಾನ ಸೇವೆಗಳನ್ನು ಆರಂಭಿಸುವುದಿಲ್ಲ ಎಂದು ಅಮೆರಿಕ ಸಾರಿಗೆ ಇಲಾಖೆ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.