ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

55 ವರ್ಷ ಮೀರಿದ ಸಿಬ್ಬಂದಿಗೆ ಠಾಣೆಯಲ್ಲೇ ಕೆಲಸ: ಗೃಹಸಚಿವ ಬಸವರಾಜ ಬೊಮ್ಮಾಯಿ

ವೈಜ್ಞಾನಿಕವಾಗಿ ಪೊಲೀಸ್ ಕೆಲಸ ಪಾಳಿ ಬದಲಾವಣೆಗೆ ಸೂಚನೆ
Last Updated 22 ಮೇ 2020, 13:09 IST
ಅಕ್ಷರ ಗಾತ್ರ

ಮೈಸೂರು: ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದ್ದು, 55 ವರ್ಷ ಮೀರಿದ ಸಿಬ್ಬಂದಿಯನ್ನು ಠಾಣೆಯಲ್ಲೇ ನಿಯೋಜಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.‌

ಇನ್ನುಳಿದ ಸಿಬ್ಬಂದಿಯನ್ನು ವೈಜ್ಞಾನಿಕವಾದ ಪಾಳಿಯ ಆಧಾರದ ಮೇಲೆ ಕೆಲಸಕ್ಕೆ ನಿಯೋಜಿಸಬೇಕು. ಕನಿಷ್ಠ 10 ದಿನಗಳಿಗೊಮ್ಮೆ ರಜೆ ನೀಡಬೇಕು ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

ಸೋಂಕಿತರಾದ ಪೊಲೀಸ್ ಸಿಬ್ಬಂದಿಯ ಸಂಚಾರದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಅಗತ್ಯ ಕಂಡು ಬಂದರೆ ಕೆಲವು ಪೊಲೀಸ್ ಠಾಣೆಗಳನ್ನೂ ‘ಸೀಲ್‌ಡೌನ್‌’ ಮಾಡಲಾಗುತ್ತದೆ ಎಂದರು.

ತಬ್ಲೀಘ್‌ ಸಂಘಟನೆಯ ಸದಸ್ಯರಿಂದ ಕೊರೊನಾ ಸೋಂಕು ಸಮಾಜಕ್ಕೆ ಹರಡುವುದನ್ನು ತಪ್ಪಿಸುವಲ್ಲಿ ಪೊಲೀಸರ ಪಾತ್ರ ದೊಡ್ಡದು. ಕೊರೊನಾ ಸೋಂಕು ತಡೆಯುವುದು ಹೇಗೆ ಎನ್ನುವದಕ್ಕೆ ಮೈಸೂರು ಒಂದು ಮಾದರಿ ಎನಿಸಿದೆ ಎಂದು ಅವರು ಶ್ಲಾಘಿಸಿದರು.

ಆನೇಕಲ್ ಗಡಿ ಪ್ರದೇಶದಲ್ಲಿ ವಲಸಿಗರು ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಮೇಲೆ ಈ ಸಂಖ್ಯೆ ಏರಿದೆ. ಇದನ್ನು ತಡೆಯಲು ವಿಶೇಷ ಪರಿವೀಕ್ಷಣಾ ತಂಡ ರಚಿಸಲಾಗುವುದು ಎಂದು ತಿಳಿಸಿದರು.

ಕೆಲ ಜಿಲ್ಲೆಗಳಿಗೆ ಈಗಾಗಲೇ 30 ಸಾವಿರಕ್ಕೂ ಅಧಿಕ ಜನರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ಇವರನ್ನೆಲ್ಲ ಕ್ವಾರಂಟೈನ್‌ ಮಾಡಲಾಗುವುದು ಎಂದರು.

ಜುಬಿಲೆಂಟ್ಸ್ ಕಾರ್ಖಾನೆಯ ವಿಚಾರದಲ್ಲಿ ಮುಖ್ಯಮಂತ್ರಿ ಅವರ ತೀರ್ಮಾನವೇ ಅಂತಿಮ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಾರ್ಗಸೂಚಿಗಳು ಹಾಗೂ ನಿರ್ಬಂಧಗಳನ್ವಯ ಕಾರ್ಖಾನೆಯ ತೆರೆಯಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಬ್ಬರ ವಿರುದ್ಧ ದೂರು ಬಂದರೆ ಏನು ಮಾಡಬೇಕು ಎಂಬುದ್ದಕ್ಕೆ ಸುಪ್ರೀಂಕೋರ್ಟಿನ ತೀರ್ಪು ಇದೆ. ಅದರ ಅನ್ವಯ ಕ್ರಮ ಕೈಗೊಳ್ಳಲಾಗಿದೆ. ‘ರಿಪಬ್ಲಿಕ್ ಟಿ.ವಿ’ಯ ಅರ್ನಾಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ 1,500 ದೂರುಗಳು ದಾಖಲಾಗಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ’ ಎಂದು ಚಾಟಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT