ಗುರುವಾರ , ಡಿಸೆಂಬರ್ 3, 2020
23 °C
14 ತಿಂಗಳ ಒಳಗೆ ಅಮೆರಿಕ ಸೇನೆ ವಾಪಸ್

ಅಫ್ಗಾನಿಸ್ತಾನದಲ್ಲಿ ಶಾಂತಿಗಾಗಿ ಕ್ರಮ: ತಾಲಿಬಾನ್– ಅಮೆರಿಕ ಒಪ್ಪಂದ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೋಹಾ/ವಾಷಿಂಗ್ಟನ್‌: ಯುದ್ಧಪೀಡಿತ ಅಫ್ಗಾನಿಸ್ತಾನದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ, ಅಮೆರಿಕದ ಅಧಿಕಾರಿಗಳು ಹಾಗೂ ತಾಲಿಬಾನ್‌ ಪ್ರತಿನಿಧಿಗಳು ಶನಿವಾರ ಅಂತಿಮವಾಗಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದದ ಮೊದಲ ಹಂತವಾಗಿ ಅಫ್ಗಾನಿಸ್ತಾನದಲ್ಲಿರುವ ಸುಮಾರು 13 ಸಾವಿರ ಸೇನಾ ಸಿಬ್ಬಂದಿಯನ್ನು 8,600ಕ್ಕೆ ಇಳಿಕೆ ಮಾಡಲು ಅಮೆರಿಕ ಮುಂದಾಗಿದೆ.

‘ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ದಿಢೀರನೆ ಸಾಧ್ಯವಿಲ್ಲ. ಇದಕ್ಕೆ ಕೆಲವು ತಿಂಗಳುಗಳೇ ಬೇಕಾಗಬಹುದು. ಆದರೆ ಇದು ಅಧ್ಯಕ್ಷರ ಉದ್ದೇಶವಾಗಿದೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಒಪ್ಪಂದ ಕುರಿತು ಪ್ರತಿಕ್ರಿಯಿಸಿದ್ದಾರೆ.

ದೋಹಾದಲ್ಲಿನ ಶೆರಟಾನ್ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಒಪ್ಪಂದ ಪ್ರಕ್ರಿಯೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ,  ಕತಾರ್‌ನಲ್ಲಿನ ಭಾರತದ ರಾಯಭಾರಿ ಪಿ.ಕುಮಾರನ್, ಪಾಕಿಸ್ತಾನ, ಇಂಡೊನೇಷ್ಯಾ, ಉಜ್ಬೆಕಿಸ್ತಾನ ಹಾಗೂ ತಜಕಿಸ್ತಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಾತುಕತೆಯಿಂದ ನಿರ್ಧಾರ: ಈ ಒಪ್ಪಂದವನ್ನು ಪೂರ್ವ ಸಮ್ಮತಿಯದ್ದು ಎಂದು ಹೇಳಿರುವ ತಜ್ಞರು, ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ನಿಜವಾದ ಸವಾಲು ಮಾತುಕತೆಯಿಂದ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ತಾಲಿಬಾನ್ ಹಾಗೂ ಅಮೆರಿಕದ ನಡುವಿನ ಸಮ್ಮತಿ ಶಾಂತಿ ಒಪ್ಪಂದ ಅಲ್ಲ ಎನ್ನುವುದನ್ನು ಗಮನಿಸಬೇಕಾದುದು ಮುಖ್ಯ. ಆಫ್ಗನ್‌ ಶಾಂತಿ ಪ್ರಕ್ರಿಯೆಯ ಮೊದಲ ಹಂತದ ಫಲಿತಾಂಶವಾಗಿ ಈ ಬೆಳವಣಿಗೆ ಆಗುತ್ತಿದೆ. ಆಫ್ಗನ್ ಸರ್ಕಾರದ ಜತೆ ತಾಲಿಬಾನ್ ನಾಯಕತ್ವ ಅರ್ಥಪೂರ್ಣ ಮಾತುಕತೆಗೆ ಮುಂದಾಗುವಂತೆ ಮಾಡಲು ಇದು ಅವಶ್ಯವಾಗಿತ್ತು’ ಎಂದು ಇಂಟರ್‌ ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನಲ್ಲಿನ ಅಫ್ಗಾನಿಸ್ತಾನ ಕುರಿತ ಹಿರಿಯ ವಿಶ್ಲೇಷಕ ಆ್ಯಂಡ್ರ್ಯೂ ವಾಕಿನ್ಸ್ ಅಲ್‌ಜಝೀರಾಗೆ ಹೇಳಿದ್ದಾರೆ.

‘ಆಫ್ಗನ್, ತಾಲಿಬಾನ್‌ ಚರ್ಚಿಸಲಿ’
‘ಅಫ್ಗಾನಿಸ್ತಾನದ ಭವಿಷ್ಯದ ಕುರಿತ ಪ್ರಮುಖ ಪ್ರಶ್ನೆಗಳ ಬಗ್ಗೆ ಅಮೆರಿಕ ಹಾಗೂ ತಾಲಿಬಾನ್ ಚರ್ಚೆ ನಡೆಸಬಾರದು. ಬದಲಿಗೆ ಅಫ್ಗನ್ ಸರ್ಕಾರ ಹಾಗೂ ತಾಲಿಬಾನ್ ಸಂಘಟನೆ ತಮ್ಮ ಸಂಧಾನದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕು’ ಎಂದು ವಿಶ್ಲೇಷಕ ಆ್ಯಂಡ್ರ್ಯೂ ವಾಕಿನ್ಸ್ ಹೇಳಿದ್ದಾರೆ.

‘ದಾಳಿಗೆ ಒಂದು ದಿನ ವಿರಾಮ’
ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ಶನಿವಾರ ಇಡೀ ದಿನ ದಾಳಿ ನಡೆಸದೇ ಇರಲು ತಾಲಿಬಾನ್ ಆದೇಶಿಸಿತ್ತು.

‘ಒಪ‍್ಪಂದಕ್ಕೆ ಸಹಿ ಹಾಕುತ್ತಿರುವುದರಿಂದಾಗಿ, ನಮ್ಮ ಜನರು ಸಂಭ್ರಮ ಆಚರಿಸುತ್ತಿದ್ದಾರೆ. ಆದ್ದರಿಂದ ದೇಶದಾದ್ಯಂತ ಸೇನೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ತಾಲಿಬಾನ್ ವಕ್ತಾರ ಝಬಿವುಲ್ಲಾ ಮುಜಾಹಿದ್ ಹೇಳಿದ್ದರು.

ಜಂಟಿ ಘೋಷಣೆ
ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅಮೆರಿಕ ಹಾಗೂ ಆಫ್ಗನ್ ಸರ್ಕಾರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿತ್ತು.

* ಒಪ್ಪಂದಕ್ಕೆ ತಾಲಿಬಾನ್ ಬದ್ಧವಾಗಿದ್ದಲ್ಲಿ, ಅಫ್ಗಾನಿಸ್ತಾನದಲ್ಲಿರುವ ಸೇನಾ ಸಿಬ್ಬಂದಿಯನ್ನು ಅಮೆರಿಕ 14 ತಿಂಗಳ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ವಾಪಸ್ ಕರೆಸಿಕೊಳ್ಳಲಿದೆ.
* ಮೊದಲ ಹಂತದಲ್ಲಿ 135 ದಿನಗಳ ಒಳಗಾಗಿ ಸೇನಾ ಸಿಬ್ಬಂದಿ ಸಂಖ್ಯೆಯನ್ನು 8,600ಕ್ಕೆ ಇಳಿಕೆ ಮಾಡಲಾಗುತ್ತದೆ.
* ಆಫ್ಗನ್‌ ಸರ್ಕಾರ ಮತ್ತು ತಾಲಿಬಾನ್‌ ಮುಖಂಡರಿಂದ ಓಸ್ಲೊದಲ್ಲಿ ಮಾರ್ಚ್‌ 10ರಂದು ಶಾಂತಿ ಮಾತುಕತೆ.

**

18 ವರ್ಷಗಳ ಸಂಘರ್ಷ ಕೊನೆಯಾಗುವ ಸಾಧ್ಯತೆ ಇದೆ. ಅಫ್ಗನ್ ಜನರಿಗೆ ಹೊಸ ಭವಿಷ್ಯದ ಅವಕಾಶ ಇದೆ.
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು