ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಮತ್ತು ಗೋಡ್ಸೆ ಸಿದ್ಧಾಂತಗಳು ಒಂದಾಗಲು ಸಾಧ್ಯವಿಲ್ಲ: ಪ್ರಶಾಂತ್‌ ಕಿಶೋರ್‌

Last Updated 18 ಫೆಬ್ರುವರಿ 2020, 7:44 IST
ಅಕ್ಷರ ಗಾತ್ರ

ಪಾಟ್ನಾ: ಜೆಡಿಯುನಿಂದ ಹೊರಬಂದಿದ್ದಕ್ಕೆ ಚುನಾವಣಾ ಕಾರ್ಯತಂತ್ರಜ್ಞ ಮತ್ತು ರಾಜಕಾರಣಿ ಪ್ರಶಾಂತ್‌ ಕಿಶೋರ್‌ (ಪಿಕೆ) ಕಾರಣ ತಿಳಿಸಿದ್ದು, ಪಕ್ಷದ ಮುಖ್ಯಸ್ಥ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಜೆಪಿಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

'ಬಾತ್ ಬಿಹಾರ್ ಕಿ' ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಿತೀಶ್ ಜೀ ಅವರು ನನ್ನನ್ನು ಯಾವಾಗಲು ತಮ್ಮ ಪುತ್ರನಂತೆ ನೋಡಿಕೊಳ್ಳುತ್ತಿದ್ದರು ಮತ್ತು ಅವರು ನನಗೆ ತಂದೆಯಂತೆ ಇದ್ದರು. ಹೀಗಾಗಿ ಅವರು ಏನೇ ನಿರ್ಧಾರ ತೆಗೆದುಕೊಂಡರು ನನಗೆ ಯಾವುದೇ ಅಭ್ಯಂತರವಿಲ್ಲ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು ಮತ್ತು ಉಚ್ಛಾಟನೆ ಮಾಡಿದರು. ಆದರೆ ನಾನು ಅವರ ವಿರುದ್ಧ ದ್ವೇಷ ಸಾಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಮತ್ತು ನಿತೀಶ್ ಜೀ ಅವರ ಮಧ್ಯೆ ಭಿನ್ನಾಬಿಪ್ರಾಯಗಳು ಇದ್ದವು. ಆದರೆ ಅವೆಲ್ಲವೂ ಸೈದ್ಧಾಂತಿಕವಾಗಿದ್ದವು. ಇದೆಲ್ಲವೂ ಲೋಕಸಭಾ ಚುನಾವಣೆ ವೇಳೆಯಲ್ಲಿ ಶುರುವಾಯಿತು. ನಿತೀಶ್ ಜೀ ಯಾವಾಗಲೂ ಗಾಂಧಿ, ಜೆಪಿ ಮತ್ತು ಲೋಹಿಯಾರ ತತ್ವಗಳನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಗಾಂಧಿ ತತ್ವಗಳನ್ನು ಪ್ರಚಾರ ಮಾಡುತ್ತಿರುವಾಗ, ಹೇಗೆ ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಪರವಿರುವ ವ್ಯಕ್ತಿಗಳೊಂದಿಗೆ ಇರಲು ಸಾಧ್ಯ? ಇಬ್ಬರೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2014ರಲ್ಲಿ ನಾನು ನಿತೀಶ್ ಕುಮಾರ್ ಅವರನ್ನು ನೋಡಿದ್ದೆ. ಆಗ ಅವರು ಹೀಗಿರಲಿಲ್ಲ. ಆದರೆ ಈಗ ಗುಜರಾತ್ ನಾಯಕರೊಬ್ಬರು, ನಿತೀಶ್ ಕುಮಾರ್ ಅವರೇ ಬಿಹಾರದ ಎನ್‌ಡಿಎ ನಾಯಕರುಎಂದು ಘೋಷಿಸುತ್ತಾರೆ. ಇದು ಸರಿ ಎಂದು ನನಗನ್ನಿಸುತ್ತಿಲ್ಲ. ಅವರೇನು ಮಾಡಬೇಕು ಎನ್ನುವುದನ್ನು ಇತರೆ ನಾಯಕರಿಂದ ಹೇಳಿಸಿಕೊಳ್ಳಲು ಅವರು ವ್ಯವಸ್ಥಾಪಕರಲ್ಲ ಎಂದು ಕಿಡಿಕಾರಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮಿತ್ ಷಾ ಅವರು ಬಿಹಾರದ ವಿಧಾನಸಭಾ ಚುನಾವಣೆಯನ್ನು ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಎದುರಿಸಲಾಗುತ್ತದೆ ಎಂದು ಘೋಷಿಸಿದ್ದರು.

ರಾಜಕೀಯದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ ಎಂದೊಮ್ಮೆ ನಿತೀಶ್ ಅವರು ಹೇಳಿದ್ದರು. ಆದರೆ ಅದು ಬಿಹಾರದ ಅಭಿವೃದ್ಧಿಯಲ್ಲೂ ಮಾಡಿಕೊಳ್ಳಬೇಕೇ? ರಾಜಕೀಯವಾಗಿ ಇನ್ಮುಂದೆ ಬಿಹಾರದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದ ಜೆಡಿಯು ನಿಲುವನ್ನು ಖಂಡಿಸಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದ ಪ್ರಶಾಂತ್ ಕಿಶೋರ್ ಮತ್ತು ಪಕ್ಷದ ನಾಯಕ ನಿತೀಶ್ ಕುಮಾರ್ ಅವರ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಈ ಬೆನ್ನಲ್ಲೇ ಪಕ್ಷಕ್ಕೆ ಅಶಿಸ್ತು ತೋರಿದ ಆರೋಪದಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT