ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಧ್ಯಕ್ಷರ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು

ರಾಜೀನಾಮೆ ಅಂಗೀಕರಿಸದೆ ಆಡಳಿತ ಪಕ್ಷ ಅಧಿಕಾರದಲ್ಲಿರಲು ಅವಕಾಶ ನೀಡಲಾಗಿದೆ
Last Updated 10 ಜುಲೈ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಶಾಸಕರ ರಾಜೀನಾಮೆ ಅಂಗೀಕರಿಸದೇ ಆಡಳಿತ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದ್ದಾರೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಬಿಜೆಪಿ ದೂರು ನೀಡಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಿಯೋಗ ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

‘ರಾಜೀನಾಮೆ ನೀಡಿದ ಶಾಸಕರನ್ನು ಬೆದರಿಸುವ ಕೆಲಸ ನಡೆದಿದೆ. ಒಬ್ಬ ಸದಸ್ಯ ರಾಜೀನಾಮೆ ನೀಡಲು ಬಯಸಿದ್ದರೆ ಅದನ್ನು ಪ್ರಶ್ನಿಸಲು ಹೇಗೆ ಸಾಧ್ಯ? ಇದು ಪ್ರಜಾಪ್ರಭುತ್ವದ ಅಣಕ. ಶಾಸಕ ರಾಜೀನಾಮೆ ನೀಡುವುದು ಅಥವಾ ಬಿಡುವುದು ಆತನ ಸಾಂವಿಧಾನಿಕ ಹಕ್ಕು’ ಎಂದೂ ಬಿಜೆಪಿ ನಾಯಕರು ರಾಜ್ಯಪಾಲರಿಗೆ ತಿಳಿಸಿದರು.

‘ಸಾಂವಿಧಾನಿಕ ನಿಬಂಧನೆಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸಭಾಧ್ಯಕ್ಷರಿಗೆ ಸೂಚಿಸಬೇಕು. ಅಲ್ಲದೆ, ಸರ್ಕಾರದಲ್ಲಿರುವವರು ಯಾವುದೇ ಆದೇಶಗಳನ್ನು ನೀಡದಂತೆ ತಡೆಹಿಡಿಯಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ಒಟ್ಟು 14 ಶಾಸಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವರಾಗಿದ್ದ, ಇಬ್ಬರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದು ಬಿಜೆ‍ಪಿಯನ್ನು ಬೆಂಬಲಿಸಿದ್ದಾರೆ. ಇದರಿಂದ ಆಡಳಿತ ಪಕ್ಷ ಅಲ್ಪಮತಕ್ಕೆ ಇಳಿದಿದೆ’ ಎಂದೂ ಹೇಳಿದರು.

‘ಕರ್ನಾಟಕ ವಿಧಾನಸಭೆ ನಿಯಮ 202 ಮತ್ತು ಸಂವಿಧಾನದ 190(3)(ಬಿ) ವಿಧಿಯ ಪ್ರಕಾರ ಸಭಾಧ್ಯಕ್ಷರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕು. ಶಾಸಕರು ಒಂದೋ ಖುದ್ದಾಗಿ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬೇಕು. ಒಂದು ವೇಳೆ ನೇರವಾಗಿ ನೀಡದೇ ಅಂಚೆ ಮೂಲಕ ಅಥವಾ ಏಜೆಂಟ್‌ ಮೂಲಕ ಕಳಿಸಿದ್ದರೆ, ರಾಜೀನಾಮೆಯ ನೈಜತೆಯನ್ನು ಪರಿಶೀಲಿಸಬಹುದು. ಆದರೆ ತಿರಸ್ಕರಿಸಲು ಸಾಧ್ಯವಿಲ್ಲ’ ಎಂದು ರಾಜ್ಯಪಾಲರು ಮನವರಿಕೆ ಮಾಡಲು ಯತ್ನಿಸಿದರು.

* ಅಧಿವೇಶನ ನಡೆಸುವ ನೈತಿಕತೆ ಕುಮಾರಸ್ವಾಮಿಗೆ ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು

-ಬಿ.ಎಸ್‌.ಯಡಿಯೂರಪ್ಪ,ವಿಧಾನಸಭೆ ವಿರೋಧ ಪಕ್ಷದ ನಾಯಕ

ರಾಜಭವನದಿಂದ ಶಾಸಕರ ನಡಿಗೆ

ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ಬಂದಾಗ ಅವರು ಹೊರಗೆ ಕಾಯಬೇಕಾಗಿರಲಿಲ್ಲ. ಆದರೆ, ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುವ ಉದ್ದೇಶದಿಂದ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಇವರನ್ನು ಬಹಳ ದೂರವೇ ಇರಿಸಲಾಗಿತ್ತು. ‘ಬಿಜೆಪಿಗೆ ಅನುಕೂಲವಾಗುವಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಮತ್ತು ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮಿನ್ಸ್ಕ್‌ ಚೌಕದಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಆದರೆ, ಮೆರವಣಿಗೆಗೆ ಪೊಲೀಸರು ಅವಕಾಶ ನೀಡಲೇ ಇಲ್ಲ.

ಸರ್ಕಾರ ರಚನೆಗೆ ಅವಕಾಶ ನೀಡಬೇಕು

ಬಿಜೆಪಿ ಬಹುಮತ ಹೊಂದಿದ್ದು ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದರು.

ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ವೇಳೆ ಮಾತನಾಡಿ, ಕಾಂಗ್ರೆಸ್‌– ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿದ್ದರಿಂದ ಕುಮಾರಸ್ವಾಮಿಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಆದ್ದರಿಂದ, ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಸಭಾಧ್ಯಕ್ಷರ ಕೊಠಡಿಗೆ ಪ್ರವೇಶಿಸಿ ರಾಜೀನಾಮೆ ಪತ್ರ ಹರಿದು ಹಾಕುವ ಗೂಂಡಾ ವರ್ತನೆ ಆಡಳಿತ ಪಕ್ಷದ ನಾಯಕರಿಂದ ನಡೆದಿದೆ. ಈ ಬಗ್ಗೆ ಸಭಾಧ್ಯಕ್ಷರು ಒಂದೇ ಒಂದು ಮಾತನ್ನು ಆಡಿಲ್ಲ ಎಂದೂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಸಭಾಧ್ಯಕ್ಷ ಶಾಸಕರ ರಾಜೀನಾಮೆ ಅಂಗೀಕಾರ ಮಾಡದೇ ಇರುವುದು ತಪ್ಪು ಎಂದು ಆಕ್ಷೇಪಿಸಿದರು.

ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ನಾಳೆ ತೀರ್ಪು ಹೊರ ಬೀಳಲಿದೆ. ಅವಮಾನ ಆಗುವುದಕ್ಕೆ ಮೊದಲು ಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಹಿರಿಯ ನಾಯಕರಾದ ಜಗದೀಶ ಶೆಟ್ಟರ್, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ ಮುಂತಾದವರು ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT