ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಹೆಗಲಿಗೆ ಸರ್ಕಾರ ಉಳಿಸುವ ಹೊಣೆ

ರಾಜ್ಯದ ಬೆಳವಣಿಗೆ ಚರ್ಚಿಸಿದ ಕಾಂಗ್ರೆಸ್‌ ಮುಖಂಡರು
Last Updated 6 ಜುಲೈ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್– ಜೆಡಿಎಸ್‌ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬೆಳವಣಿಗೆ ಆಧರಿಸಿ ಶನಿವಾರ ಸಂಜೆ ಇಲ್ಲಿ ತುರ್ತು ಸಭೆ ನಡೆಸಿದ ಕಾಂಗ್ರೆಸ್‌ ಮುಖಂಡರು, ಸರ್ಕಾರ ಉಳಿಸುವ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಿದ್ದಾರೆ.

ಇಲ್ಲಿನ ಗುರುದ್ವಾರ ರಖಬ್‌ ಗಂಜ್‌ ರಸ್ತೆಯಲ್ಲಿರುವ ಪಕ್ಷದ ವಾರ್‌ ರೂಂನಲ್ಲಿ ಸಂಜೆ ಹಿರಿಯ ಮುಖಂಡರಾದ ಅಹಮದ್‌ ಪಟೇಲ್‌, ರಣದೀಪ್‌ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ ಖರ್ಗೆ, ಮುಖಂಡರ ಸೂಚನೆಯ ಮೇರೆಗೆ ರಾತ್ರಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

‘ಯಾರ ರಾಜೀನಾಮೆಯೂ ಇದುವರೆಗೆ ಸ್ವೀಕೃತಿಯಾಗಿಲ್ಲ. ಅತೃಪ್ತ ಶಾಸಕರು ಪಕ್ಷ ಮತ್ತು ನಾಯಕತ್ವದ ಕುರಿತು ಅಪಸ್ವರ ಎತ್ತಿಲ್ಲ. ಹಾಗಾಗಿ ಸರ್ಕಾರ ಉಳಿಸಲು ಪ್ರಯತ್ನಿಸಲಾಗುವುದು’ ಎಂದು ಸಭೆಯ ನಂತರ ಖರ್ಗೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು ಚುನಾಯಿತ ಶಾಸಕರನ್ನು ತಮ್ಮತ್ತ ಸೆಳೆಯುತ್ತ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಈಗಾಗಲೇ ಇದಕ್ಕೆ ನಿದರ್ಶನಗಳಿವೆ ಎಂದು ಅವರು ದೂರಿದರು.

ಬಹುಮತ ಇರುವ ಬಿಜೆಪಿಯೇತರ ಸರ್ಕಾರಗಳನ್ನು ಕೆಡವಲು ‘ಆಯಾ ರಾಮ್‌ ಗಯಾ ರಾಮ್‌’ ತತ್ವವನ್ನು ಅಳವಡಿಸುವಲ್ಲಿ ಬಿಜೆಪಿ ಹೆಸರಾಗಿದೆ. ಹಣದ ಮತ್ತು ಅಧಿಕಾರದ ಆಮಿಷ ಒಡ್ಡಿ, ಒತ್ತಡ ಹೇರಿ ಸರ್ಕಾರ ಉರುಳಿಸುತ್ತಿದೆ. ಪ್ರಜಾಪ್ರಭುತ್ವ ಉಳಿಸಬೇಕೆಂಬ ಭಾವನೆ ಬಿಜೆಪಿ ಮುಖಂಡರಲ್ಲಿ ಇದ್ದಿದ್ದರೆ ‘ಆಪರೇಷನ್‌ ಕಮಲ’ಕ್ಕೆ ಮುಂದಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್‌ ಸೋತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಫಲಿತಾಂಶದಿಂದ ಬೇಸತ್ತು ಪಕ್ಷ ತ್ಯಜಿಸಲಾಗುತ್ತಿದೆ ಎಂಬ ವದಂತಿ ಹರಡಿಸಲಾಗಿದೆ. ಕಾಂಗ್ರೆಸ್‌ ಪಕ್ಷವನ್ನು ನಾಶ ಮಾಡಲು ಹೊರಟವರಿಗೆ ಯಶಸ್ಸು ದೊರೆಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರ ಬದಲಿಗೆ ಖರ್ಗೆ ಅವರು ಮುಖ್ಯಮಂತ್ರಿಯಾದರೆ ಶಾಸಕರು ರಾಜೀನಾಮೆ ಹಿಂದಕ್ಕೆ ಪಡೆಯಲಿದ್ದಾರೆ ಎಂಬುದೂ ಮಾಧ್ಯಮಗಳ ಸೃಷ್ಟಿ ಎಂದು ಅವರು ಹೇಳಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT