ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ತಮ್ಮನನ್ನು ಕೊಲ್ಲಲು ಅಕ್ಕನಿಂದಲೇ ಸುಪಾರಿ, ಆರೋಪಿಗಳ ಬಂಧನ !

ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್‌ ಕ್ಯಾಟ್‌ ರಾಜನಿಂದ ಸಂಚು
Last Updated 4 ಜೂನ್ 2020, 4:43 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ಮಾರಾಟ ಮಾಡಿ ಹಣ ನೀಡಲಿಲ್ಲವೆಂಬ ಕೋಪದಿಂದ ಜೈಲಿನಲ್ಲಿರುವ ರೌಡಿಶೀಟರ್‌ ಪತಿ ಜೊತೆ ಸೇರಿ ತಮ್ಮನ ಹತ್ಯೆಗೆ ಸುಪಾರಿ ನೀಡಿದ್ದ ಅಕ್ಕ, ಸುಪಾರಿ ಪಡೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡೆ ಬೊಮ್ಮಸಂದ್ರದ ನಿವಾಸಿ, ರೌಡಿಶೀಟರ್‌ ಕ್ಯಾಟ್‌ ರಾಜನ ಪತ್ನಿ ಸುಮಲತಾ (25), ಅಂದ್ರಳ್ಳಿಯ ಮಂಜು ಅಲಿಯಾಸ್‌ ಮ್ಯಾಕ್ಸಿ (28), ಮಾರುತಿನಗರದ ಗೌತಮ್‌ ಅಲಿಯಾಸ್‌ ಜಂಗ್ಲಿ (28), ಅಂದ್ರಹಳ್ಳಿಯ ನಿವಾಸಿಗಳಾದ ವಿನಯ್‌ ನಾಯಕ್‌ ಅಲಿಯಾಸ್‌ ತುತ್ತೂರಿ (19) ಮತ್ತು ಮಾಲಾ ಅಲಿಖಾನ್‌ ಅಲಿಯಾಸ್‌ ಮೌಲಾ (21) ಬಂಧಿತರು.

ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣದ ಆರೋಪಿಯಾಗಿರುವ ಕ್ಯಾಟ್‌ ರಾಜ ಸದ್ಯ ಜೈಲಿನಲ್ಲಿದ್ದಾನೆ. ಆತನನ್ನು ಜೈಲಿನಿಂದ ಬಿಡಿಸಲು ಹಣ ಅಗತ್ಯವಿದ್ದು, ಜಮೀನು ಮಾರಾಟ ಮಾಡಿ ಹಣ ನೀಡುವಂತೆ ತಮ್ಮ ಸಂದೀಪ್‌ ರೆಡ್ಡಿಯ ಅಲಿಯಾಸ್‌ ಕೋತಿರೆಡ್ಡಿ ಬಳಿ ಸುಮಲತಾ ಒತ್ತಾಯಿಸಿದ್ದಳು. ಆದರೆ, ಅದಕ್ಕೆ ಸಂದೀಪ್‌ ರೆಡ್ಡಿ ಒಪ್ಪಿರಲಿಲ್ಲ. ಅಲ್ಲದೆ, ಅಕ್ಕನಿಂದ ದೂರವಾಗಿ, ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯ ಬಿ.ಬಿ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ.

ಜಮೀನು ಮಾರಲು ಒಪ್ಪದ ಕಾರಣಕ್ಕೆ ಸಿಟ್ಟಿನಿಂದ ಕ್ಯಾಟ್‌ ರಾಜ ತನ್ನ ಸಹಚರರಾದ ಮಂಜು, ವಿನಯ್‌ ನಾಯಕ್‌, ಗೌತಮ್‌, ಮೌಲಾ ಅಲಿಖಾನ್‌ ಮತ್ತು ಶಶಾಂಕ ಎಂಬವರಿಗೆ ಸಂದೀಪ್‌ ರೆಡ್ಡಿಯನ್ನು ಕೊಲ್ಲಲು ಸುಪಾರಿ ನೀಡಿದ್ದ. ಅದಕ್ಕೆ ಸುಮಲತಾ ಕೂಡಾ ಸಹಾಯ ಮಾಡಿದ್ದಳು. ಸುಪಾರಿ ಪಡೆದ ಆರೋಪಿಗಳು ಮೇ 29ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಸಂದೀಪ ರೆಡ್ಡಿ ಮನೆಗೆ ನುಗ್ಗಿದ್ದರು. ಕೊಲೆ ಮಾಡುವ ಉದ್ದೇಶದಿಂದ ಲಾಂಗ್‌, ಮಚ್ಚುಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪತ್ತೆಗೆ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ ಅವರ ನಿರ್ದೇಶನದಂತೆ ಯಶವಂತಪುರ ಎಸಿಪಿ ಎಂ.ಎಸ್‌. ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಸಂದೀಪ್‌ ರೆಡ್ಡಿ ಮೇಲೆ ನಡೆದ ಹಲ್ಲೆ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT