ಶುಕ್ರವಾರ, ಜೂನ್ 5, 2020
27 °C
ಭಟ್ಕಳದ ಕೋವಿಡ್ ಸೋಂಕಿತ ಮಹಿಳೆ ಗುಣಮುಖ, ಕೊರೊನಾ ಮುಕ್ತ

ಕೋವಿಡ್‌–19 | ಉಡುಪಿ ಮಲ್ಲಿಗೆ, ಸಿಹಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ ಸೋಂಕು ತಗುಲಿದ ಬಳಿಕ ಬಹಳ ಹೆದರಿದ್ದೆ. ಗರ್ಭಿಣಿಯಾಗಿದ್ದರಿಂದ ಆತಂಕ ಹೆಚ್ಚಾಗಿಯೇ ಇತ್ತು. ಚಿಕಿತ್ಸೆಗೆ ದಾಖಲಾದ ಬಳಿಕ ವೈದ್ಯರ ಹಾಗೂ ಶುಶ್ರೂಷಕರ ಶ್ರಮದಿಂದ ಸಂಪೂರ್ಣ ಗುಣಮುಖಳಾಗಿದ್ದೇನೆ. ಸಾಧ್ಯವಾದರೆ, ಹೆರಿಗೆ ಮಾಡಿಸಿಕೊಳ್ಳಲು ಉಡುಪಿಗೇ ಬರುತ್ತೇನೆ. ಇಲ್ಲಿನ ಆಸ್ಪತ್ರೆ ಸಿಬ್ಬಂದಿಗೆ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ..

ಹೀಗೆ, ಕೋವಿಡ್‌ ಸೋಂಕಿಗೆ ತುತ್ತಾಗಿ ಗುಣಮುಖರಾದ ಬಳಿಕ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭ ಭಟ್ಕಳದ ಮಹಿಳೆ ಮಾಧ್ಯಮದ ಎದುರು ಭಾವುಕರಾದರು.

ಉಡುಪಿಯಲ್ಲಿ ಸಿಕ್ಕ ವೈದ್ಯಕೀಯ ನೆರವನ್ನು ಮರೆಯುವುದಿಲ್ಲ. ವೈದ್ಯರ ಸೇವೆ ಹಾಗೂ ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು. ಆಸ್ಪತ್ರೆಯಲ್ಲಿದ್ದಷ್ಟು ದಿನ ಮನೆಯಲ್ಲಿಯೇ ಇದ್ದಂತಹ ಅನುಭವವಾಯಿತು. ಪ್ರತಿದಿನ ನನ್ನ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದರು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ‘ಉಡುಪಿಗೆ ಶುಕ್ರವಾರ ಶುಭ ದಿನ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೋವಿಡ್‌ ಸೋಂಕಿತ ಗರ್ಭಿಣಿಗೆ ಅಲ್ಲಿ ಅಗತ್ಯ ಚಿಕಿತ್ಸೆ ಸಿಗದಿದ್ದಾಗ, ಉಡುಪಿಗೆ ಕರೆತಂದು ಚಿಕಿತ್ಸೆ ಕೊಡಲಾಯಿತು. ಮಹಿಳೆ ಸೋಂಕಿನಿಂದ ಗುಣಮುಖರಾಗಿದ್ದು, ಅವರ ಜಿಲ್ಲೆಗೆ ಸಂಭ್ರಮದಿಂದ ಬೀಳ್ಕೊಟ್ಟಿದ್ದೇವೆ’ ಎಂದರು.

ನೆರೆ ಜಿಲ್ಲೆಯ ಸೋಂಕಿತ ಮಹಿಳೆಯನ್ನು ಉಡುಪಿಗೆ ಕರೆತರುವ ನಿರ್ಧಾರಕ್ಕೆ ಜಿಲ್ಲಾಡಳಿತ ಮೊದಲು ಒಪ್ಪಿರಲಿಲ್ಲ. ಕಾರಣ, ಕೋವಿಡ್‌ ಆಸ್ಪತ್ರೆಯಲ್ಲಿ ಜಿಲ್ಲೆಯ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುವುದಾಗಿ ಡಾ.ಟಿಎಂಎ ಪೈ ಆಸ್ಪತ್ರೆಯ ಜತೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿತ್ತು.

ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಮಹಿಳೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು. ಮಹಿಳೆಯ ಎರಡೂ ವರದಿಗಳು ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಿದ್ದೇವೆ. ಡಾ.ಶಶಿಕಿರಣ್ ನೇತೃತ್ವದ ತಂಡಕ್ಕೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಸಾಂಪ್ರದಾಯಿಕ ಬೀಳ್ಕೊಡುಗೆ: ಗುಣಮುಖರಾದ ಗರ್ಭಿಣಿಗೆ ಉಡುಪಿ ಮಲ್ಲಿಗೆ, ಹೂ–ಹಣ್ಣು, ಸಿಹಿ ತಿನಿಸುಗಳನ್ನು ನೀಡಿ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್‌, ಡಿಎಚ್‌ಒ ಸುಧೀರ್ ಚಂದ್ರ ಸೂಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿ ಮಹಿಳೆಯನ್ನು ಭಟ್ಕಳಕ್ಕೆ ಕಳುಹಿಸಿದರು.

ದಾಖಲಾಗಿದ್ದು ಯಾವಾಗ
ಮಹಿಳೆಯು ಏ.9ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. 21ರಂದು ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. 23ರಂದು ಎರಡನೇ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ 24 ಡಿಸ್‌ಚಾರ್ಜ್ ಮಾಡಲಾಯಿತು.

ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರೇಮಾನಂದ್, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಡಾ. ಶಶಿ ಕಿರಣ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು