ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಗ್ರಹಣಕ್ಕೆ ಅನುಮತಿ ನಿರಾಕರಣೆ: 'ಮಾತು ತಪ್ಪಿದ ಯಡಿಯೂರಪ್ಪ'- ಶಿವಕುಮಾರ್ ಬೇಸರ

ಸರ್ಕಾರ ಒಪ್ಪಿಗೆ ಕೊಟ್ಟ ಮೇಲಷ್ಟೇ ಪದಗ್ರಹಣ
Last Updated 10 ಜೂನ್ 2020, 10:24 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆಯುವವರು, ಸಣ್ಣ ರಾಜಕಾರಣ ಮಾಡುವುದಿಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಪದಗ್ರಹಣ ವಿಚಾರದಲ್ಲಿ ಆ ನಂಬಿಕೆ ಹುಸಿಯಾಗಿದೆ. ಸರ್ಕಾರ ಒಪ್ಪಿಗೆ ಕೊಟ್ಟ ಮೇಲಷ್ಟೇ ಪದಗ್ರಹಣ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.

ಇದು ಇಡೀ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಯಾವುದೇ ಕಾರಣಕ್ಕೂ ನಾವು ಇದನ್ನು ನಿಲ್ಲಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ, ನೀವು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ ಮಾಡುತ್ತೇನೆ. ಈಗ ಯೋಜಿಸಿರುವಂತೆಯೇ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು.

'ಮಾರ್ಚ್ 12ರಂದು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ಕ್ಷಣದಿಂದ ಒಂದು ನಿಮಿಷ ವ್ಯಯ ಮಾಡದೇ ಕೆಲಸ ಮಾಡುತ್ತಿದ್ದೇನೆ.‌ ಸಾಂಪ್ರದಾಯಿಕವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಡೆಯಬೇಕಿತ್ತು. ಮೂರು ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಿಕೆಯಾಗಿದೆ. ಮೇ 31, ಜೂನ್ 7, ಅನಂತರ ಜೂನ್ 14ರಂದು ದಿನಾಂಕ ನಿಗದಿಯಾಗಿತ್ತು.‌ ಇದಕ್ಕೆ ಪೊಲೀಸ್ ಆಯುಕ್ತರ ಮೌಕಿಕ‌ ಅನುಮತಿ ಪಡೆಯಲಾಗಿತ್ತು. 7,800 ಕಡೆ ಜಾಗವನ್ನೂ ನಿಗದಿಪಡಿಸಲಾಗಿತ್ತು, ಹೆಚ್ಚುವರಿಯಾಗಿ ಮೂರುವರೆ ಸಾವಿರ ಜಾಗದಲ್ಲಿ ಎಲ್ಇಡಿ‌ ಸ್ಕ್ರೀನ್ ಹಾಕಿ ಒಂದೂವರೆ ತಿಂಗಳಿನಿಂದ ತಯಾರಿ ನಡೆಸಿದ್ದರೆ ನಿನ್ನೆ ಸಂಜೆ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ವಿಷಾದಿಸಿದರು.‌

ಅನುಮತಿ ಕೇಳಿ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ ಸೇರಿ‌ ಎಲ್ಲರಿಗೂ ಪತ್ರ ಬರೆಯಲಾಗಿತ್ತು. ಯಾವ ರೀತಿ ಕಾರ್ಯಕ್ರ‌ಮ ನಡೆಯಲಿದೆ ಎಂದು ವಿವರ ನೀಡಲಾಗಿತ್ತು. ಕೆಪಿಸಿಸಿ ಮುಂದೆ ಸಾಮಾಜಿಕ‌ ಅಂತರ ಕಾಪಾಡಿಕೊಂಡು ಪೆಂಡಾಲ್ ಹಾಕಿ, ನೂರೈವತ್ತು ಜನ‌ ಭಾಗವಹಿಸುವವರಿದ್ದರು.‌ ಅದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಸಚಿವರು ಹೋದ ಕಡೆಯಲೆಲ್ಲಾ ಯಾವ ರೀತಿ ಕಾರ್ಯಕ್ರಮ‌‌ ನಡೆಯುತ್ತಿದೆ ಎಂದು ಗೊತ್ತಿದೆ. ಪದಗ್ರಹಣಕ್ಕೆ ಅನುಮತಿ‌ ನಿರಾಕರಿಸಿರುವುದು ರಾಜಕೀಯ ದಾಖಲೆ. ಅಷ್ಟೇ ಅಲ್ಲ ಕಾಂಗ್ರೆಸ್ ಶಾಸಕಾಂಗ ಸಭೆಗೂ ಅನುಮತಿ ನಿರಾಕರಿಸಿದರು. ಯಾವ ಕಾರಣಕ್ಕೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಕಾಣುತ್ತಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಹೀಗಾಗಿ ಅವರು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ ಮಾಡುತ್ತೇವೆ ಎಂದು ಘೋಷಿಸಿದರು.

'ಬಿಜೆಪಿಯ ಅನೇಕ ಮುಖಂಡರು ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರೇ ಕಾನೂನು ಮಾಡಿ ಅದನ್ನು ಉಲ್ಲಂಘನೆ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಇಲ್ಲ. ನಾವು ಕಾನೂನಾತ್ಮಕವಾಗಿ ಅನುಮತಿ ಕೇಳಿದರೆ ಕೊಡುತ್ತಿಲ್ಲ. ಸರ್ಕಾರದ ಈ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಅಲ್ಲಿನ ಬಿಜೆಪಿ ನಾಯಕರು ಮೆಗಾ ರ್‍ಯಾಲಿ ನಡೆಸಿದ್ದಾರೆ.‌ ಬಿಹಾರದಲ್ಲಿ ಎಪ್ಪತ್ತು‌ ಸಾವಿರ ಎಲ್ಇಡಿ ಹಾಕಿ‌ ಕಾರ್ಯಕ್ರಮ ಮಾಡಿದ್ದಾರೆ.‌ ಅವರಿಗೆ ಒಂದು ನಮಗೆ ಒಂದು ಕಾನೂನು ಇದೆಯಾ?

ಆನ್‌ಲೈನ್ ಕಾರ್ಯಕ್ರಮ ನಮ್ಮ ಐಡಿಯಾ, ಇದನ್ನು ಬಿಜೆಪಿ ನಕಲು ಮಾಡಿದೆ. ಸ್ವಂತ ಕಾರ್ಯಕ್ರಮಗಳನ್ನು ಮಾಡಲು ಆಗದೆ ನಮ್ಮನ್ನು ನಕಲು ಮಾಡುತ್ತಿದ್ದಾರೆ. ನಮಗೆ ಅನುಮತಿ ನಿರಾಕರಿಸಿ, ಬಿಜೆಪಿ ನಮ್ಮದೇ ರೀತಿಯಲ್ಲಿ ವರ್ಚುವಲ್ ಕಾರ್ಯಕ್ರ‌ಮ ಮಾಡುತ್ತಿದೆ. ಅದೇ ದಿನ ಅದೇ ಸಮಯಕ್ಕೆ ಕಾರ್ಯಕ್ರ‌ಮ ನಡೆಸುತ್ತಿದೆ. ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿ ಅವರು ಕಾರ್ಯಕ್ರಮ ಮಾಡುವುದಕ್ಕೆ, ರಾಷ್ಟ್ರೀಯ ಪ್ರಕೃತಿ ವಿಕೋಪ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕೂರಲ್ಲ. ‌ವಿಧಾನ ಪರಿಷತ್ ಚುನಾವಣೆ ಬಳಿಕ ರಾಜಕೀಯೇತರ ಪ್ರವಾಸ ಮಾಡುತ್ತೇನೆ. ‌ಕೊರೊನಾದಲ್ಲಿ ಜನರ ಕಷ್ಟಗಳೇನು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ಯಾಕೇಜ್ ತಲುಪಿದ್ಯಾ ಎಂದು‌ ಕೇಳುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈ ಪ್ರವಾಸದಲ್ಲಿ ಭಾಗವಹಿಸುತ್ತಾರೆ. ಬಾವುಟ ಬಳಸಲ್ಲ. ಪ್ರತಿಪಕ್ಷದ ಅಧ್ಯಕ್ಷನಾಗಿ ಈ ಸಂದರ್ಭದಲ್ಲಿ ಜನರ ಪರಿಸ್ಥಿತಿ ಹಾಗೂ ಸಮಸ್ಯೆ ಅರಿಯುವುದು ನನ್ನ ಕರ್ತವ್ಯ ಎಂದು ಶಿವಕುಮಾರ್ ತಿಳಿಸಿದರು.

'ನನಗೆ ಮುಖ್ಯಮಂತ್ರಿಯವರ ಪ್ರೀತಿ ಬೇಕಿಲ್ಲ. ಜನರ ಪ್ರೀತಿ ಸಾಕು' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT