ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ಮೋಹನ್ ರೆಡ್ಡಿ ಮೇಲೆ ವಿಮಾನ ನಿಲ್ದಾಣದಲ್ಲೇ ದಾಳಿ: ತೋಳಿಗೆ ಇರಿದ ಆರೋಪಿ ಬಂಧನ

Last Updated 25 ಅಕ್ಟೋಬರ್ 2018, 17:56 IST
ಅಕ್ಷರ ಗಾತ್ರ

ವಿಶಾಖಪಟ್ಟಣಂ: ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ವಿಧಾನಸಭೆ ವಿರೋಧಪಕ್ಷದ ನಾಯಕ ಜಗನ್‌ಮೋಹನ್‌ ರೆಡ್ಡಿ ಅವರಿಗೆ ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ಗುರುವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

ಇದೇ ವಿಮಾನ ನಿಲ್ದಾಣದಲ್ಲಿನ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುವ ಜೆ. ಶ್ರೀನಿವಾಸ ರಾವ್‌ (30) ಈ ಕೃತ್ಯ ಎಸಗಿದ್ದಾನೆ. ಈ ರೆಸ್ಟೋರೆಂಟ್‌ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಹರ್ಷವರ್ಧನ್‌ ಅವರಿಗೆ ಸೇರಿದ್ದಾಗಿದೆ.

ಹೈದರಾಬಾದ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಜಗನ್, ‌ಗಣ್ಯರ ಲಾಂಜ್‌ನಿಂದ ಹೊರ ಬರುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪ ಮಾಡಿಕೊಂಡು ಅವರ ಬಳಿ ಶ್ರೀನಿವಾಸ ಹೋಗಿದ್ದಾನೆ. ಅವರು ಫೋಟೊಗೆಪೋಸ್‌ ನೀಡುವ ಸಂದರ್ಭದಲ್ಲಿ ಅವರ ಎಡ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ.

ವಿಮಾನನಿಲ್ದಾಣದಲ್ಲಿ ಸಿಐಎಸ್‌ಎಫ್‌ ಯೋಧರು ಶ್ರೀನಿವಾಸ್‌ನನ್ನು ಥಳಿಸಿ, ರಾಜ್ಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಜಗನ್, ‘ನಾನು ಸುರಕ್ಷಿತವಾಗಿದ್ದೇನೆ. ಇಂತಹ ಹೇಡಿ ಕೃತ್ಯಗಳು ನನ್ನನ್ನು ಅಧೀರನನ್ನಾಗಿಸುವುದಿಲ್ಲ. ಜನರಿಗಾಗಿ ಕೆಲಸ ಮಾಡುವ ನನ್ನ ಬದ್ಧತೆ ಮತ್ತಷ್ಟು ಹೆಚ್ಚಿದೆ’ ಎಂದಿದ್ದಾರೆ.

ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಜಗನ್‌ ಅವರನ್ನು ದಾಖಲಿಸಲಾಗಿದೆ. ಗಾಯ ಗಂಭೀರವಾಗಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪ್ರಕಟಣೆ ತಿಳಿಸಿದೆ.

‘ಅರ್ಧಕ್ಕೆ ಕಾಲೇಜು ವ್ಯಾಸಂಗ ತೊರೆದಿರುವ ಶ್ರೀನಿವಾಸ ರಾವ್, ಪೂರ್ವ ಗೋದಾವರಿ ಜಿಲ್ಲೆಯವನು. ಏರ್‌ಪೋರ್ಟ್‌ನ ಫ್ಯೂಷನ್‌ ರೆಸ್ಟೋರೆಂಟ್‌ನಲ್ಲಿ ಒಂದು ವರ್ಷದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಪ್ರಚಾರ ಪಡೆಯುವ ಉದ್ದೇಶದಿಂದ ಅವನು ಈ ಕೃತ್ಯ ಎಸಗಿರಬಹುದು’ ಎಂದು ರಾಜ್ಯ ಡಿಜಿಪಿ ಆರ್.ಪಿ. ಠಾಕೂರ್‌ ಹೇಳಿದ್ದಾರೆ.

‘ಶ್ರೀನಿವಾಸ್‌ನಿಂದ 9–10 ಪುಟಗಳ ಪತ್ರವನ್ನು ಸಿಐಎಸ್‌ಎಫ್‌ ವಶಪಡಿಸಿಕೊಂಡಿದ್ದು, ನಮಗೆ ಅದನ್ನು ನೀಡಲಾಗಿದೆ. ಮೊದಲು ಈ ವ್ಯಕ್ತಿ ಜಗನ್‌ ಅವರ ಅಭಿಮಾನಿ ಎಂದು ಭಾವಿಸಲಾಗಿತ್ತು. ಆದರೆ, ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಜಗನ್‌ರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಕೃತ್ಯದ ಹಿಂದೆ ಟಿಡಿಪಿ ಕೈವಾಡವಿದೆ’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸಿದೆ. ಇತರ ವಿರೋಧಪಕ್ಷಗಳಾದ ಕಾಂಗ್ರೆಸ್‌, ಜನಸೇನಾ ಮತ್ತು ಬಿಜೆಪಿ ಕೂಡ ಘಟನೆಯನ್ನು ಖಂಡಿಸಿವೆ.

‘ಶ್ರೀನಿವಾಸ್‌ ಯಾರು, ಯಾವ ಪಕ್ಷದವನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಗೃಹಸಚಿವ ಎನ್. ರಾಜಪ್ಪ ತಿಳಿಸಿದ್ದಾರೆ.

ಆರೋಪಿಯಿಂದ ವಶಕ್ಕೆ ಪಡೆದ ಆಯುಧ
ಆರೋಪಿಯಿಂದ ವಶಕ್ಕೆ ಪಡೆದ ಆಯುಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT