ಗುರುವಾರ , ಸೆಪ್ಟೆಂಬರ್ 24, 2020
27 °C

ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ: ನೀವು ತಿಳಿಯಬೇಕಾದ 10 ಅಂಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದಲ್ಲಿ ಪ್ರತಿಬಾರಿಯೂ ಸರ್ಕಾರಗಳು ಬದಲಾಗುವುದು ವಾಡಿಕೆ. ಈ ಬಾರಿಯ ವಿಧಾನಸಭೆ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಹುಮತದ ಸನಿಹಕ್ಕೆ ಬರುತ್ತಿದೆ. ಬಿಜೆಪಿ 74 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ.

ಹಲವು ಸುತ್ತಿನ ಮತಎಣಿಕೆಯ ನಂತರ ಅನೇಕ ಸಚಿವರು ಹಿನ್ನಡೆ ಅನುಭವಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ. ರಾಜ್ಯದಲ್ಲಿ ಈ ವರ್ಷ ನಡೆದ ಎಲ್ಲ ಮೂರು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್‌, ಮುಖ್ಯಮಂತ್ರಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನೇ ಬಡಿದೆಬ್ಬಿಸಿ ಅಧಿಕಾರದ ಸನಿಹಕ್ಕೆ ಬಂದಿದೆ.

2013ರಲ್ಲಿ ಬಿಜೆಪಿ ಸಾಧಿಸಿದ್ದ ನಿಚ್ಚಳ ವಿಜಯವು ಮತಗಳ ಹಂಚಿಕೆ ಪ್ರಮಾಣದಲ್ಲಿಯೂ ದಾಖಲೆ ಬರೆದಿತ್ತು. ಬಿಜೆಪಿ ಶೇ 45.17ರಷ್ಟು ಮತ ಪಡೆಯುವ ಮೂಲಕ 1998ರ ನಂತರ ಅತಿಹೆಚ್ಚು ಮತ ಪಡೆದ ದಾಖಲೆ ನಿರ್ಮಿಸಿತ್ತು. 2013ರಲ್ಲಿ ಕಾಂಗ್ರೆಸ್ ಶೇ 33.07ರಷ್ಟು ಮತಗಳನ್ನು ಮಾತ್ರ ದಕ್ಕಿಸಿಕೊಳ್ಳಲು ಸಾಧ್ಯವಾಗಿತ್ತು.

ರಾಜಸ್ಥಾನ ವಿಧಾನಸಭೆ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ...

1) ರಾಜಸ್ಥಾನ ಮುಖ್ಯಮಂತ್ರಿ ವಸುಂಧರರಾಜೆ ಝಲ್ರಾಪಟನ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಮಗ ಮಾನ್ವೇಂದ್ರ ಸಿಂಗ್‌ ಕಾಂಗ್ರೆಸ್ ಅಭ್ಯರ್ಥಿ. ಸೆ.22ರಂದು ಬಿಜೆಪಿ ತೊರೆದಿದ್ದ ಮಾನ್ವೇಂದ್ರ ಅ.17ರಂದು ಕಾಂಗ್ರೆಸ್ ಸೇರಿದ್ದರು. ರಜಪೂತರನ್ನು ಓಲೈಸಲು ಕಾಂಗ್ರೆಸ್‌ ಕೈಗೊಂಡ ಕ್ರಮ ಎಂದೇ ವ್ಯಾಖ್ಯಾನಿಸಲಾಯಿತು.

2) ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕ್ರಮವಾಗಿ ಟೊಂಕ್ ಮತ್ತು ಸರ್ದಾರ್‌ಪುರ ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದಾರೆ. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಟೊಂಕ್‌ನಲ್ಲಿ ಬಿಜೆಪಿ ಯೂನಸ್ ಖಾನ್ ಅವರನ್ನು ಕಣಕ್ಕಿಳಿಸಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಜಿತ್ ಸಿಂಗ್ ಮೆಹ್ತಾ ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು.

3) ಒಟ್ಟು 12 ಸಚಿವರು ಪ್ರತಿಸ್ಪರ್ಧಿಗಳ ಎದುರು ಹಿನ್ನಡೆ ಅನುಭವಿಸಿದ್ದಾರೆ. ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ, ಸಾರಿಗೆ ಸಚಿವ ಯೂನುಸ್ ಖಾನ್, ಸಮಾಜ ಕಲ್ಯಾಣ ಸಚಿವ ಅರುಣ್ ಚತುರ್ವೇದಿ, ನೀರಾವರಿ ಸಚಿವ ರಾಮ್‌ಪ್ರತಾಪ್, ಕೃಷಿ ಸಚಿವ ಪ್ರಭುಲಾಲ್ ಸೈನಿ, ಸಚಿವರಾದ ಶ್ರೀಚಂದ್ ಕೃಪಾಲಾನಿ, ಒಟಾರಾಮ್ ದೇವಾಸಿ, ಕಾಳಿಚರಣ್, ಅಜಯ್ ಸಿಂಗ್, ಸುರೇಂದ್ರ ಪಾಲ್ ಸಿಂಗ್, ಕಿರಣ್ ಮಹೇಶ್ವರಿ ಮತ್ತು ರಾಜ್‌ಪಾಲ್ ಸಿಂಗ್ ಸೋಲಿನ ಸುಳಿಗೆ ಸಿಲುಕಿದ್ದಾರೆ.

4) ಸಾದುಲ್‌ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತಾರಾ ಪ್ರಚಾರಕ, 2010ರ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಕೃಷ್ಣ ಪೂನಿಯಾ ಸಾದುಲ್‌ಪುರ್ ಕ್ಷೇತ್ರದಲ್ಲಿ 4000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

5) ಜಾಟ್ ಸಮುದಾಯದ ನಾಯಕ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥ ಹನುಮಾನ್ ಬೆನಿವಾಲ್ ಖಿನ್‌ವಾಸರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜ್ಯದಲ್ಲಿ ಆರ್‌ಎಲ್‌ಪಿ ಒಟ್ಟು 58 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ರಾಜಸ್ಥಾನದ ಮತದಾರರ ಪೈಕಿ ಜಾಟ್ ಸಮುದಾಯಕ್ಕೆ ಸೇರಿದವರು ಸಂಖ್ಯೆ ಶೇ 10.

6) ಕಾಂಗ್ರೆಸ್‌ನಿಂದ 34, ಬಿಜೆಪಿಯಿಂದ 30 ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಸಿದ್ದಾರೆ. ಮಾಜಿ ಸಚಿವ ಘನಶ್ಯಾಮ್ ತಿವಾರಿ ಅವರ ಭಾರತ್ ವಾಹಿನಿ ಪಕ್ಷವು 63 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

7) ಪಕ್ಷೇತರರು 10, ಇತರ ಪಕ್ಷಗಳ ಅಭ್ಯರ್ಥಿಗಳು 5 ಮತ್ತು ಬಿಎಸ್‌ಪಿ ಒಂದು ಮತ್ತು ಸಿಪಿಎಂ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ.

8) ರೈತರ ಚಳವಳಿಗಳು, ಆನಂದ್ ಪಾಲ್ ಸಿಂಗ್ ಎನ್‌ಕೌಂಟರ್ ವಿರೋಧಿಸಿ ರಜಪೂತರ ಪ್ರತಿಭಟನೆಗಳು, ಮಾಧ್ಯಮ ನಿಯಂತ್ರಣಕ್ಕೆ ಕಾನೂನು ತಂದಿದ್ದು, ಗುಂಪುಗೂಡಿ ಸಾಯ ಹೊಡೆಯುವ ಪ್ರವೃತ್ತಿ ಹೆಚ್ಚಾಗಿದ್ದು, ಗೋರಕ್ಷಕರ ಹಾವಳಿ ವಸುಂಧರ ರಾಜೆ ಆಡಳಿತಕ್ಕೆ ನುಂಗಲಾರದ ತುತ್ತಾಯಿತು. ಈ ಚುನಾವಣೆಯಲ್ಲಿ ಜನರು ಮೋದಿ ಅವರಿಗಿಂತಲೂ ರಾಜೆ ಆಡಳಿತವನ್ನು ವಿರೋಧಿಸಿ ಮತ ಚಲಾಯಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿದ್ದವು. ‘ಮೋದಿ ಜೊತೆಗೆ ವೈರವಿಲ್ಲ, ವಸುಂಧರಾ ನಿನಗಿದು, ಕ್ಷೇಮವಲ್ಲ’ (Modi se bair nehi, Vasundhara teri khair nehi) ಜನಪ್ರಿಯ ಘೋಷಣೆಯಾಗಿತ್ತು.

9) ನಿರುದ್ಯೋಗ ರಾಜಸ್ಥಾನ ಚುನಾವಣೆಯ ಮುಖ್ಯ ವಿಷಯವಾಗಿತ್ತು. ಬಿಜೆಪಿ 2013ರಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಲಾಗಿತ್ತು. ಆದರೆ ಇದನ್ನು ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಬೆಳ್ಳುಳ್ಳಿ, ಈರುಳ್ಳಿ, ಸಾಸಿವೆ, ಸೋಯಾಬೀನ್, ಉದ್ದು, ತೊಗರಿ ಬೆಳೆಗಾರರು ಸರ್ಕಾರದ ಕೃಷಿ ನೀತಿಗಳಿಂದ ನಷ್ಟ ಅನುಭವಿಸಿದ್ದರು. ರೈತರಲ್ಲಿ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

10) ರಾಜಸ್ಥಾನದಲ್ಲಿ ಈ ಬಾರಿ ಮತದಾನದ ಪ್ರಮಾಣ ಶೇ 74.05. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.