ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರು ಅಭಾವ; ಅಧಿಕಾರಿಗಳೇ ಹೊಣೆ

ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಎಚ್ಚರಿಕೆ
Last Updated 5 ಮೇ 2018, 14:22 IST
ಅಕ್ಷರ ಗಾತ್ರ

ಯಾದಗಿರಿ: ‘ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳುವ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ನೀರಿನ ಸಮಸ್ಯೆ ಕುರಿತು ದೂರು ಬಂದ ತಕ್ಷಣ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಭವನದದ ಆವರಣದಲ್ಲಿ ಶುಕ್ರವಾರ ನಡೆದ  ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನಪ್ರತಿನಿಧಿಗಳಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ತಿಳಿದಿರುತ್ತದೆ. ಆದರೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಅವರು ಭಾಗವಹಿಸುವಂತಿಲ್ಲ. ಆದ್ದರಿಂದ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಕುಡಿಯುವ ನೀರಿನ ಸಮಸ್ಯೆ ದೂರು ಬಂದಾಗ ಹಳ್ಳಿ ಯಾವುದು? ಜನಸಂಖ್ಯೆ ಎಷ್ಟು? ಸಮಸ್ಯೆ ಉದ್ಭವಿಸಿದ್ದು ಯಾವಾಗ? ತಾತ್ಕಾಲಿಕ ಪರಿಹಾರ ಏನು? ಶಾಶ್ವತ ಪರಿಹಾರ ಏನು? ಎಂಬುದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಮಸ್ಯೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಆಗ ಅಲ್ಲಿರುವ ನೈಜ ಸಮಸ್ಯೆ ಅರ್ಥವಾಗುತ್ತದೆ. ನೀರಿನ ಸಮಸ್ಯೆ ಪರಿಹರಿಸಿದ ಕುರಿತು ವರದಿ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆಗಳು ಗಮನಕ್ಕೆ ಬಂದಾಗ ಲಿಖಿತವಾಗಿ  ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆ ಪರಿಹಾರಕ್ಕಾಗಿ ಪ್ರಸ್ತಾವ ಕಳುಹಿಸುವಾಗ ಕೆಲಸಕ್ಕೆ ತಗುಲುವ ಅಂದಾಜು ವೆಚ್ಚ ಪತ್ರಿಕೆ ಇರಬೇಕು. ಕೊಳವೆಬಾವಿ ಕೊರೆಸಲು ಭೂವಿಜ್ಞಾನ ಇಲಾಖೆಯಿಂದ ಸ್ಥಳ ಗುರುತಿಸಬೇಕು. ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಸಿ ಸರ್ಕಾರದ ಹಣ ದುರುಪಯೋಗ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಚ್. ಮಲ್ಲಿಕಾರ್ಜುನ ಮಾತನಾಡಿ,‘ಯಾದಗಿರಿ ವಿಭಾಗದಲ್ಲಿ ಏ.6 ರಿಂದ ಮೇ 3ರವರೆಗೆ ಸಹಾಯವಾಣಿ ಮುಖಾಂತರ 29 ದೂರುಗಳು ಬಂದಿವೆ. ಅವುಗಳಲ್ಲಿ 12 ಪರಿಹರಿಸಲಾಗಿದ್ದು, 17 ಬಾಕಿ ಉಳಿದಿವೆ. ಬಾಕಿ ಉಳಿದ 17 ದೂರುಗಳ ಪೈಕಿ 2 ವಿದ್ಯುತ್ ಸಮಸ್ಯೆಯಿಂದ ನೀರು ಸಿಗುತ್ತಿಲ್ಲ. 4 ಹೊಸ ಕೊಳವೆಬಾವಿ ಕೊರೆಯಲು ಟಾಸ್ಕ್‌ಫೋರ್ಸ್‌ನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. 9 ಕೊಳವೆಬಾವಿ ದುರಸ್ತಿ ಕ್ರಮಕ್ಕಾಗಿ ಪಿಡಿಒ ಅವರಿಗೆ ಪತ್ರ ಬರೆಯಲಾಗಿದೆ’ ಎಂದರು.‌

‘ಶಹಾಪುರ ಉಪ ವಿಭಾಗದಲ್ಲಿ ಒಟ್ಟು 69 ದೂರುಗಳು ಬಂದಿದ್ದು, 13 ಸಮಸ್ಯೆ ಪರಿಹರಿಸಲಾಗಿದೆ. 56 ಸಮಸ್ಯೆಗಳು ಬಾಕಿ ಇವೆ. ಸುರಪುರ ಉಪ ವಿಭಾಗದಲ್ಲಿ 19 ದೂರುಗಳು ಬಂದಿದ್ದು, 13 ಪರಿಹರಿಸಲಾಗಿದೆ. 6 ಹೊಸ ಕೊಳವೆಬಾವಿ ಕೊರೆಯಲು ಟಾಸ್ಕ್‌ಫೋರ್ಸ್‌ನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಯಾದಗಿರಿ ಉಪ ವಿಭಾಗದಲ್ಲಿ 15 ದೂರುಗಳು ಬಂದಿದ್ದು, 2 ಪರಿಹರಿಸಲಾಗಿದೆ. 13 ಬಾಕಿ ಉಳಿದಿವೆ. ಬಾಕಿ ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಟಾಸ್ಕ್‌ಫೋರ್ಸ್ ಮುಖಾಂತರ ಮತ್ತು ಪಿಡಿಒ ಅವರಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಂಬಂಧಪಟ್ಟ ಸಹಾಯ ಕಾರ್ಯಪಾಲಕ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಪಿ.ನಂದಗಿರಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ಸಹಾಯವಾಣಿ: ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ತಾಲ್ಲೂಕುವಾರು ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಯಾದಗಿರಿ:08473- 250271, ಶಹಾಪುರ:08479- 244554, ಸುರಪುರ: 08443-257344 ಗೆ ಸಂಪರ್ಕಿಸಬಹುದು.

**
ಕುಡಿಯುವ ನೀರಿನ ಸಮಸ್ಯೆ ಪರಿಹಾರ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ
– ಜೆ.ಮಂಜುನಾಥ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT