ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಗೆ ಬಂತು ಒಳ್ಳೆಯ ಬೆಲೆ

ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ಬಾಳೆಗೂ ಟೆಂಡರ್ ವ್ಯವಸ್ಥೆ
Last Updated 11 ಮೇ 2020, 20:00 IST
ಅಕ್ಷರ ಗಾತ್ರ

ಶಿರಸಿ: ಬಾಳೆಕಾಯಿಗೆ ಟೆಂಡರ್ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿರುವ ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಸ್ಥೆ ರೈತರಲ್ಲಿ ಹರ್ಷ ಮೂಡಿಸಿದೆ. ಲಾಕ್‌ಡೌನ್‌ನಿಂದ ತೋಟದಲ್ಲೇ ಉಳಿದಿದ್ದ ಬಾಳೆಗೆ ಈಗ ಉತ್ತಮ ದರ ಸಿಗುತ್ತಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಬಾಳೆಕಾಯಿ ಟೆಂಡರ್ ಖರೀದಿಗೆ ಮೇ 4ರಂದು ಚಾಲನೆ ನೀಡಿದ್ದರು. ಅಲ್ಲಿಂದ ಈವರೆಗೆ ಸುಮಾರು 210 ರೈತರು 325 ಕ್ವಿಂಟಲ್‌ನಷ್ಟು ಬಾಳೆ ಗೊನೆಗಳನ್ನು ಮಾರಾಟಕ್ಕೆ ತಂದಿದ್ದಾರೆ. ಪ್ರತಿ ಮಂಗಳವಾರ, ಶುಕ್ರವಾರ ಇಲ್ಲಿ ಟೆಂಡರ್ ನಡೆಯುತ್ತದೆ. ಇನ್ನುಳಿದ ದಿನಗಳಲ್ಲಿ ಕದಂಬ ಮಾರ್ಕೆಟಿಂಗ್ ನೇರ ಖರೀದಿ ಮಾಡುತ್ತದೆ.

‘ಟೆಂಡರ್ ವ್ಯವಸ್ಥೆಗೊಳಿಸಿದ್ದು ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ದೂರದ ಹಳ್ಳಿಗಳಿಂದ ಮೂರ್ನಾಲ್ಕು ರೈತರು ಒಟ್ಟಾಗಿ ಉತ್ಪನ್ನಗಳನ್ನು ಬಾಡಿಗೆ ವಾಹನದಲ್ಲಿ ಕಳುಹಿಸಿದರೆ ಸಾಗಾಟದ ವೆಚ್ಚವೂ ತಗ್ಗುತ್ತದೆ. 22ಕ್ಕೂ ಹೆಚ್ಚು ಟೆಂಡರ್‌ದಾರರು ಖರೀದಿಗೆ ಬರುವುದರಿಂದ ಸ್ಪರ್ಧಾತ್ಮಕ ದರ ಲಭ್ಯವಾಗುತ್ತದೆ’ ಎಂದು ಬೆಳೆಗಾರ ಗಣಪತಿ ಚಿಪಗೇರಿ ಪ್ರತಿಕ್ರಿಯಿಸಿದರು.

‘ಬಾಳೆಗೆ ಮಾರುಕಟ್ಟೆಯಿಲ್ಲದೇ, ರೈತರಿಗೆ ಗೊನೆ ಕಡಿದ ಕೂಲಿ ವೆಚ್ಚವೇ ಭಾರವಾಗುತ್ತಿತ್ತು. ತೋಟದಲ್ಲೇ ಗೊನೆಗಳು ಹಣ್ಣಾಗಿ ಕೊಳೆಯುತ್ತಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು ರಾಜ್ಯದಲ್ಲೇ ಮೊದಲ ಬಾರಿಗೆ ಎಪಿಎಂಸಿ ವ್ಯವಸ್ಥೆಯಡಿ ಈ ಪ್ರಯತ್ನ ಮಾಡಲಾಗಿದೆ‘ ಎಂದುಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರಥಮ ದಿನದ ಟೆಂಡರ್‌ನಲ್ಲಿ ಯಾಲಕ್ಕಿ ಮಿಟ್ಲಿ ಬಾಳೆಗೆ ಕೆ.ಜಿ.ಯೊಂದಕ್ಕೆ ₹ 17 ಬೆಲೆ ದೊರೆತಿದ್ದರೆ, ಎರಡನೇ ಟೆಂಡರ್‌ನಲ್ಲಿ ₹ 20 ದರ ಸಿಕ್ಕಿದೆ. ಬರ್ಗಿ ಬಾಳೆ ಕೆ.ಜಿ.ಯೊಂದಕ್ಕೆ ₹ 11 ದರ ಲಭ್ಯವಾಗುತ್ತಿದೆ. ಕನಿಷ್ಠ–ಗರಿಷ್ಠ ಮಿತಿಯಿಲ್ಲ. ಒಂದು ಗೊನೆಯನ್ನು ಸಹ ಮಾರಾಟಕ್ಕೆ ತರಬಹುದು’ ಎಂದು ಅವರು ತಿಳಿಸಿದರು.

***

ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ, ರೈತರಿಗೆ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳುವ ಜಾಗೃತಿ ಮೂಡಿಸಲು ಟೆಂಡರ್ ವ್ಯವಸ್ಥೆ ಸಹಕಾರಿಯಾಗಿದೆ

- ‌ವಿಶ್ವೇಶ್ವರ ಭಟ್ಟ, ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT