ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ನಾಯಕ ದೊರೈ ಮುರುಗನ್‌ ಮನೆಯಲ್ಲಿ ಐಟಿ ಶೋಧ

Last Updated 30 ಮಾರ್ಚ್ 2019, 4:50 IST
ಅಕ್ಷರ ಗಾತ್ರ

ಚೆನ್ನೈ:ತಮಿಳುನಾಡು ವಿಧಾನಸಭೆ ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ವೆಲ್ಲೋರ್‌ ಜಿಲ‌್ಲೆಯ ಕಟ್ಪಾಡಿಯಲ್ಲಿರುವ ಡಿಎಂಕೆ ನಾಯಕದೊರೈ ಮುರುಗನ್‌ ಅವರ ಮನೆಗೆ ರಾತ್ರಿ ವೇಳೆಬಂದ ಏಳು ಜನ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ತಂಡ ಶೋಧ ಮುಂದುವರಿಸಿದೆ.

‘ನಾಯಕರು ಚುನಾವಣಾ ಪ್ರಚಾರ ಮುಗಿಸಿ ಮನೆಗೆ ಮರಳಿದ ವೇಳೆ ಮೂವರು ಅಧಿಕಾರಿಗಳು ಬಂದಿದ್ದಾರೆ. ವಿಚಾರಿಸಿದಾಗ ತಾವು ಐಟಿ ಅಧಿಕಾರಿಗಳು, ಮನೆಯಲ್ಲಿ ಶೋಧ ನಡೆಸಬೇಕಿದೆ ಎಂದೂ ತಿಳಿಸಿದ್ದಾರೆ. ಅವರು ಆರಕ್ಕೊನಮ್‌ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ನಗದು ವ್ಯವಹಾರದ ಶೋಧ ಕಾರ್ಯಾಚರಣೆ ನಡೆಸುವ ಬಗ್ಗೆ ವಾರಂಟ್‌ ತಂಡಿದ್ದಾರೆ. ಆದರೆ ಇಲ್ಲಿರುವ (ವೆಲ್ಲೋರ್‌ ಜಿಲ್ಲೆಗೆ ಸೇರಿದ) ಮನೆಯಲ್ಲಿ ಶೋಧ ನಡೆಸಲು ಅದು ಅನ್ವಯವಾಗುವುದಿಲ್ಲ’ ಎಂದು ಡಿಎಂಕೆ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಪರಂದಾಮನ್‌ ಹೇಳಿದ್ದಾರೆ.

ಬಳಿಕ ಡಿಎಂಕೆನಾಯಕರು ಹಾಗೂ ಅವರ ಪರ ವಕೀಲರು ಶೋಧ ಕಾರ್ಯಾಚರಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿರೋಧಿಸಿ ಅಸಹಕಾರ ತೋರಿದ್ದಾರೆ. ಹೀಗಾಗಿ ಮೂವರು ಅಧಿಕಾರಿಗಳು ಮನೆಯಿಂದ ಹೊರನಡೆದಿದ್ದಾರೆ. ಕೆಲಹೊತ್ತಿನಲ್ಲೇ ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿಜಯ್‌ ದೀಪನ್‌ ಅವರು ಸ್ಥಳಕ್ಕೆ ಆಗಮಿಸಿದ್ದು, ಎರಡೂ ಗುಂಪಿನ ನಡುವೆ ವಾಗ್ವಾದ ನಡೆದಿದೆ.

‘ಈ ಕಾರ್ಯಾಚರಣೆಯು ರಾಜಕೀಯ ಪ್ರೇರಿತವಾಗಿದ್ದು,ಅಧಿಕಾರಿಗಳು ಕಾನೂನು ಪಾಲಿಸುತ್ತಿಲ್ಲ. ಇದು ನ್ಯಾಯಸಮ್ಮತವಾಗಿ ನಡೆಯುವುದಾದರೆ ನಾವು ಸಹಕಾರ ನೀಡಲು ಸಿದ್ಧ’ ಎಂದು ಪರಂದಾಮನ್‌ ತಿಳಿಸಿದ್ದಾರೆ.

ಕೆಲವುವರದಿಗಳ ಪ್ರಕಾರ, ಐಟಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ರಾತ್ರಿ 10ಗಂಟೆ ವೇಳೆಗೆ ದೊರೈ ಮುರುಗನ್‌ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ದೊರೈ ಮುರುಗನ್‌, ಅವರ ಪುತ್ರ ಹಾಗೂ ವೆಲ್ಲೋರ್‌ಲೋಕಸಭೆ ಕ್ಷೇತ್ರಕ್ಕೆ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೂ ಮನೆಯಲ್ಲಿದ್ದರು. ಕಾರ್ಯಾಚರಣೆ ಆರಂಭವಾದ ಸುಮಾರು ಎರಡು ಗಂಟೆಗಳ ಬಳಿಕ ಮನೆಗೆ ಬಂದ ಡಿಎಂಕೆ ಪಕ್ಷದ ಕಾನೂನು ತಂಡ ಸರ್ಚ್‌ ವಾರಂಟ್‌ ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದೆ. ಇದು ಮುಂದಿನ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT