ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಸುವ ಕೊನೆಯ ಇಲಿಯೂ ಹೊರ ಬರಲಿ: ಸಂಸದ ಅನಂತಕುಮಾರ ಹೆಗಡೆ

‘ರಾಷ್ಟ್ರ ವಿರೋಧಿಗಳನ್ನು ಹೊಸಕಿ ಹಾಕುವ ಸಾಮರ್ಥ್ಯ ಇದೆ’
Last Updated 1 ಫೆಬ್ರುವರಿ 2020, 11:03 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರ ವಿರೋಧಿ ನೀತಿ ಹಾಗೂ ಆಂದೋಲನಗಳನ್ನು ಹೊಸಕಿ ಹಾಕುವ ಎಲ್ಲ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕಿದೆ. ಆದರೆ, ಬಿಲದ ಕೊನೆಯಲ್ಲಿರುವ ಇಲಿಯೂ ಹೊರಗೆ ಬರಲಿ ಎಂಬ ಉದ್ದೇಶದಿಂದ ಅವಕಾಶ ನೀಡಲಾಗಿದೆ’ ಎಂದು ಸಂಸದ ಅನಂತಕುಮಾರಹೆಗಡೆ ತಿಳಿಸಿದರು.

ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮತ್ತೆ ಮತ್ತೆ ಸಾವರ್ಕರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ರಾಷ್ಟ್ರದ ಅಸ್ತಿತ್ವದ ಬಗ್ಗೆ ಬಾಂಬು ಇಡುವ ವಿಚಾರವನ್ನೇ ಸ್ವಾತಂತ್ರ್ಯ ಎಂದು ಹೇಳುವುದಾದರೇ ಇದಕ್ಕಿಂತ ದಿವಾಳಿತನ ಬೇರೆಯಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬಂದ ಬಳಿಕ ಒಂದು ಹಂತದಲ್ಲಿ ಒಳ್ಳೆಯದೇ ಆಗಿದೆ. ಯಾವ ಹುತ್ತಗಳಲ್ಲಿ ಯಾವ ಹಾವುಗಳಿವೆ ಎನ್ನುವುದು ತಿಳಿಯುತ್ತಿದೆ. ಅದೇ ರೀತಿ, ಶಿಕ್ಷಣ ಸಂಸ್ಥೆಗಳಲ್ಲಿ ಸೊಗಲಾಡಿ ಬುದ್ಧಿಜೀವಿಗಳು ಎಷ್ಟಿದ್ದಾರೆ? ನಮ್ಮ ಜತೆಗಿರುವ ಬುದ್ಧಿಗೇಡಿಗಳು ಯಾರು ? ಮುಖವಾಡ ಹಾಕಿಕೊಂಡವರು ಯಾರು ? ನಿಜವಾದ ದೇಶ ಭಕ್ತರು ಯಾರು? ದೇಶ ವಿರೋಧಿಗಳು ಯಾರು ಎನ್ನುವುದು ತಿಳಿಯುತ್ತಿದೆ. ಮುಂದಿನ ದಿನಗಳಲ್ಲಿ ನಮಗೂ ಅವರ ಮೇಲೆ ಗುರಿ ಇಡಲು ಸಹಕಾರಿಯಾಗುತ್ತದೆ’ ಎಂದರು.

‘ದೇಶದ ರಾಷ್ಟ್ರೀಯತೆಯನ್ನೇ ಚರ್ಚೆ ಮಾಡುವಷ್ಟು ಸ್ವಾತಂತ್ರ್ಯವನ್ನು ನಮ್ಮಲ್ಲಿ ನೀಡಿರುವುದು ವಿಪರ್ಯಾಸ. ಅಷ್ಟೇ ಅಲ್ಲ, ಅದನ್ನೇ ವಿವಾದಕ್ಕೆ ಎಡೆಮಾಡಿಕೊಡುವ ಮೇಧಾವಿಗಳೂ ಇದ್ದಾರೆ. ಅಂತಹವರನ್ನು ಎಡಬಿಡಂಗಿಗಳು ಎಂದು ಕರೆಯಬೇಕಾಗುತ್ತದೆ.ದೇಶದಲ್ಲಿ ಬಾಯಿ ಬಡೆದುಕೊಳ್ಳುತ್ತಿರುವವರುಅಮೆರಿಕ, ಪಾಕಿಸ್ತಾನ, ರಷ್ಯಾಕ್ಕೆ ಹೋಗಿ ಅಲ್ಲಿನ ರಾಷ್ಟ್ರೀಯ ವಿಚಾರಧಾರೆ ವಿರುದ್ಧ ಮಾತನಾಡಲಿ’ ಎಂದು ಸವಾಲು ಹಾಕಿದರು.

ಹಿಂದುತ್ವದ ರಾಜಧಾನಿ ನಿರ್ಮಾಣ:ಇಡೀ ವಿಶ್ವಕ್ಕೆ ನಮ್ಮ ದೇಶವನ್ನು ಹಿಂದುತ್ವದ ರಾಜಧಾನಿಯನ್ನಾಗಿ ರೂಪಿಸಬೇಕು. ಇಲ್ಲಿನ ಪರಂಪರೆ, ಸಂಸ್ಕೃತಿಯನ್ನು ಅರಿಯದ ಗೂಬೆಗಳು ಹೇಗೆ ಬೇಕಾದರೂ ಒದರಾಡಿಕೊಳ್ಳಲಿ. ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ಎಡಬಿಡಂಗಿಗಳ ಮಾತನ್ನು ಅವರ ಹೆಂಡತಿಯರೂ ಕೇಳುವುದಿಲ್ಲ. ಹಾಗಾಗಿ ಅವರಿಗೂ ಒಂದು ಉದ್ಯೋಗ ಬೇಕಾಗುತ್ತದೆ. ಆದ್ದರಿಂದಲೇ ಬಾಯಿ ಬಡಿದುಕೊಳ್ಳುತ್ತಾರೆ. ವ್ಯವಸ್ಥೆಯನ್ನು ಶಸ್ತ್ರದ ಮೂಲಕ ಹಾಳು ಮಾಡಲು ಸಾಧ್ಯವಾಗದಿದ್ದಲ್ಲಿ ಈ ರೀತಿ ಅಪಪ್ರಚಾರ ಮಾಡುವುದುಂಟುಎಂದರು.

‘ರಾಷ್ಟ್ರೀಯಯತೆಯ ವಿಚಾರಧಾರೆಗಳನ್ನು ಮಂಡಿಸಿದ ಸಾವರ್ಕರ್ ಅವರ ಅಧ್ಯಯನ ಪೀಠವನ್ನು ಪ್ರಾರಂಭಿಸಬೇಕು. ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ಅವರು ಪತಿತ ಪಾವನ ದೇವಾಲಯವನ್ನು ಪ್ರಾರಂಭಿಸಿದರು’ ಎಂದು ತಿಳಿಸಿದರು.

ಲೇಖಕ ಬಿ.ಜಿ.ಹರೀಶ್ ಮಾತನಾಡಿ, ‘ಬೆಂಗಳೂರು ಐಟಿ ಹಬ್‌ ಎಂದು ಪ್ರಸಿದ್ಧವಾಗಿದೆ. ಅದೇ ರೀತಿ, ಹಿಂದುತ್ವದ ಹಬ್‌ ಆಗಿ ರೂಪಿಸಬೇಕು. ಕೆಲವೇ ಮಂದಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದು ಹಸಿ ಸುಳ್ಳು. ಇದು ಯಾವ ಹಸಿ ಗೋಡೆಯ ಮೇಲೆಯೂ ನಿಲ್ಲಲಾರದು. ಮೇಷ ರಾಶಿಯ ಭಾರತೀಯರನ್ನು ಸಾವರ್ಕರ್ ನಂತಹ ರಾಷ್ಟ್ರೀಯ ವಾದಿಗಳು ಸಿಂಹ ರಾಶಿಯವರನ್ನಾಗಿ ರೂಪಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT