ಭಾನುವಾರ, ಡಿಸೆಂಬರ್ 8, 2019
20 °C

ಸಿದ್ದರಾಮಯ್ಯ ಕ್ಷಮೆಯಾಚಿಸದಿದ್ದರೆ ಹಕ್ಕುಚ್ಯುತಿ ಮಂಡನೆ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸ್ಪೀಕರ್ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದರೆ ಸದನದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಬಗ್ಗೆಯೂ ಸಿದ್ದರಾಮಯ್ಯ ಮನಬಂದತೆ ಮಾತನಾಡಿರುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ತಿರುಗೇಟು: ಹಕ್ಕುಚ್ಯುತಿ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾನೇಕೆ ಕ್ಷಮೆಯಾಚಿಸಬೇಕು? ಯಡಿಯೂರಪ್ಪ ಹೇಳಿದ ತಕ್ಷಣ ಕ್ಷಮೆ ಕೇಳಬೇಕಾ? ಎಂದು ತಿರುಗೇಟು ನೀಡಿದರು.

‘ಸ್ಪೀಕರ್ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದೇನೆ. ನನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲಿ ನೋಡೋಣ’ ಎಂದರು. 

‘40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಯಾರಿಗೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆ. ಈ ಬಗ್ಗೆ ಯಡಿಯೂರಪ್ಪ ಅವರಿಂದ ಪಾಠ ಕಲಿಯುವ ಅಗತ್ಯ ಇಲ್ಲ’ ಎಂದರು.

ಪರಿಹಾರ ನೀಡುವಲ್ಲಿ ತಾರತಮ್ಯ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೆಲವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಅನೇಕರ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮಳೆ, ಪ್ರವಾಹ ಸಂದರ್ಭದಲ್ಲಿ ಬಿದ್ದುಹೋಗಿರುವ ಮನೆ, ಅಂಗಡಿಗಳಿಗೆ ಪರಿಹಾರ ನೀಡಿಲ್ಲ. ಬೆಳೆ ಪರಿಹಾರ ನೀಡಿಲ್ಲ. ಶಾಲೆಗಳು ಇನ್ನೂ ದುರಸ್ತಿ ಮಾಡಿಲ್ಲ. ಮಕ್ಕಳು ಸಮುದಾಯ ಭವನ, ದೇವಸ್ಥಾನಗಳಲ್ಲಿ ಪಾಠ ಕಲಿಯುತ್ತಿದ್ದಾರೆ ಎಂದರು.

ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ ಹೆಸರು ಪ್ರಕಟಿಸಲಾಗುವುದು ಎಂದರು.

ಒಂದೇ ವಿಮಾನದಲ್ಲಿ ಪ್ರಯಾಣ
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿ ಬಂದು, ಸಂಜೆ ಕೂಡ ಒಂದೇ ವಿಮಾನದಲ್ಲಿ ವಾಪಸಾದರು.

ಇವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದ ಆವರಣದಲ್ಲಿ ಬಿಜೆಪಿ, ಕಾಂಗ್ರೆಸ್‌ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪಾಲಿಕೆ ಮಾಜಿ ಸದಸ್ಯ ಬಿಜೆಪಿಯ ಶಿವಾನಂದ ಮುತ್ತಣವರ, ಯಡಿಯೂರಪ್ಪ ಅವರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರೆ, ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದಿಸಿ ಬರಮಾಡಿಕೊಂಡರು.

ಉಡಾಫೆ ಮಾತು ಬೇಡ: ಸೋಮಣ್ಣ
ಮೈಸೂರು:
‘ಸಿದ್ದರಾಮಯ್ಯ, ನಾನು ಏಕವಚನದಲ್ಲಿ ಮಾತನಾಡುವುದು ರೂಢಿ. ಆದರೆ ಸಭಾಧ್ಯಕ್ಷರ ಬಗ್ಗೆ ಉಡಾಫೆಯಿಂದ ಮಾತನಾಡಬಾರದು’ ಎಂದು ಸಚಿವ ಸೋಮಣ್ಣ ಶನಿವಾರ ಪಿರಿಯಾಪಟ್ಟಣದಲ್ಲಿ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಅನುಭವ ಇರುವವರು. ಯಾರನ್ನೋ ಮೆಚ್ಚಿಸಲಿಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಅವರೇ ಅರ್ಥ ಮಾಡಿಕೊಳ್ಳಬೇಕು’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವ್ಯಾಕರಣ ತಿಳಿಯದ ಸಿದ್ದರಾಮಯ್ಯ: ಸುರೇಶಕುಮಾರ್ ಲೇವಡಿ
ಹಿರಿಯೂರು:
‘ಪ್ರಾಥಮಿಕ ಶಾಲೆಯಲ್ಲಿ ನಾವೆಲ್ಲ ಏಕವಚನ–ಬಹುವಚನದ ಬಗ್ಗೆ ಕಲಿತಿದ್ದೇವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನ ಮಾತ್ರ ಕಲಿತಿದ್ದು, ಅವರಿಗೆ ಬಹುವಚನದ ಬಗ್ಗೆ ಗೊತ್ತೇ ಇಲ್ಲ’ ಎಂದು ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಲೇವಡಿ ಮಾಡಿದರು.

ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ವಿಧಾನ ಸಭಾಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದಕ್ಕೆ ಕಿಡಿಕಾರಿದರು. ‘ವ್ಯಾಕರಣದ ಮೇಷ್ಟ್ರು ಆಗಿರುವ ಸಿದ್ದರಾಮಯ್ಯಗೆ ಮಾತನಾಡುವ ಪರಿ ಗೊತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

*
ಸಿದ್ದರಾಮಯ್ಯ, ನಾನು ಏಕವಚನದಲ್ಲಿ ಮಾತನಾಡುವುದು ರೂಢಿ. ಆದರೆ ಸಭಾಧ್ಯಕ್ಷರ ಬಗ್ಗೆ ಉಡಾಫೆಯಿಂದ ಬಾಯಿಗೆ ಬಂದಂತೆ ಮಾತನಾಡಬಾರದು.
-ವಿ. ಸೋಮಣ್ಣ, ವಸತಿ ಸಚಿವ

*
ಪ್ರಾಥಮಿಕ ಶಾಲೆಯಲ್ಲಿ ನಾವೆಲ್ಲ ಏಕವಚನ–ಬಹುವಚನದ ಬಗ್ಗೆ ಕಲಿತಿದ್ದೇವೆ. ಆದರೆ, ಸಿದ್ದರಾಮಯ್ಯ ಏಕವಚನ ಮಾತ್ರ ಕಲಿತಿದ್ದು, ಅವರಿಗೆ ಬಹುವಚನದ ಬಗ್ಗೆ ಗೊತ್ತೇ ಇಲ್ಲ.
-ಎಸ್.ಸುರೇಶಕುಮಾರ್, ಶಿಕ್ಷಣ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು