ಬುಧವಾರ, ಜೂನ್ 3, 2020
27 °C
ರೈತರ ಸಾಲಮನ್ನಾ ಮಾಡುವ ತನಕ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಹೋರಾಟ

ಮೋದಿಗೆ ನೆಮ್ಮದಿಯಿಂದ ನಿದ್ರಿಸಲು ಬಿಡಲ್ಲ: ರಾಹುಲ್ ಗಾಂಧಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ರೈತರ ಸಾಲಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಮ್ಮದಿಯಿಂದ ನಿದ್ರಿಸಲು ಮತ್ತು ವಿರಮಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

ರೈತರ ಸಾಲಮನ್ನಾ ಅಗುವವರೆಗೂ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ವಿರಮಿಸುವುದಿಲ್ಲ ಎಂದು ಘೋಷಿಸಿದರು.

ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಕೇವಲ ಆರು ತಾಸಿನ ಒಳಗಾಗಿ  ರೈತರ ಸಾಲಮನ್ನಾ ಮಾಡಲಾಗಿದೆ. ರಾಜಸ್ಥಾನ ಕೂಡ ಶೀಘ್ರ ಘೋಷಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹತ್ತು ದಿನಗಳ ಒಳಗಾಗಿ ರೈತರ ಸಾಲಮನ್ನಾ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಲಾಗಿತ್ತು. ಅದರಂತೆ ಮಾತನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ ಎಂದರು.

ಮಂಗಳವಾರ ಸಂಸತ್‌ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಮೋದಿ ಸರ್ಕಾರ ಸಾಲಮನ್ನಾ ಮಾಡದಿದ್ದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಆ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರಿಗೆ ರೈತರ ಒಂದೇ ಒಂದು ರೂಪಾಯಿ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗಿಲ್ಲ. ಹೋಗಲಿ, ಈ ದಿಸೆಯಲ್ಲಿ ಅವರು ಕಿಂಚಿತ್ತೂ ಪ್ರಯತ್ನವನ್ನೂ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೇವಲ ತಮ್ಮ ಉದ್ಯಮಿ ಮಿತ್ರ ಸಾಲವನ್ನು ಮನ್ನಾ ಮಾಡಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಉದ್ಯಮಿ ಅನಿಲ್‌ ಅಂಬಾನಿ ಸೇರಿದಂತೆ ದೇಶದ 15 ಶ್ರೀಮಂತ ಉದ್ಯಮಿ ಮಿತ್ರರ ₹3.50 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಇದೊಂದೆ ಅವರ ಮಹತ್ವದ ಸಾಧನೆ ಎಂದು ರಾಹುಲ್‌ ಲೇವಡಿ ಮಾಡಿದರು.  ನೋಟು ರದ್ದು ವಿಶ್ವದ ಅತಿ ದೊಡ್ಡ ಹಗರಣ. ಸಾರ್ವಜನಿಕರು, ಸಣ್ಣ ವರ್ತಕರು ಮತ್ತು ರೈತರ ಹಣವನ್ನು ಕೇಂದ್ರ ಸರ್ಕಾರ ಹಾಡಹಗಲೇ ಲೂಟಿ ಹೊಡೆದಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಕೂಡ ಭರವಸೆ: ಈ ನಡುವೆ ಒಡಿಶಾದ ಬಿಜೆಪಿ ಕೂಡ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದೆ. 2019ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವನೆಯಲ್ಲಿ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದಾಗಿ ಬಿಜೆಪಿ ಅಧ್ಯಕ್ಷ ಬಸಂತ್‌ ಪಾಂಡ ಪ್ರಕಟಿಸಿದ್ದಾರೆ.

ರಫೇಲ್‌: ಸಂಸತ್‌ನಲ್ಲಿ ಚರ್ಚೆಗೆ ಆಹ್ವಾನ
ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಸರ್ಕಾರ ಏಕೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪುತ್ತಿಲ್ಲ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ರಫೇಲ್‌ ಹಗರಣ ಕುರಿತು ಸಂಸತ್‌ನಲ್ಲಿ ಚರ್ಚೆಗೆ ಸರ್ಕಾರ ಹೆದರುತ್ತಿರುವುದು ಏತಕ್ಕೆ ಎಂದು ಅವರು ಕೇಳಿದ್ದಾರೆ. ರಪೇಲ್‌ ಒಪ್ಪಂದ ಕುರಿತು ಸಂಸತ್‌ನಲ್ಲಿ ಚರ್ಚಿಸುವ ಬದಲು ಬೀದಿಯಲ್ಲಿ ಬೊಬ್ಬೆ ಹೊಡೆದರೆ ಏನು ಪ್ರಯೋಜನ ಎಂದು ಕೇಂದ್ರ ಸಚಿವ ರವಿಂಶಕರ್ ಪ್ರಸಾದ್‌ ತಿರುಗೇಟು ನೀಡಿದ್ದಾರೆ. ಸಂಸತ್‌ನಲ್ಲಿ ರಫೇಲ್‌ ಒಪ್ಪಂದ ಕುರಿತು ಚರ್ಚೆಗೆ ಬರುವಂತೆ  ಅವರು ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದಾರೆ.

ರಾಹುಲ್‌ಗೆ ಮೋದಿ ಸೋಲಿಸುವ ಶಕ್ತಿ ಇದೆ: ಸ್ಟಾಲಿನ್ ಸಮರ್ಥನೆ
ಪ್ರಧಾನಿ ಹುದ್ದೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ ತಮ್ಮ ನಿಲುವನ್ನು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೋಮುವಾದಿ ಮತ್ತು ನಾಜಿ ಸರ್ಕಾರವನ್ನು ಸೋಲಿಸುವ ಸಾಮರ್ಥ್ಯ ರಾಹುಲ್‌ ಗಾಂಧಿ ಅವರಿಗಿದೆ ಎಂದು ಸ್ಟಾಲಿನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ನಾಲ್ಕು ಪುಟಗಳ ಸಮರ್ಥನೆ ನೀಡಿರುವ ಅವರು, ಕೋಮುವಾದಿಗಳ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಜಾತ್ಯತೀತ ಶಕ್ತಿಗಳು ಒಂದಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಹಾಮೈತ್ರಿ ಕೂಟದಲ್ಲಿರುವ ಪಕ್ಷಗಳಲ್ಲಿ ಚರ್ಚೆ ನಡೆಯುತ್ತಿದೆ. ಪರಸ್ಪರ ಮಾತುಕತೆಯಿಂದ  ಒಮ್ಮತಕ್ಕೆ ಬರಲಾಗುವುದು ಎಂದು ಸ್ಟಾಲಿನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಜನತೆ 60 ವರ್ಷದಿಂದ ನಿದ್ರಿಸುತ್ತಿಲ್ಲ: ಬಿಜೆಪಿ ತಿರುಗೇಟು
ಪ್ರಧಾನಿ ಮೋದಿ ಅವರನ್ನು ನಿದ್ರಿಸಲು ಬಿಡುವುದಿಲ್ಲ ಎಂಬ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಕಾಂಗ್ರೆಸ್‌ ಈ ದೇಶದ ಜನರನ್ನು 60 ವರ್ಷಗಳಿಂದ ನಿದ್ರಿಸಲು ಬಿಟ್ಟಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಲೇವಡಿ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರಧಾನಿ ವಿರುದ್ಧ ಮಾಡಿದ ಅತ್ಯಂತ ಕೀಳು ಅಭಿರುಚಿಯ ಹೇಳಿಕೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ 60 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್  ರೈತರಿಗೆ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತು. ಈಗ ಸಾಲಮನ್ನಾ ಎಂಬ ಹೊಸ ನಾಟಕ ಶುರುವಿಟ್ಟುಕೊಂಡಿದೆ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು