ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ

ಶಿಕ್ಷಣಕ್ಕೆ ₹ 94 ಸಾವಿರ ಕೋಟಿ ಅನುದಾನ/ ವಿಜ್ಞಾನ ಸಂಶೋಧನೆ– ಆವಿಷ್ಕಾರಕ್ಕೆ ಒತ್ತು
Last Updated 5 ಜುಲೈ 2019, 19:17 IST
ಅಕ್ಷರ ಗಾತ್ರ

ಶಿಕ್ಷಣ ವ್ಯವಸ್ಥೆ ಅದರಲ್ಲೂ ಉನ್ನತ ಶಿಕ್ಷಣವನ್ನು ಮತ್ತಷ್ಟು ಬಲಪಡಿಸಲು ಒತ್ತು ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ಶಾಲಾ ಮತ್ತು ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರಲು ಮೋದಿ ಸರ್ಕಾರ ಉದ್ದೇಶಿಸಿದೆ. ಶಾಲಾ– ಕಾಲೇಜುಗಳ ಆಡಳಿತ ಮತ್ತು ನಿರ್ವಹಣೆ ಇನ್ನಷ್ಟು ಉತ್ತಮಗೊಳಿಸುವುದರ ಜತೆಗೆ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ.

ವಿಜ್ಞಾನ: ವಿಜ್ಞಾನ ಕ್ಷೇತ್ರಕ್ಕೆ ವಿವಿಧ ಯೋಜನೆಗಳು ಮತ್ತು ಸಚಿವಾಲಯಗಳ ಮೂಲಕ ಸುಮಾರು ₹27 ಸಾವಿರ ಕೋಟಿ ನಿಗದಿ ಮಾಡಿದೆ. ಮುಂಬರುವ ವರ್ಷಗಳಲ್ಲಿ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾಗಿ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಾಗಿ ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ ಹಣ, ಉತ್ತೇಜನ ಮತ್ತು ಸಮನ್ವಯಕ್ಕೆ ಆದ್ಯತೆ ನೀಡಲಿದೆ. ವಿವಿಧ ಸಚಿವಾಲಯಗಳಲ್ಲಿ ಸಂಶೋಧನೆಗೆಂದು ಇಟ್ಟಿರುವ ಅನುದಾನವನ್ನು ಸೇರಿಸಿ ‘ಸ್ವತಂತ್ರ ಸಂಶೋಧನಾ ನಿಧಿ’ ಸ್ಥಾಪಿಸಲಿದೆ. ಅಲ್ಲದೆ, ದೇಶದಲ್ಲಿ ಸಂಶೋಧನಾ ವ್ಯವಸ್ಥೆ ಬಲಪಡಿಸಲು ಹೆಚ್ಚುವರಿ ಹಣವನ್ನೂ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ದೇಶವನ್ನು ಪರಿಸರ ಮಾಲಿನ್ಯ ಮುಕ್ತಗೊಳಿಸುವ ಮೂಲಕ ‘ಹಸಿರು ಭೂಮಿ’, ‘ನೀಲಿ ಆಕಾಶ’ ಸಾಧಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನದಿ ಶುದ್ಧೀಕರಣ, ಜಲ ನಿರ್ವಹಣೆಗೂ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡಲಿದೆ.ವಿಜ್ಞಾನ ಕ್ಷೇತ್ರಕ್ಕೆ ಅನುದಾನ– ₹27,431 ಕೋಟಿ

ಬಾಹ್ಯಾಕಾಶ ವಿಜ್ಞಾನ: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿಭಾರತ ಪ್ರಮುಖ ಶಕ್ತಿಯಾಗಿ ಹೊರ ಹೊಮ್ಮಿದೆ. ಬಾಹ್ಯಾಕಾಶ ತಂತ್ರಜ್ಞಾನ, ಉಪಗ್ರಹಗಳ ಉಡಾವಣೆ ಮತ್ತು ಇತರ ಬಾಹ್ಯಾಕಾಶ ಸಂಬಂಧಿ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿವೆ ಮತ್ತು ವೆಚ್ಚವೂ ಕಡಿಮೆ. ಇವುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಇದರಿಂದ ಸಾಕಷ್ಟು ಆದಾಯವನ್ನೂ ಗಳಿಸಬಹುದು ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದು. ಚಂದ್ರಯಾನ–2 ಮತ್ತು ಗಗನಯಾನ–1 ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಕ್ಷಮತೆಯನ್ನು ಹೆಚ್ಚಿಸಲಿದೆ.

ಎನ್‌ಎಸ್‌ಐಎಲ್‌:ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ‘ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಎಲ್‌) ಪ್ರತ್ಯೇಕ ಸಂಸ್ಥೆ ಸ್ಥಾಪಿಸಲಾಗಿದೆ. ಇಸ್ರೊ ನಡೆಸುವ ಎಲ್ಲ ಸಂಶೋಧನೆಗಳು ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರುವ ಕೆಲಸವನ್ನುಎನ್‌ಎಸ್‌ಐಎಲ್‌ ಮಾಡಲಿದೆ. ಉಡ್ಡಯನ ವಾಹನವೂ ಸೇರಿದಂತೆ ಹಲವು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದರ ಜತೆಗೆ ತಂತ್ರಜ್ಞಾನ ವರ್ಗಾವಣೆಯನ್ನು ಮಾಡಲಿದೆ.

ಸೈಬರ್ ಸೆಕ್ಯುರಿಟಿ:ಸೈಬರ್‌ ಸೆಕ್ಯುರಿಟಿಗೆ ಸಂಬಂಧಿಸಿದಂತೆಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ₹120 ಕೋಟಿಯನ್ನು ಅನುದಾನ ನೀಡಲಾಗಿದೆ.

* ಜಾಗತಿಕ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ 2019– 20 ಸಾಲಿಗೆ ₹400 ಕೋಟಿ ನಿಗದಿ ಮಾಡಿದ್ದು, ಹಿಂದಿನ ವರ್ಷಗಳಿಗಿಂತ ಮೂರು ಪಟ್ಟು ಅಧಿಕ ಹಣ ನೀಡಲಾಗಿದೆ.

* ‘ಸ್ಟಡಿ ಇನ್ ಇಂಡಿಯಾ’ ಯೋಜನೆಯಡಿ, ವಿದೇಶಿ ವಿದ್ಯಾರ್ಥಿಗಳು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ನೀಡಲಾಗುವುದು.

* ಉನ್ನತ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯನ್ನು ಸಮಗ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಹೆಚ್ಚಿನ ಸ್ವಾಯತ್ತತೆ ನೀಡಲಾಗುವುದು. ಇದರಿಂದ ಉತ್ಕೃಷ್ಟ ಶೈಕ್ಷಣಿಕ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂಬ ಚಿಂತನೆ ಕೇಂದ್ರದ್ದು.

* ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ ಸ್ಥಾಪಿಸಲು ಉದ್ದೇಶಿಸಿದ್ದು, ಈ ಸಂಬಂಧ ಕಾಯಿದೆಯ ಕರಡನ್ನು ರೂಪಿಸಿದ್ದು, ಅದನ್ನು ಸಾರ್ವಜನಿಕರ ಪ್ರತಿಕ್ರಿಯೆಗೆ ಮಂಡಿಸಲು ಸಿದ್ಧತೆ.

* ‘ಖೇಲೊ ಇಂಡಿಯಾ’ ಯೋಜನೆಯಡಿ ಎಲ್ಲ ಹಂತಗಳಲ್ಲೂ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾಪಟುಗಳ ಸಮಗ್ರ ಅಭಿವೃದ್ಧಿಗಾಗಿ ‘ರಾಷ್ಟ್ರೀಯ ಕ್ರೀಡಾ ಮಂಡಳಿ’ ಸ್ಥಾಪಿಸಲಾಗುವುದು. ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕ್ರೀಡೆಗೆ ಉತ್ತೇಜನ.

* ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತಾ ಅಭಿಯಾನ’ದಡಿ ದೇಶದ ಎರಡು ಕೋಟಿ ಗ್ರಾಮೀಣ ಭಾರತೀಯರನ್ನು ಡಿಜಿಟಲ್‌ ಸಾಕ್ಷರರನ್ನಾಗಿಸಲು ವಿಶೇಷ ಕಾರ್ಯಕ್ರಮ.

ಶಿಕ್ಷಣ ಕ್ಷೇತ್ರಕ್ಕೆ ಅನುದಾನ– ₹ 94,854 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT