ಶನಿವಾರ, ಮಾರ್ಚ್ 6, 2021
20 °C
ಜಮ್ಮು ಮತ್ತು ಕಾಶ್ಮೀರದಲ್ಲಿ ‘ಸುದ್ದಿ ಬರಗಾಲ’!

ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ಆತಂಕ: ಮನೆಯವರ ಮಾಹಿತಿ, ಸುದ್ದಿಯಿಲ್ಲದೆ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ರದ್ದತಿ ಸಂದರ್ಭ ರಾಜ್ಯದಲ್ಲಿ ಅಂತರ್ಜಾಲ, ದೂರವಾಣಿ ಸಂಪರ್ಕ ಸ್ಥಗಿತ ಮತ್ತು ಸುದ್ದಿ ಪ್ರಸರಣದ ಮೇಲೆ ಹೇರಿರುವ ನಿರ್ಬಂಧ ಇನ್ನೂ ಪೂರ್ತಿಯಾಗಿ ತೆರವಾಗಿಲ್ಲ. ಪರಿಣಾಮವಾಗಿ ಕಾಶ್ಮೀರ ಕಣಿವೆ ಜನರು ದೇಶದ ಇತರೆಡೆ, ವಿದೇಶಗಳಲ್ಲಿ ನೆಲೆಸಿರುವ ತಮ್ಮ ಕುಟುಂಬದವರ ಮಾಹಿತಿ ದೊರೆಯದೆ ಆತಂಕದಲ್ಲೇ ದಿನದೂಡುವಂತಾಗಿದೆ. ಜತೆಗೆ, ಸುದ್ದಿ ಪ್ರಸಾರಕ್ಕೂ ಅಡ್ಡಿಯಾಗಿದೆ.

ಇದನ್ನೂ ಓದಿ: ಸಹಜ ಸ್ಥಿತಿಯತ್ತ ಜಮ್ಮು–ಕಾಶ್ಮೀರ

ನಿಷೇಧಾಜ್ಞೆಯನ್ನು ಸಡಿಲಗೊಳಿಸುವ ಮೂಲಕ ರಾಜ್ಯವು ಸಹಜಸ್ಥಿತಿಗೆ ಮರಳಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಸ್ಥಿರ ಮತ್ತು ಚರ ದೂರವಾಣಿ ಸಂಪರ್ಕ, ಅಂತರ್ಜಾಲ ಸೌಲಭ್ಯ ದೊರೆಯದೆ ಪತ್ರಕರ್ತರು ಪರದಾಡುವಂತಾಗಿದೆ. ಮಾಹಿತಿ, ಸುದ್ದಿ ಲಭ್ಯವಾಗದೇ ಇರುವುದರಿಂದ ಸ್ಥಳೀಯ ಪತ್ರಿಕೆಗಳು ಪುಟಗಳ ಸಂಖ್ಯೆಯನ್ನೇ ಕಡಿಮೆ ಮಾಡಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

‘ಈ ಬಾರಿ ಸ್ಥಿರ ದೂರವಾಣಿ ಸೇವೆಯನ್ನೂ ರದ್ದುಗೊಳಿಸಲಾಗಿದೆ. ಮಾಧ್ಯಮ ಸಿಬ್ಬಂದಿಗೆ ಕರ್ಫ್ಯೂ ಪಾಸ್‌ಗಳನ್ನೂ ನೀಡುತ್ತಿಲ್ಲ. ಕಾಶ್ಮೀರದಲ್ಲಿನ ಸುದ್ದಿ ಹೊರ ಹೋಗದಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಭೇಟಿಯಾಗಲು ಮನವಿ ಮಾಡಿದೆ. ಆದರೆ ಅವರು ನಿರಾಕರಿಸಿದರು’ ಎಂಬ ಕಾಶ್ಮೀರ ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಶ್ಫಾಕ್ ತಾಂತ್ರಿ ಹೇಳಿಕೆಯನ್ನೂ ವರದಿ ಒಳಗೊಂಡಿದೆ.

ಇದನ್ನೂ ಓದಿ: ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು​

ಮಾಧ್ಯಮಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ‘ಭಾರತೀಯ ಪತ್ರಿಕಾ ಮಂಡಳಿ’ ಮತ್ತು ‘ಅಂತರರಾಷ್ಟ್ರೀಯ ಪತ್ರಕರ್ತರ ಸಂಘಟನೆ’ ಬಳಿಯೂ ಇಶ್ಫಾಕ್ ಶನಿವಾರ ಮನವಿ ಮಾಡಿದ್ದರು. ಆದರೆ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಸಿಬ್ಬಂದಿಗೆ ಕಚೇರಿಗೆ ಬರಲು ಸಾಧ್ಯವಾಗದೇ ಇರುವುದು, ಮಾಹಿತಿ ಅಲಭ್ಯತೆ ಕಾರಣಗಳಿಂದಾಗಿ 20 ಪುಟಗಳ ನಮ್ಮ ಪತ್ರಿಕೆಯನ್ನು ನಾಲ್ಕು ಪುಟಗಳಿಗೆ ಕಡಿತಗೊಳಿಸಿದ್ದೇವೆ ಎಂದು ಶ್ರೀನಗರ ಮೂಲದ ಆಂಗ್ಲ ಭಾಷಾ ಪತ್ರಿಕೆ ‘ರೈಸಿಂಗ್ ಕಾಶ್ಮೀರ್’ನ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಮುದ್ರಣ ಮಾಧ್ಯಮಗಳಿಗೆ ಸುದ್ದಿವಾಹಿನಿಗಳನ್ನು ನೋಡಿ ಸುದ್ದಿ ಬರೆದುಕೊಳ್ಳುವಂತಹ ಸ್ಥಿತಿ ಇದೆ ಎಂದು ಕೆಲವು ಪರ್ತಕರ್ತರು ಅಳಲುತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಜಮ್ಮು–ಕಾಶ್ಮೀರದ ಕತ್ತಲೆ ಕರಗಲಿದೆ​

ಮಾಹಿತಿ ದೊರೆಯದೆ ಜನರ ಪರದಾಟ: ಇತರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕುಟುಂಬದವರ ಮಾಹಿತಿ ಪಡೆಯಲೂ ಜನರಿಗೆ ಸಾಧ್ಯವಾಗುತ್ತಿಲ್ಲ. ಕುಟುಂಬದವರನ್ನು ಸಂಪರ್ಕಿಸುವ ಸಲುವಾಗಿ ಜನರು ಸರ್ಕಾರಿ ಕಚೇರಿಗಳಿಗೆ ಧಾವಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ಭಾನುವಾರ ರಾತ್ರಿ ದೂರವಾಣಿ, ಅಂತರ್ಜಾಲ ಸಂಪರ್ಕ ಕಡಿತಗೊಂಡ ಬಳಿಕ ಅನೇಕರು ತೊಂದರೆ ಅನುಭವಿಸಿದ್ದಾರೆ. ಸೋಪೊರ್ ಪ್ರದೇಶದ ನಾಜಿರ್ ಅಹ್ಮದ್ ಎಂಬುವವರು ಚಂಡೀಗಡ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಹೋದರಿಯನ್ನು ಸಂಪರ್ಕಿಸಲಾಗದೆ ಪರದಾಡಿದರು. ದೂರವಾಣಿ ಕರೆ ಮಾಡುವ ಸಲುವಾಗಿ ಮೊದಲು ಅವರು ಬಿಎಸ್‌ಎನ್‌ಎಲ್ ಕಚೇರಿಗೆ ಮಂಗಳವಾರ ತೆರಳಿದ್ದರು. ಆದರೆ ಸರ್ವರ್ ಡೌನ್ ಇದೆ ಎಂದು ಅಧಿಕಾರಿಗಳು ಅವರನ್ನು ಕಳುಹಿಸಿದ್ದರು. ಮರುದಿನ ಅವರು ಶ್ರೀನಗರ ವಿಮಾನ ನಿಲ್ದಾಣಕ್ಕೆ ತೆರಳಿ ಚಂಡೀಗಡಕ್ಕೆ ತೆರಳುವ ವ್ಯಕ್ತಿಯೊಬ್ಬರಿಗೆ ಸಹೋದರಿಯ ಮೊಬೈಲ್ ಸಂಖ್ಯೆ ಕೊಟ್ಟು ಚಂಡೀಗಡ ತಲುಪಿದ ಕೂಡಲೇ ಕರೆ ಮಾಡಿ ವಿಚಾರಿಸುವಂತೆ ಮನವಿ ಮಾಡಿದ್ದರು. ಕೊನೆಗೆ ಶ್ರೀನಗರದ ಬಿಎಸ್‌ಎನ್‌ಎಲ್ ಕಚೇರಿಗೆ ಹಾಗೂ ನಗರದಲ್ಲಿರುವ ಪ್ರಾದೇಶಿಕ ಉಪ ಆಯುಕ್ತರ ಕಚೇರಿಗೆ ತೆರಳಿದರೂ ಅಲ್ಲಿ ಅವರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಕೊನೆಗೆ, ಗುರುವಾರ ಪೊಲೀಸ್ ಅಧಿಕಾರಿಯೊಬ್ಬರ ದೂರವಾಣಿ ಮೂಲಕ ಸಹೋದರಿಯನ್ನು ಸಂಪರ್ಕಿಸುವುದು ಸಾಧ್ಯವಾಯಿತು ಎಂದು ವರದಿ ತಿಳಿಸಿದೆ.

ಈ ಮಧ್ಯೆ, ಸಾರ್ವಜನಿಕರಿಗಾಗಿ 300 ದೂರವಾಣಿ ಬೂತ್‌ಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದ್ದರೂ ಅವು ಯಾವ ಪ್ರದೇಶಗಳಲ್ಲಿ ಇವೆ ಎಂಬ ಮಾಹಿತಿ ಇಲ್ಲ. ‘ಒಂದು ವೇಳೆ ದೂರವಾಣಿ ಬೂತ್‌ಗಳು ಎಲ್ಲಿವೆ ಎಂದು ಗೊತ್ತಾದರೂ ನಾವಲ್ಲಿಗೆ ತೆರಳುವುದು ಹೇಗೆ? ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು ಕರ್ಫ್ಯೂ ಪಾಸ್‌ಗಳನ್ನು ಕೇಳುತ್ತಾರೆ. ನಾವು ಕರ್ಫ್ಯೂ ಪಾಸ್‌ಗಳನ್ನು ಪಡೆದುಕೊಳ್ಳುವುದು ಹೇಗೆ?’ ಎಂದು ಶ್ರೀನಗರದ ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರ ಆಂತರಿಕ ವಿಚಾರವೇ: ಕಾಂಗ್ರೆಸ್‌ಗೆ ಮುಜುಗರ

ದೆಹಲಿಯಲ್ಲಿರುವ ಮಗಳನ್ನು ಸಂಪರ್ಕಿಸಲು ಹಳೆ ಶ್ರೀನಗರದ ಅಲಿ ಮೊಹಮ್ಮದ್ ಮತ್ತು ಅವರ ಪತ್ನಿ ಮೂರು ದಿನ ಕಷ್ಟಪಡಬೇಕಾಯಿತು. ಕೊನೆಗೆ ಸಂಬಂಧಿಕರೊಬ್ಬರ ಸಹಾಯದಿಂದ ಮಗಳಿಗೆ ಸಂದೇಶ ಕಳುಹಿಸುವುದು ಸಾಧ್ಯವಾಯಿತು. ಇದಕ್ಕೆ ಆಕೆ, ದೆಹಲಿಯಿಂದ ಊರಿಗೆ ತೆರಳುವ ಸ್ನೇಹಿತನ ಮೂಲಕ ಪತ್ರ ಕಳುಹಿಸಿ ಪ್ರತಿಕ್ರಿಯೆ ನೀಡಬೇಕಾಯಿತು.

ಸೌದಿ ಅರೇಬಿಯಾದಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲಾಲ್ ಅಹ್ಮದ್ ಎಂಬುವವರು ಸೋಮವಾರ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಬೇಕಾಗಿತ್ತು. ಅವರನ್ನು ಕರೆದೊಯ್ಯಲೆಂದು ನಿಲ್ದಾಣಕ್ಕೆ ಬಂದ ಅವರ ಸಹೋದರ ಇಡೀ ದಿನ ಕಾದರೂ ಅಹ್ಮದ್ ಅವರ ಸುಳಿವಿಲ್ಲ. ಆ ದಿನದ ಕೊನೆಯ ವಿಮಾನ ಬಂದ ಬಳಿಕ ಯಾವುದೇ ಮಾಹಿತಿ ದೊರೆಯದೆ ಬೇಸರದಿಂದಲೇ ಅವರು ಮನೆಗೆ ತೆರಳಿದರು. ಮರುದಿನ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ ಅವರು ಸ್ಯಾಟಲೈಟ್ ದೂರವಾಣಿ ಮೂಲಕ ಬಿಲಾಲ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಕೊನೆಗೆ ದೆಹಲಿಗೆ ತೆರಳಿದ ಸಂಬಂಧಿಯೊಬ್ಬರ ಮೂಲಕ ಬಿಲಾಲ್‌ ಅವರನ್ನು ಸಂಪರ್ಕಿಸುವುದು ಸಾಧ್ಯವಾಯಿತು. ಈ ವೇಳೆ, ಬಿಲಾಲ್ ವಿಮಾನ ಟಿಕೆಟ್‌ ರದ್ದುಗೊಳಿಸಿ ಸೌದಿ ಅರೇಬಿಯಾದಲ್ಲೇ ಉಳಿದಿರುವ ವಿಷಯ ತಿಳಿಯಿತು. ಅಂತರ್ಜಾಲ, ಸ್ಥಿರ–ಚರ ದೂರವಾಣಿ ಸೌಲಭ್ಯ ಸ್ಥಗಿತವಾಗಿರುವುದರಿಂದ ಕಣಿವೆ ರಾಜ್ಯದಲ್ಲಿ ನೂರಾರು ಜನ ಇದೇ ರೀತಿ ಆತಂಕದಿಂದ ದಿನ ಕಳೆಯುವಂತಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಇನ್ನಷ್ಟು...

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?

ಎಲ್ಲ ಪ್ರಶ್ನೆಗೆ ಉತ್ತರಿಸಲು ಸಿದ್ಧ: ಪ್ರತಿಪಕ್ಷಗಳಿಗೆ ಅಮಿತ್‌ ಶಾ

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವ ಮಂಡಿಸಿದ ಅಮಿತ್ ಶಾ​

ಜಮ್ಮು–ಕಾಶ್ಮೀರ: ಸಂವಿಧಾನದ 370ನೇ ವಿಧಿ ತಿದ್ದುಪಡಿ ಬಗ್ಗೆ ರಾಷ್ಟ್ರಪತಿ ಅಧಿಸೂಚನೆ​

ರಾಜ್ಯಸಭೆಯಲ್ಲಿ ಹೈಡ್ರಾಮಾ: ಸಂವಿಧಾನದ ಪ್ರತಿ ಹರಿದುಹಾಕಿದ ಪಿಡಿಪಿ ಸದಸ್ಯರು

ಕಾಶ್ಮೀರ ಮತ್ತು 35ಎ, 370: ಬದಲಾಗುತ್ತಾ ಸ್ಥಿತಿಗತಿ​

ಸಂವಿಧಾನದ 370ನೇ ಕಲಂ ಪ್ರಸ್ತುತತೆ

35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು

‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಸಂವಿಧಾನದ 370ನೇ ವಿಧಿ ತಾತ್ಕಾಲಿಕವಲ್ಲ: ಸುಪ್ರೀಂ ಕೋರ್ಟ್

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗಿ: ಪಾಕಿಸ್ತಾನಕ್ಕೆ ಸೇನೆಯ ಸೂಚನೆ​ 

ಯೋಧರು, ಉಗ್ರರ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪಾಕಿಸ್ತಾನ?

 ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ​

ಸೇನಾ ಕೋಟೆಯಾದ ಶ್ರೀನಗರ: ಆತಂಕ ತೀವ್ರ​​

ಕಾಶ್ಮೀರದಲ್ಲಿ ಉಗ್ರ ದಾಳಿ ಭೀತಿ: ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ

ಇಂದು ಸಂಪುಟ ಸಭೆ ಕಾಶ್ಮೀರ ಬಗ್ಗೆ ನಿರ್ಧಾರ?

ಶ್ರೀನಗರದಲ್ಲಿ ನಿಷೇಧಾಜ್ಞೆ: ಮೆಹಬೂಬಾ ಮುಫ್ತಿಗೆ ಗೃಹ ಬಂಧನ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು