ಭಾನುವಾರ, ಮಾರ್ಚ್ 29, 2020
19 °C

ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೀಟು ಕಾಯ್ದಿರಿಸಿದ ಲಾರ್ಡ್ ಶಿವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಎರಡು ರಾಜ್ಯಗಳಲ್ಲಿ ಮೂರು ಜ್ಯೋತಿರ್ಲಿಂಗಗಳನ್ನು ಸಂಪರ್ಕಿಸುವ ಕಾಶಿ ‘ಮಹಾಕಾಲ್ ಎಕ್ಸ್‌ಪ್ರೆಸ್‌’ ರೈಲಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಿಂದ ಚಾಲನೆ ನೀಡಿದ್ದು, ಇದೇ ಮೊದಲ ಬಾರಿಗೆ ಶಿವನಿಗಾಗಿ ಸೀಟನ್ನು ಕಾಯ್ದಿರಿಸಲಾಗಿದೆ. 

ರೈಲಿನಲ್ಲಿ 'ಭೋಲೆ ಬಾಬಾ'ನಿಗಾಗಿ ಕಾಯ್ದಿರಿಸಿದ ಆಸನವನ್ನು ಶಾಶ್ವತವಾಗಿ ಉಳಿಸಬೇಕೆ ಎನ್ನುವ ಕುರಿತು ರೈಲ್ವೆ ಅಧಿಕಾರಿಗಳು ಆಲೋಚಿಸುತ್ತಿದ್ದಾರೆ. 

ಲಖನೌ- ನವದೆಹಲಿ ನಡುವಿನ ತೇಜಸ್ ಮತ್ತು ಅಹ್ಮದಾಬಾದ್ - ಮುಂಬೈ ನಡುವಿನ ತೇಜಸ್ ಬಳಿಕ ಐಆರ್‌ಸಿಟಿಸಿ ನಿರ್ವಹಣೆಯ ಮೂರನೇ ಖಾಸಗಿ ರೈಲು ಇದಾಗಿದ್ದು, ಉತ್ತರ ಪ್ರದೇಶದ ವಾರಣಾಸಿಯಿಂದ ಮಧ್ಯಪ್ರದೇಶದ ಇಂದೋರ್‌ವರೆಗೆ ಚಲಿಸಲಿದೆ. 

ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಿ5 ಬೋಗಿಯಲ್ಲಿ 64ನೇ ಸೀಟನ್ನು ಶಿವನಿಗಾಗಿ  ಕಾಯ್ದಿರಿಸಲಾಗಿದೆ ಮತ್ತು ಅದನ್ನು ಖಾಲಿ ಉಳಿಸಲಾಗಿದೆ'. ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳನಿಗಾಗಿ ಈ ಸೀಟನ್ನು ಕಾಯ್ದಿರಿಸಲಾಗಿದೆ ಎಂದು ಜನರಿಗೆ ಅರಿವು ಮೂಡಿಸಲು ಸೀಟಿನ ಮೇಲೆ ದೇವಾಲಯವನ್ನು ಸಹ ರಚಿಸಲಾಗಿದೆ. ಇದನ್ನು ರೈಲಿನಲ್ಲಿ ಶಾಶ್ವತವಾಗಿ ಉಳಿಸಬೇಕೇ ಬೇಡವೇ ಎನ್ನುವ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. 

ವಾರಣಾಸಿಯಿಂದ ಇಂದೋರ್ಗೆ ವಾರದಲ್ಲಿ ಮೂರು ದಿನ ಚಲಿಸುವ 3-ಎಸಿ ರೈಲಿನಲ್ಲಿ ಲಘು ಭಕ್ತಿ ಸಂಗೀತ, ಪ್ರತಿ ಕೋಚ್‌ನಲ್ಲಿ ಮೀಸಲಾದ ಇಬ್ಬರು ಖಾಸಗಿ ಗಾರ್ಡ್‌ಗಳು ಮತ್ತು ಸಸ್ಯಾಹಾರಿ ಊಟ ಈ ರೈಲಿನ ಕೆಲವು ವೈಶಿಷ್ಟ್ಯಗಳಾಗಿವೆ.

ಈ ರೈಲು ಲಖನೌ ಮೂಲಕ ವಾರಣಾಸಿ ಮತ್ತು ಇಂದೋರ್ ನಡುವೆ 1,131 ಕಿ.ಮೀ ಮತ್ತು ಪ್ರಯಾಗ್‌ರಾಜ್ (ಅಲಹಾಬಾದ್) ಮೂಲಕ ವಾರಣಾಸಿ ಮತ್ತು ಇಂದೋರ್ ನಡುವೆ ಸುಮಾರು 19 ಗಂಟೆಗಳಲ್ಲಿ 1,102 ಕಿ.ಮೀ. ಚಲಿಸಲಿದೆ. 

ಐಆರ್‌ಸಿಟಿಸಿಯ ‘ಮಹಾ ಕಾಲ್ ಎಕ್ಸ್‌ಪ್ರೆಸ್‌’ ರೈಲಿಗೆ ವಿಡಿಯೊ ಲಿಂಕ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಈ ರೈಲು ಮೂರು ಯಾತ್ರಾ ಸ್ಥಳಗಳಾದ ಇಂದೋರ್ ಬಳಿಯ ಓಂಕಾರೇಶ್ವರ, ಉಜ್ಜಯಿನಿಯ ಮಹಾಕಾಳೇಶ್ವರ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ್ ಎಂಬ ಮೂರು ಜ್ಯೋತಿರ್ಲಿಂಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು