ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಅತೃಪ್ತ ಶಾಸಕರ ರಾಜೀನಾಮೆ ಹಿಂದಿರುವ ಅಸಲಿ ಕಾರಣಗಳು ಏನು?  

Last Updated 1 ಆಗಸ್ಟ್ 2019, 12:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ನಡೆ ಹಾಗೂ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ರಾಷ್ಟ್ರದ ಗಮನ ಸೆಳೆಯುವಂತಾಗಿದೆ.

ದೋಸ್ತಿ ಸರ್ಕಾರದ ವಿರುದ್ಧ ಬಂಡಾಯದ ರಣಕಹಳೆ ಊದಿ, ತಮ್ಮ ಶಾಸಕ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿರುವ 16 ಶಾಸಕರ ಅತೃಪ್ತಿಗೆ ನಿಜವಾದ ಕಾರಣಗಳು ಏನು? ಅವರು ರಾಜೀನಾಮೆ ನೀಡಿರುವ ಹಿಂದಿನ ಉದ್ದೇಶವಾದರೂ ಏನು ಎಂಬುದರ ಪರಿಚಯ ಇಲ್ಲಿದೆ.

ಶಾಸಕರ ಮತ್ತು ಮಂತ್ರಿಗಳ ಕಾರ್ಯನಿರ್ವಹಣೆಯಲ್ಲಿಮೈತ್ರಿ ಸರ್ಕಾರದ ಕೆಲ ಪ್ರಮುಖರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಕ್ಷೇತ್ರಗಳ ಅಭಿವೃದ್ಧಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ, ಮುಖ್ಯಮಂತ್ರಿ ಮತ್ತು ಸಚಿವ ಎಚ್‌.ಡಿ ರೇವಣ್ಣ ಹಾಗೂ ದೇವೇಗೌಡರ ಕುಟುಂಬ ಆಡಳಿತದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರ ಮುಖ್ಯ ಆರೋಪವಾಗಿದೆ. ರಾಜೀನಾಮೆ ನೀಡಿರುವ ಶಾಸಕರು ಪಕ್ಷಾಂತರ ಮಾಡಿ ಮಂತ್ರಿ ಸ್ಥಾನ ಪಡೆಯುವುದಕ್ಕಾಗಿ ವಿರೋಧ ಪಕ್ಷ ಸೇರಲು ಮುಂದಾಗಿದ್ದರೆ ಎಂದು ದೋಸ್ತಿ ಸರ್ಕಾರದ ನಾಯಕರು ಆರೋಪಿಸಿದ್ದಾರೆ.

ಮೈತ್ರಿ ನಾಯಕರು ಮತ್ತು ರಾಜೀನಾಮೆ ನೀಡಿರುವ ಶಾಸಕರು ಏನೇ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಿದರೂ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಬೇರೆಯದೇ ಕಾರಣಗಳಿವೆ.

ರೋಷನ್‌ ಬೇಗ್‌

ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ರೋಷನ್‌ ಬೇಗ್‌ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ. ತಮ್ಮ ಸಮೀಪಪ್ರತಿಸ್ಪರ್ಧಿ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು 15 ಸಾವಿರ ಮತಗಳ ಅಂತರದಲ್ಲಿ ಸೋಲಿಸಿ ಗೆದ್ದು ಬಂದಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯ ವೈತ್ರಿ ಸರ್ಕಾರದಲ್ಲಿ ಅವರಿಗೆ ಮಂತ್ರಿ ಪದವಿ ಕೈತಪ್ಪಿತ್ತು. ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರ ಮೇಲೆ ಅಸಮಾಧಾನವಿತ್ತು. ಕಳೆದ ಕೆಲವು ದಿನಗಳ ಹಿಂದೆ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್‌ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರ ವಿರುದ್ಧ ಸಾರ್ವಜನಿಕವಾಗಿ ಹರಿಹಾಯ್ದಿದ್ದರು. ಈ ಕಾರಣಕ್ಕೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಐಎಂಎ ಬಹುಕೋಟಿ ಹಗರಣದಲ್ಲಿ ಶಾಸಕ ರೋಷನ್‌ ಬೇಗ್‌ ಅವರ ಹೆಸರು ಕೇಳಿ ಬಂದಿದೆ.ಐಎಂಎ ಕಂಪನಿಯ ಮಾಲೀಕ ಮನ್ಸೂರ್‌ ಅಲಿಖಾನ್‌ ಅವರಿಂದ ನೂರಾರು ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಿದೆ.

ಐಎಂಎ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ನೆರವಿಗೆ ಬಂದರೆ ಮಾತ್ರ ರಾಜೀನಾಮೆ ಹಿಂಪಡೆಯುವುದಾಗಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ. ಇದಕ್ಕಾಗಿ ರೋಷನ್‌ ಬೇಗ್‌ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಕೆ.ಗೋಪಾಲಯ್ಯ

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಗೆದಿದ್ದಾರೆ. ಬಿಜೆಪಿಯ ನರೇಂದ್ರ ಬಾಬು ಅವರನ್ನು ಸುಮಾರು 40 ಸಾವಿರ ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ ಪಕ್ಷದಲ್ಲಿ ತಮಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿಲ್ಲ ಎಂದು ಗೋಪಾಲಯ್ಯ ಅಸಮಾಧಾನಗೊಂಡಿದ್ದಾರೆ. ಈ ಸಲ ಬೆಂಗಳೂರು ನಗರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ₹ 450 ಕೋಟಿ ಅನುದಾನ ನೀಡಲಾಗಿತ್ತು. ಈ ಯೋಜನೆಗಳ ಅನುಷ್ಠಾನ ಮತ್ತು ಟೆಂಡರ್‌ ವಿಷಯದಲ್ಲಿ ಸಚಿವ ರೇವಣ್ಣ ಹಾಗೂ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಬೇಸರಗೊಂಡಿದ್ದಾರೆ.

ಗೋಪಾಲಯ್ಯ ಅವರ ಕುಟುಂಬಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಪ್ರಕರಣದಲ್ಲಿಮುಖ್ಯಮಂತ್ರಿಸಹಾಯ ಮಾಡಲಿಲ್ಲ ಎಂಬುದು ಗೋಪಾಲಯ್ಯ ಅವರ ಮುನಿಸಿಗೆ ಮತ್ತೊಂದು ಕಾರಣ ಎಂದು ತಿಳಿದುಬಂದಿದೆ.

ಎಸ್‌ಬಿಎಂ ಗ್ಯಾಂಗ್‌

ಸೋಮಶೇಖರ್,ಮುನಿರತ್ನ ನಾಯ್ಡು,ಬೈರತಿ ಬಸವರಾಜ್‌,
ಸೋಮಶೇಖರ್,ಮುನಿರತ್ನ ನಾಯ್ಡು,ಬೈರತಿ ಬಸವರಾಜ್‌,

ಅತೃಪ್ತ ಶಾಸಕರಲ್ಲಿ ಎಸ್‌ಬಿಎಂ (ಸೋಮಶೇಖರ್, ಬೈರತಿ ಬಸವರಾಜ್‌, ಮುನಿರತ್ನ ನಾಯ್ಡು) ಗ್ಯಾಂಗ್‌ ಎಂದು ಕರೆಯುವ ಗುಂಪೊಂದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಟಿಸೋಮಶೇಖರ್, ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬೈರತಿ ಬಸವರಾಜ್‌ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮುನಿರತ್ನ ನಾಯ್ಡು ಕಾಂಗ್ರೆಸ್‌ ಪಕ್ಷದ ಕಟ್ಟಾಳುಗಳು ಎಂದೇ ಕರೆಸಿಕೊಂಡವರು. ಕಳೆದ ಕಾಂಗ್ರೆಸ್‌ ಸರ್ಕಾರದ ಅಧಿಕಾರದಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಪಡೆದಿದ್ದರು. ಆದರೆ ಈ ದೋಸ್ತಿ ಸರ್ಕಾರದಲ್ಲಿ ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ದೊರೆತಿಲ್ಲ ಎಂಬುದು ಇವರ ಅಸಮಾಧಾನಕ್ಕೆ ಮೂಲ ಕಾರಣ.

ಬಿಡಿಎ ಅಧ್ಯಕ್ಷರಾಗಿರುವಎಸ್‌.ಟಿ. ಸೋಮಶೇಖರ್‌ ಅವರು ತಮ್ಮ ಕೆಲಸದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವ ರೇವಣ್ಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಾರೆ.ಹಾಗೆಯೇಐಎಎಸ್‌ ಅಧಿಕಾರಿಗಳಿಂದ ರೇವಣ್ಣ–ಕುಮಾರಸ್ವಾಮಿ ಅವರು ನೇರವಾಗಿಕೆಲಸ ಮಾಡಿಸಿಕೊಂಡರೆ ನಾನೇಕೆಬಿಡಿಎ ಅಧ್ಯಕ್ಷನಾಗಿ ಇರಬೇಕು? ಎಂಬುದು ಸೋಮಶೇಖರ್‌ ಅವರ ಪ್ರಶ್ನೆ.

ಇನ್ನುಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್)ಅಧ್ಯಕ್ಷರಾಗಿರುವ ಬೈರತಿ ಬಸವರಾಜ್‌ ಕೂಡ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ ಹಾಗೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಚಿವ ಜಾರ್ಜ್‌ ಹಾಗೂ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ ಹಾಗೂ ಸೇತುವೆಗಳ ನಿರ್ಮಾಣ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ.

ಈ ಮೂವರು ಶಾಸಕರ ವಿರುದ್ಧ ಈ ಹಿಂದೆಯೂ ಹಲವುಆರೋಪಗಳು ಕೇಳಿ ಬಂದಿವೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿಗೆ ಹೆದರಿ ಇವರೆಲ್ಲರೂಮುಂಬೈ ದಾರಿ ಹಿಡಿದ್ದಾರೆ ಎಂಬುದು ಕಾಂಗ್ರೆಸ್‌ ಪಾಳೆಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ರಾಮಲಿಂಗಾರೆಡ್ಡಿ

ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮುನಿಸಿನ ಹಿಂದೆ ಕಸ ಮಾಫಿಯಾದ ಕಥೆ ಇದೆ. ಇದಕ್ಕೆಸಚಿವ ಸ್ಥಾನ ನೀಡಲಿಲ್ಲ ಎಂಬ ಅಸಮಾಧಾನವೂ ಜೊತೆಯಾಗಿದೆ.ಕಳೆದ 45 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿರುವ ರಾಮಲಿಂಗಾರೆಡ್ಡಿ ಅವರನ್ನು ಮೈತ್ರಿ ಸರ್ಕಾರ ಕಡೆಗಣಿಸಿತ್ತು. ಬೆಂಗಳೂರಿನ ಕಸದ ಟೆಂಡರ್‌ಗಳಲ್ಲಿ ರಾಮಲಿಂಗಾರೆಡ್ಡಿ ಬೆಂಬಲಿಗರ ಹಿಡಿತವಿದೆ. ಮೈತ್ರಿ ಸರ್ಕಾರ ರಚನೆಯಾದ ಬಳಿಕ ಕಸದ ಟೆಂಡರ್‌ ವಿಷಯದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಮತ್ತು ಸಚಿವ ರೇವಣ್ಣ ಅವರ ಹಸ್ತಕ್ಷೇಪವೇ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಲು ಕಾರಣ ಎಂದು ಅವರ ಆಪ್ತರ ಹೇಳುತ್ತಿದ್ದಾರೆ.

ಎಂ.ಟಿ.ಬಿ. ನಾಗರಾಜ್‌ ಮತ್ತು ಡಾ.ಸುಧಾಕರ್‌

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ, ವಸತಿ ಸಚಿವಎಂ.ಟಿ.ಬಿ. ನಾಗರಾಜ್‌, ‘ಸರ್ಕಾರದ ವಿರುದ್ಧ ನನ್ನ ಅಸಮಾಧಾನಕ್ಕೆ ದೇವೇಗೌಡರ ಕುಟುಂಬದ ಹಸ್ತಕ್ಷೇಪವೇ ಕಾರಣ’ ಎಂದುಅವರು ಬಹಿರಂಗವಾಗಿ ಹೇಳಿದ್ದಾರೆ. ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ತಮ್ಮ ಎಚ್‌.ಡಿ.ರೇವಣ್ಣ ನನ್ನ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ನನ್ನ ಗಮನಕ್ಕೆ ತಾರದೆ ಮಾಡುತ್ತಿದ್ದಾರೆ.ಯಾವ ಪುರುಷಾರ್ಥಕ್ಕಾಗಿ ನಾನುಸಚಿವನಾಗಿ ಇರಬೇಕು’ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸುಧಾಕರ್‌ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ಮನವೊಲಿಕೆಯಿಂದಾಗಿ ನಿಗಮ ಮಂಡಳಿ ಸ್ಥಾನಕ್ಕೆ ಒಪ್ಪಿಕೊಂಡಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಕುಮಾರಸ್ವಾಮಿ ಈ ಸ್ಥಾನ ನೀಡಲು ಒಪ್ಪಿರಲಿಲ್ಲ. ಆದರೆ ಹಟ ಹಿಡಿದು, ಈ ಸ್ಥಾನ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದರು. ‘ನಾನು ಕೇಳಿದಾಕ್ಷಣ ಮುಖ್ಯಮಂತ್ರಿಗಳು ಹುದ್ದೆ ನೀಡಲಿಲ್ಲ’ ಎಂದು ಅವರ ಮೇಲೆ ಕೋಪಿಸಿಕೊಂಡಿದ್ದರು. ನಂತರದ ಬೆಳವಣಿಗೆಗಳಲ್ಲಿ ಅತೃಪ್ತರ ಗುಂಪು ಸೇರಿದರು.

ಎಚ್‌.ವಿಶ್ವನಾಥ್‌ ಹಾಗೂನಾರಾಯಣಗೌಡ

ಜೆಡಿಎಸ್‌ ಪಕ್ಷದ ಅಧ್ಯಕ್ಷರಾಗಿದ್ದಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌. ವಿಶ್ವನಾಥ್ ಅವರಿಗೆ ವಾಸ್ತವವಾಗಿಯಾವುದೇ ಅಧಿಕಾರ ಇರಲಿಲ್ಲ. ಗೌಡರ ಕುಟುಂಬದ ನಿರ್ದೇಶನದಂತೆಯೇ ಕೆಲಸ ಮಾಡಬೇಕಿತ್ತು. ಅದಕ್ಕಾಗಿಯೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದರು. ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರದ ಮೇಲೆ ಕೋಪಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ನಾರಾಯಣಗೌಡ ‘ನಾನು ರಾಜೀನಾಮೆ ನೀಡಲು ದೇವೇಗೌಡರ ಕುಟುಂಬವೇ ಕಾರಣ’ ಎಂದು ಹೇಳಿದ್ದಾರೆ. ‘ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಕಿರುಕುಳ ನೀಡುತ್ತಿತ್ತು. ಅದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿಕೆ ಕೊಟ್ಟಿದ್ದಾರೆ.

ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್‌ ಕುಮಟಳ್ಳಿ

ಬೆಳಗಾವಿ ಜಿಲ್ಲೆಯ ಗೋಕಾಕ್‌ ಶಾಸಕರಮೇಶ್‌ ಜಾರಕಿಹೊಳಿ ಮೈತ್ರಿ ಸರ್ಕಾರ ರಚನೆಯಾದಾಗ ಸಚಿವರಾಗಿದ್ದರು. ನಂತರ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಅವರಿಂದ ಮಂತ್ರಿ ಸ್ಥಾನವನ್ನು ಹಿಂಪಡೆಯಲಾಗಿತ್ತು. ಇದರಿಂದ ರಮೇಶ್‌ ಜಾರಕಿಹೊಳಿ ಅಸಮಾಧಾನಗೊಂಡಿದ್ದರು. ಇದಲ್ಲದೇ ಸಚಿವ ಡಿ.ಕೆ.ಶಿವಕುಮಾರ್‌ ಮೂಲಕ ಶಾಸಕಿ ಲಕ್ಷ್ಮೀ ಹೆಬಾಳ್ಕರ್‌ ಬೆಳಗಾವಿಯಲ್ಲಿ ತಮ್ಮ ಪ್ರಬಾವ ಬೆಳೆಸಿಕೊಳ್ಳಲು ಆರಂಭಿಸಿದ್ದರು. ಇದು ಕೂಡ ರಮೇಶ್ ಜಾರಕಿಹೊಳಿ ಮುನಿಸಿಗೆ ಕಾರಣವಾಗಿತ್ತು. ಸರ್ಕಾರದ ಇಂದಿನ ಪರಿಸ್ಥಿತಿಗೆರಮೇಶ್ ಜಾರಕಿಹೊಳಿ ಅವರೇ ಕಾರಣ ಎನ್ನಲಾಗುತ್ತಿದೆ.

ಬೆಳಗಾವಿಯ ಅಥಣಿ ಶಾಸಕಮಹೇಶ್‌ ಕುಮಟಳ್ಳಿ ಅವರು ತಮ್ಮ ಆಪ್ತ ಸ್ನೇಹಿತರಾದ ರಮೇಶ್‌ ಜಾರಕಿಹೊಳಿಯನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ಬಿ.ಸಿ.ಪಾಟೀಲ್‌ ಮತ್ತು ಪ್ರತಾಪ್‌ ಗೌಡ ಪಾಟೀಲ್‌

ಹಿರೆಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್‌ ಮೂರು ಸಲ ಕಾಂಗ್ರೆಸ್‌ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೈತ್ರಿ ಸರ್ಕಾರ ರಚನೆಯಾದಾಗ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್‌ ಮುಖಂಡರು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಸಚಿವ ಸ್ಥಾನ ನೀಡದಿರುವುದಕ್ಕೆ ಬೇಸರಗೊಂಡು ಅವರು ರಾಜೀನಾಮೆ ನೀಡಿದ್ದಾರೆ.

ಮಸ್ಕಿ ಶಾಸಕಪ್ರತಾಪ್‌ಗೌಡ ಪಾಟೀಲ್‌ ಅವರು ಎರಡು ಬಾರಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಹಿರಿಯ ಶಾಸಕರಾಗಿರುವುದರಿಂದ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಮೈತ್ರಿ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ.

ಆನಂದ್‌ ಸಿಂಗ್‌ ಮತ್ತು ಶಿವರಾಮ್‌ ಹೆಬ್ಬಾರ್‌

ಬಳ್ಳಾರಿಯ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಅವರುಸರ್ಕಾರ ಜಿಂದಾಲ್‌ ಒಡೆತನಕ್ಕೆ ಮೂರು ಸಾವಿರ ಎಕರೆ ಭೂಮಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಕೇತ್ರದಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪ ಹಾಗೂ ಅನುದಾನ ಹಂಚಿಕೆಯಲ್ಲಿನ ತಾರತಮ್ಯದಿಂದಾಗಿ ಆನಂದ್ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದವರು.ಜಿಲ್ಲೆಯಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಅವರಹಸ್ತಕ್ಷೇಪ ಮತ್ತು ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಿರುವುದರಿಂದಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆನೀಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಬಿಜೆಪಿ ನಂಟು

16 ಅತೃಪ್ತ ಶಾಸಕರು ಯಾವುದೇ ಕಾರಣಗಳನ್ನು ನೀಡಿದರೂ ಅವರ ಹಿಂದೆ ಬಿಜೆಪಿಯ ಕೈವಾಡ ಇರುವುದು ಜನರಿಗೆ ತಿಳಿದ ಸಂಗತಿಯಾಗಿದೆ. ರಾಜೀನಾಮೆ ನೀಡಿರುವ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಬಿಜೆಪಿ ಅವರೆಲ್ಲರಿಗೂ ಮಂತ್ರಿ ಸ್ಥಾನ ಕೊಡುವ ‌‌‌‌‌ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಡಿಯೂರಪ್ಪ ಅವರ ಆಪ್ತ ಸಂತೋಷ್ ಮತ್ತು ಇತರರು ಅತೃಪ್ತ ಶಾಸಕರ ಜೊತೆಗೆ ಕಾಣಿಸಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡುವಾಗ ಯಡಿಯೂರಪ್ಪ ಸಹ ‘ಮುಂಬೈನಲ್ಲಿರುವ ಶಾಸಕರ ಜೊತೆಗೆ ಸಂಪರ್ಕದಲ್ಲಿದ್ದೇನೆ’ ಎಂದು ಹೇಳಿದ್ದರು ರಾಜೀನಾಮೆ ಪ್ರಹಸನದ ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT