ಶನಿವಾರ, ಸೆಪ್ಟೆಂಬರ್ 25, 2021
22 °C
ಬೆಂಬಲಿಗರ ಜೊತೆ ಕೇತಗಾನಹಳ್ಳಿ ಜಮೀನು ವೀಕ್ಷಣೆಗೆ ಹೋಗಿದ್ದಾಗ ಘಟನೆ

ರಾಮನಗರ: ಹಿರೇಮಠ ಮೇಲೆ ಹಲ್ಲೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಗೆ ಸೋಮವಾರ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಎಸ್‌.ಆರ್. ಹಿರೇಮಠ ಹಾಗೂ ಬೆಂಬಲಿಗರ ಮೇಲೆ ಕೆಲವರು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಕೇತಗಾನಹಳ್ಳಿಯಲ್ಲಿ ಒತ್ತುವರಿಯಾಗಿದೆ ಎನ್ನಲಾದ ಜಮೀನಿನ ವಸ್ತುಸ್ಥಿತಿ ವೀಕ್ಷಣೆಗಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ಸಾಮಾಜಿಕ ಹೋರಾಟಗಾರ ರವಿಕೃಷ್ಣರೆಡ್ಡಿ ನೇತೃತ್ವದ ತಂಡವು ಬೆಳಿಗ್ಗೆ 10.30ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಮನೆಯೊಂದರಲ್ಲಿ ಮಾಹಿತಿ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ಗ್ರಾಮಸ್ಥರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತು.

ಪ್ರಭುಗೌಡ, ಮಲ್ಲಿಕಾರ್ಜುನಯ್ಯ ಎಂಬುವರ ಮೇಲೆ ಹಲ್ಲೆ ನಡೆಸಿತು. ಬ್ಯಾಗ್‌, ಫೋನ್‌ ಕಸಿದುಕೊಂಡು ಹಲ್ಲೆಗೆ ಮುಂದಾಯಿತು. ಕೆಲವರು ಕೋಳಿ ಮೊಟ್ಟೆ ಎಸೆದರು. ಕಾರಿನ ಚಕ್ರಗಳ ಗಾಳಿಯನ್ನೂ ತೆಗೆಯಲಾಗಿತ್ತು ಎಂದು ದೂರಲಾಗಿದೆ. ಈ ಸಂಬಂಧ ಹನುಮಂತೇಗೌಡ ಎಂಬುವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ: ‘ಕೇತಗಾನಹಳ್ಳಿಯಲ್ಲಿ ನಡೆದಿರುವ ಭೂ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿರುವ ಆದೇಶ ಜಾರಿ ಮಾಡುವಂತೆ ಇದೇ 14ರಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ಹೈಕೋರ್ಟ್‌ ವಿಭಾಗೀಯ ಪೀಠವು ಸರ್ಕಾರಕ್ಕೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಮೀನಿನ ಪ್ರಸ್ತುತ ವಸ್ತುಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲು ಬಂದಿದ್ದೆವು. ಆಗ ಈ ಘಟನೆ ನಡೆಯಿತು’ ಎಂದು ಎಸ್‌.ಆರ್. ಹಿರೇಮಠ ವಿವರಿಸಿದರು.

‘ಕೇತಗಾನಹಳ್ಳಿಯಲ್ಲಿ 110 ಎಕರೆ ಗೋಮಾಳವನ್ನು ಒಳಗೊಂಡು 200 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಎಚ್‌.ಡಿ. ದೇವೇಗೌಡರ ಕುಟುಂಬದವರಾದ ಎಚ್‌.ಡಿ. ಕುಮಾರಸ್ವಾಮಿ 54 ಎಕರೆ ಒತ್ತುವರಿ ಮಾಡಿದ್ದಾರೆ. ಡಿ.ಸಿ. ತಮ್ಮಣ್ಣ ಕುಟುಂಬದಿಂದ 94 ಎಕರೆ ಒತ್ತುವರಿ ಆಗಿದೆ. 1988ರಿಂದಲೂ ಈ ಬಗ್ಗೆ ಹೋರಾಟ ನಡೆದಿದೆ. ಆದರೂ ಇವರು ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿದ್ದಾರೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು