ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ನೆರವಿಗೆ 15 ಅಂಶಗಳ ಸೂತ್ರ

Last Updated 29 ಮೇ 2020, 19:30 IST
ಅಕ್ಷರ ಗಾತ್ರ

ವಲಸೆ ಕಾರ್ಮಿಕರ ಸಂಕಟವನ್ನು ಹೋಗಲಾಡಿಸಲು ಸರ್ಕಾರ ಹಾಕಿಕೊಳ್ಳಬೇಕಾದ 15 ಅಂಶಗಳ ಕಾರ್ಯಕ್ರಮದ ಪಟ್ಟಿಯನ್ನು ಇತಿಹಾಸಕಾರರಾಮಚಂದ್ರ ಗುಹಾ, ಶಿಕ್ಷಣ ತಜ್ಞರಾದ ಪ್ರೊ. ವಿನೋದ್ ಗೌರ್, ಪ್ರೊ. ರಾಮೇಶ್ವರಿ ವರ್ಮ, ಪ್ರೊ. ಅಮಿತ್ ಭಸೋಲೆ, ಪ್ರೊ. ದೀಪಕ್ ಮಲಘಾಣ, ಪ್ರೊ.ಟಿ.ವಿ. ರಾಮಚಂದ್ರ ಮತ್ತಿತರರು ಸಿದ್ಧಪಡಿಸಿದ್ದಾರೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ:

1.ಅಸಂಖ್ಯಾತ ವಲಸೆ ಕಾರ್ಮಿಕರ ಸ್ಥಿತಿ-ಗತಿ ಕಳವಳಕಾರಿ. ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರ ಸಂಖ್ಯೆಗೂ ಶ್ರಮಿಕ ರೈಲುಗಳಲ್ಲಿ ಕಳುಹಿಸಿಕೊಡಲಾದ ಸಂಖ್ಯೆಗೂ ಭಾರಿ ವ್ಯತ್ಯಾಸವಿದೆ. ಹೆದ್ದಾರಿಗಳಲ್ಲಿ, ಶಿಬಿರಗಳಲ್ಲಿ, ಖಾಲಿ ಜಾಗಗಳಲ್ಲಿ ದಿಕ್ಕಿಲ್ಲದೇ ಉಳಿದುಕೊಂಡಿರುವ ಕಾರ್ಮಿಕರ ಕಡೆಗೆ ತಕ್ಷಣ ಗಮನಹರಿಸಬೇಕು. ಎಲ್ಲಾ ವಲಸೆ ಕಾರ್ಮಿಕರಿಗೂ ಆಹಾರ, ಸಾರಿಗೆ ಮತ್ತು ಆರೋಗ್ಯ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು

2.ವಲಸೆ ಕಾರ್ಮಿಕರ ಮೇಲೆ ಯಾವುದೇ ಹಿಂಸೆ ಅಥವಾ ಶಿಕ್ಷಾತ್ಮಕ ಕ್ರಮ ಕೈಗೊಳ್ಳ ದಂತೆ ಪೊಲೀಸ್ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳಿಗೂ ತಕ್ಷಣವೇ ಆದೇಶ ಹೊರಡಿಸಬೇಕು. ಬೇರೆ ರಾಜ್ಯಗಳಿಗೆ ಕಳಿಸುವ ಪ್ರಕ್ರಿಯೆಯ ಭಾಗವಾದ ಅರ್ಜಿ ವಿಶ್ಲೇಷಣೆ, ಆರೋಗ್ಯ ತಪಾಸಣೆ, ಸಾರಿಗೆ ವ್ಯವಸ್ಥೆ ಕುರಿತಾದ ಎಲ್ಲಾ ಪ್ರಕ್ರಿಯೆಗಳೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಗುತ್ತಿದ್ದು, ಅವುಗಳ ಕಾರ್ಯ ನಿರ್ವಹಣೆಗೆ ಸ್ಪಷ್ಟ, ಕಾರ್ಯಸಾಧ್ಯ ಮಾರ್ಗಸೂಚಿ ಹೊರಡಿಸಬೇಕು

3. ಬೇರೆ ರಾಜ್ಯಗಳಿಗೆ ಮರಳುತ್ತಿರುವ ಬಹುತೇಕ ಕಾರ್ಮಿಕರು ಕಟ್ಟಡ ನಿರ್ಮಾಣ ಕ್ಷೇತ್ರದವರು. ಕಾರ್ಮಿಕರ ಕಲ್ಯಾಣ ನಿಧಿಗೆ ಬಂದ ತೆರಿಗೆ ಹಣವನ್ನು ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಬಳಸಬೇಕು. 10.74 ಲಕ್ಷ ನೋಂದಾಯಿತ ಕಾರ್ಮಿಕರಿರುವ ಕರ್ನಾಟಕವು ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸಿದ್ದು, ಕಾರ್ಮಿಕರಿಗೆ ಕೆಲವು ಕಲ್ಯಾಣ ಕಾರ್ಯಕ್ರಮಗಳನ್ನೂ ಪ್ರಕಟಿಸಲಾಗಿದೆ. ಇದರೊಂದಿಗೆ ₹ 10 ಸಾವಿರದಷ್ಟು ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೋಂದಾಯಿತ ಕಾರ್ಮಿಕರಿಗೆ (ಇದರ ವೆಚ್ಚ ₹ 1100 ಕೋಟಿಯಷ್ಟು ಆಗಬಹುದು) ನೀಡಬೇಕು

4.ಕಾರ್ಮಿಕರು ಅವರವರ ಮನೆಗಳಿಗೆ ತೆರಳದಂತೆ ತಡೆಯುವ ನಿರ್ಮಾಣ ಕ್ಷೇತ್ರದ ಪ್ರಯತ್ನ ತಿರುಗುಬಾಣ ಆಗಬಲ್ಲುದು. ಈ ಕ್ರಮ ಕಾರ್ಮಿಕರು ತಮ್ಮ ಉದ್ಯೋಗದಾತರನ್ನು ಸಂಶಯದಿಂದ ನೋಡುವಂತೆ ಮಾಡುತ್ತದಲ್ಲದೆ, ಮತ್ತೆ ಈ ಉದ್ಯೊಗದ ಸ್ಥಳಕ್ಕೆ ಮರಳದಂತೆ ಮಾಡಬಹುದು. ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಇತರ ರಾಜ್ಯಗಳಿಗೆ ಈ ಕಾರ್ಮಿಕರು ಹೋಗುವ ಬದಲು ಮತ್ತೆ ರಾಜ್ಯಕ್ಕೆ ಮರಳುವಂತಾಗಲು ಅವರನ್ನು ಬಲವಂತದಿಂದ ತಡೆ ಹಿಡಿಯುವ ಪ್ರಯತ್ನ ಬಿಡಬೇಕು

5.ಬಹುತೇಕ ಕಾರ್ಮಿಕರನ್ನು ಅವರ ಉದ್ಯೋಗದಾತರು ಪ್ರಾಯಶಃ ನೋಂದಣಿ ಮಾಡಿರಲಾರರು. ಇಂತಹ ಕಾರ್ಮಿಕರು ಸರ್ಕಾರದ ಯೋಜನೆಗಳ ಲಾಭ ಪಡೆಯಲಾರರು. ಅವರಿಗೂ ನೆರವಿನಹಸ್ತ ಚಾಚುವ ಕೆಲಸವನ್ನು ಸರ್ಕಾರ ಮಾಡಬೇಕು

ಅ. ಅವರ ರೈಲು ಪ್ರಯಾಣದ ವೆಚ್ಚ (ಅಂದಾಜು ತಲಾ ₹ 1000, ಈಗ ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ) ಭರಿಸುವುದು

ಬ. ಪ್ರಯಾಣದ ವೇಳೆ ಆಹಾರದ ವ್ಯವಸ್ಥೆ ಮಾಡುವುದು (ಅಂದಾಜು ತಲಾ ₹ 150)

ಕ. ಪ್ರಯಾಣದ ಆರಂಭದ ಸ್ಥಳದಲ್ಲಿ ತಲಾ ₹ 5000 ನೀಡುವುದು. ನಿರ್ಮಾಣ ಉದ್ಯಮ ಹೊರತಾಗಿ ಇನ್ಯಾವುದೇ ಉದ್ಯಮಕ್ಕೂ ಈ ತೆರಿಗೆ ಇಲ್ಲದಿರುವ ಕಾರಣ ಪ್ರಯಾಣ ಬೆಳೆಸುತ್ತಿರುವ ಎಲ್ಲಾ ಕಾರ್ಮಿಕರಿಗೂ ಇದರ ಲಾಭ ನೀಡಲು ಈ ಯೋಜನೆಯ ನಿಧಿಯನ್ನು ಬಳಸಬೇಕು

6. ಎಲ್ಲಾ ಉದ್ಯೋಗದಾತರೂ ಬಾಕಿ ಉಳಿಸಿಕೊಂಡಿರುವ ವೇತನ, ಸಂಬಳ ಮತ್ತಿತರ ಸವಲತ್ತುಗಳನ್ನು ತಕ್ಷಣವೇ ಪಾವತಿ ಮಾಡುವಂತೆ ಮತ್ತೆ ಸುತ್ತೋಲೆ ಹೊರಡಿಸಬೇಕು. ಹಾಗೇ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಬಾಡಿಗೆ, ಸಾಲ ಸೌಲಭ್ಯದ ಆದೇಶವನ್ನು ಮತ್ತೆ ಜಾರಿಗೊಳಿಸಿ, ಕಾರ್ಮಿಕರು ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಉದ್ಯೋಗ ನಷ್ಟದಿಂದ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು

7. ಹಲವಾರು ಹಳ್ಳಿಗಳಲ್ಲಿ ಮರಳಿ ಬಂದ ವಲಸಿಗರಿದ್ದಾರೆ. ಇವರಲ್ಲಿ ಬಹುಪಾಲು ಯುವಕರು. ಇವರು ಸದ್ಯದ ಭವಿಷ್ಯದಲ್ಲಿ ನಗರಗಳಿಗೆ ತೆರಳುವುದು ಕಷ್ಟಸಾಧ್ಯ. ಇಂತಹ ನಾಗರಿಕರಿಗೆ ಹೊಸ ರೀತಿಯ ಗ್ರಾಮೀಣ ಜೀವನೋಪಾಯ ಮತ್ತಿತರ ಅವಕಾಶಗಳಿಗಾಗಿ ಅಗತ್ಯವಾದ ಕೌಶಲದ ತರಬೇತಿ ನೀಡಬೇಕು

8. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಗಳಂತಹ ವ್ಯವಸ್ಥೆಯನ್ನು ಉಳಿಸಿಕೊಂಡು ಅವುಗಳ ಉತ್ತಮ ಕಾರ್ಯ ನಿರ್ವಹಣೆಗೆ ಬೇಕಾದ ಹೊಸ ನಿಯಮಾವಳಿ ಸಿದ್ಧಪಡಿಸಬೇಕು

9. ರೈತ ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ಆಧಾರಿತ ಸಣ್ಣ ಸಂಸ್ಕರಣಾ ಯೂನಿಟ್ಟುಗಳಿಗೆ ಪ್ರೋತ್ಸಾಹ ನೀಡಬೇಕು. ಈ ಹೆಜ್ಜೆ ಗ್ರಾಮೀಣ ಕ್ಷೇತ್ರಗಳಿಗೆ ನಿಜ ಸ್ವಾಯತ್ತೆ ಮತ್ತು ಆರ್ಥಿಕ ಸ್ಥಿರತೆಯನ್ನು ತರುವುದಲ್ಲದೇ, ಈಗಿರುವ ನಗರ ಕೈಗಾರಿಕೆ ಮತ್ತು ಕೃಷಿ ಗ್ರಾಮೀಣ ಪ್ರಪಂಚದ ಮಧ್ಯೆ ಇರುವ ಕಂದಕವನ್ನು ನಿವಾರಿಸಬಲ್ಲದು

10. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಕೆಲಸಗಳು ಆರಂಭವಾಗಿದ್ದು ವೇತನ ಪಾವತಿಯೂ ಆಗುತ್ತಿದೆ ಎಂಬುದು ಸಂತೋಷದ ವಿಚಾರ. ಉದ್ಯೋಗ ಖಾತರಿ ಯೋಜನೆಗೆ ಬಿಡುಗಡೆಯಾಗಲಿರುವ ಹೊಸ ಅನುದಾನವನ್ನು ನ್ಯಾಯೋಚಿತವಾಗಿ ಮತ್ತು ಉತ್ತರದಾಯಿತ್ವ ಇರುವ ರೀತಿಯಲ್ಲಿ ಬಳಸಬೇಕು. ಉದ್ಯೋಗ ಖಾತರಿಯನ್ನು ಕೃಷಿ ಮತ್ತು ಪರಿಸರ ಪುನಶ್ಚೇತನ ಯೋಜನೆಗಳಿಗೆ ಬಳಸಬೇಕು

11.ಸಾರ್ವಜನಿಕ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಧಾರಿಸುವ ತುರ್ತು ಅಗತ್ಯವಿದೆ. ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ರಾಜ್ಯ ಕಾರ್ಯಕ್ರಮಗಳನ್ನು ಆಯುಷ್ಮಾನ್ ಭಾರತ ಆವರಿಸಿದೆ. ಆದರೆ ಇದರ ಅನುಷ್ಠಾನ ಮತ್ತು ಪರಿಣಾಮಗಳು ತೀರಾ ಸೀಮಿತ. ಶುಶ್ರೂಷೆಗಾಗಿ ನಗರಗಳಿಗೆ ಧಾವಿಸದಂತೆ ಸ್ಥಳೀಯವಾಗಿ ಗ್ರಾಮಾಂತರ ಮತ್ತು ಪಟ್ಟಣಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಕ್ರಿಯಗೊಳಿಸಿ ಆರೋಗ್ಯ ಸೌಲಭ್ಯಗಳನ್ನು ಪೂರೈಸಬೇಕು. ಕೋವಿಡ್- 19 ಸಹಿತ ಎಲ್ಲಾ ರೀತಿಯ ಪ್ರಮುಖ ರೋಗ ಗಳಿಗೆ ಚಿಕಿತ್ಸೆ ಲಭಿಸುವಂತೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಗಳ ವೈದ್ಯಕೀಯ ಸೌಲಭ್ಯಗಳನ್ನು ಪುನಶ್ಚೇತನಗೊಳಿಸಬೇಕು

12.ಸಿದ್ಧ ಉಡುಪುಗಳ ತಯಾರಿಕೆಯಲ್ಲಿ ಬೆಂಗಳೂರು ಜಗತ್ತಿನಲ್ಲಿಯೇ ಮುಂದಿದೆ. ಈ ವಲಯದಲ್ಲಿ 4.5 ಲಕ್ಷ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ರಫ್ತು ಬೇಡಿಕೆಗಳು ಕಡಿಮೆಯಾದರೆ ಈ ಬಲುದೊಡ್ಡ ಕಾರ್ಮಿಕ ವರ್ಗದ ಜೀವನೋಪಾಯಗಳಿಗೆ ತೀವ್ರ ಹಿನ್ನಡೆಯಾಗುತ್ತದೆ. ಆದ್ದರಿಂದ ಗಾರ್ಮೆಂಟ್ ಉದ್ಯಮಕ್ಕೆ ವಿಶೇಷ ಯೋಜನೆಯನ್ನು ರೂಪಿಸಬೇಕು

13. ಲಾಕ್‌ಡೌನ್‌ ಕಾರಣದಿಂದ ಲಕ್ಷಾಂತರ ರೈತರ ಫಸಲು ಮಾರಾಟವಾಗದೇ ಅಪಾರ ನಷ್ಟ ಉಂಟಾಗಿದೆ. ಅಂತಹ ರೈತರ ನಷ್ಟ ತುಂಬಿಕೊಡುವ ವ್ಯವಸ್ಥೆಯೊಂದನ್ನು ಮಾಡಬೇಕು. ಈ ಪರಿಹಾರವನ್ನು ಮುಂದಿನ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಬೆಂಬಲ ನೀಡುವ, ಮಣ್ಣಿನ ಫಲವತ್ತತೆಗಾಗಿ ನೆರವು ನೀಡುವ ಮೂಲಕ ಮಾಡಬೇಕು

14.ಅನುಕೂಲವಂಚಿತ ಮಂದಿಗೆ (ಮುಖ್ಯವಾಗಿ ವಲಸಿಗರು) ಆಹಾರ ಧಾನ್ಯಗಳ ಪೂರೈಕೆ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲೇ ಬೆಳೆಯುವ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ಹಂಚಬೇಕು. ಇದರಿಂದ ಈ ಬೆಳೆಗಳ ಉತ್ಪಾದನೆ ಹೆಚ್ಚಲು ಅನುಕೂಲ. ಹಾಗೇ ನಾಗರಿಕರ ಪೌಷ್ಟಿಕ ಆಹಾರದ ಭದ್ರತೆಯೂ ಹೆಚ್ಚುತ್ತದೆ

15.ಕರ್ನಾಟಕದಲ್ಲಿ ಹದಗೆಟ್ಟಿರುವ ಸೂಕ್ಷ್ಮ ಪರಿಸರ ಸಂಪನ್ಮೂಲಗಳನ್ನು ಪುನಶ್ಚೇತನಗೊಳಿಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲ. ನದಿ, ಕೆರೆ, ಕುಂಟೆ, ಗೋಮಾಳ, ಅರಣ್ಯ ಮತ್ತಿತರ ಪರಿಸರ ಸಂಪನ್ಮೂಲಗಳ ಪುನಶ್ಚೇತನಕ್ಕೆ ಯೋಜನೆ ಹಾಕಿಕೊಳ್ಳಬೇಕು. ಕಾಡಿನ ಪ್ರದೇಶ ಹೆಚ್ಚಿಸಲು ಆದ್ಯತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT