ರಾಜಧಾನಿಯಲ್ಲಿ ಅಂತರ್ಜಲ ಮಟ್ಟ ಕುಸಿತ: ‘ಕಾವೇರಿ’ಗೆ ಹೆಚ್ಚಿದ ಬೇಡಿಕೆ

ಶುಕ್ರವಾರ, ಮೇ 24, 2019
26 °C

ರಾಜಧಾನಿಯಲ್ಲಿ ಅಂತರ್ಜಲ ಮಟ್ಟ ಕುಸಿತ: ‘ಕಾವೇರಿ’ಗೆ ಹೆಚ್ಚಿದ ಬೇಡಿಕೆ

Published:
Updated:

ಬೆಂಗಳೂರು: ರಾಜಧಾನಿಯಲ್ಲಿ ಅಂತರ್ಜಲ ಮಟ್ಟ ಕುಸಿದು ಅನೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಇದರ ಪರಿಣಾಮ ಕಾವೇರಿ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಕಾವೇರಿಯಿಂದ ಗರಿಷ್ಠ ಪ್ರಮಾಣದ 145 ಕೋಟಿ ಲೀಟರ್ ನೀರನ್ನು ಜಲಮಂಡಳಿ ಪ್ರತಿನಿತ್ಯ ಪೂರೈಕೆ ಮಾಡುತ್ತಿದೆ.

ನಗರಕ್ಕೆ ವಲಸೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರಣ ನೀರಿನ ಬೇಡಿಕೆ ಕೂಡ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ನೀರು ಪೂರೈಕೆಗೆ ಜಲಮಂಡಳಿ ಕಸರತ್ತು ನಡೆಸುತ್ತಿದೆ.

ನಗರದಲ್ಲಿ ಸುಮಾರು 3.73 ಲಕ್ಷ ಕೊಳವೆಬಾವಿಗಳಿವೆ. ಶೇ 60ರಷ್ಟು ನಿವಾಸಿಗಳು ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಇನ್ನೂ ಹಲವರು ಎರಡೂ ಮೂಲದಿಂದ ನೀರು ಪಡೆಯುತ್ತಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮಳೆ ಬಾರದ ಕಾರಣ ಕೊಳವೆಬಾವಿಗಳು ಬತ್ತಿ ಹೋಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆದರೆ, ನಗರದಲ್ಲಿ ನೀರು ಬಳಕೆದಾರರ ಪ್ರಮಾಣ ಕೂಡ ಶೇ 7ರಿಂದ 8ರಷ್ಟು ಜಾಸ್ತಿಯಾಗಿದೆ. 2018ರಲ್ಲಿ ನಿತ್ಯ 135 ಕೋಟಿ ಲೀಟರ್‌ ನೀರು ಪೂರೈಸಲಾಗುತ್ತಿತ್ತು. ಈ ವರ್ಷ 145 ಕೋಟಿ ಲೀಟರ್ ನೀರು ಪೂರೈಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಹೇಳಿದರು.

‌16 ಟಿಎಂಸಿ ಅಡಿ ನೀರು: ಕಾವೇರಿ ಜಲಾನಯನ ‍ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಒಟ್ಟು 16.30 ಟಿಎಂಸಿ ಅಡಿ ನೀರಿದೆ. ಹಾರಂಗಿಯಲ್ಲಿ ಕಳೆದ ವರ್ಷಕ್ಕಿಂತ ಅಲ್ಪ ಪ್ರಮಾಣ ಕಡಿಮೆ ಇದ್ದರೆ, ಹೇಮಾವತಿ, ಕಬಿನಿ ಮತ್ತು ಕೃಷ್ಣರಾಜ ಸಾಗರದಲ್ಲಿ ಹೆಚ್ಚಿನ ಪ್ರಮಾಣದಲ್ಲೇ ನೀರಿದೆ. ಹೀಗಾಗಿ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾವೇರಿಯಿಂದ ಗರಿಷ್ಠ ಎಷ್ಟು ಪ್ರಮಾಣದ ನೀರನ್ನು ಪಡೆಯಲು ಸಾಧ್ಯವಿದೆಯೋ ಅಷ್ಟನ್ನೂ ಈಗ ಪಡೆಯಲಾಗುತ್ತಿದೆ. 145 ಕೋಟಿ ಲೀಟರ್‌ಗಿಂದ ಹೆಚ್ಚು ನೀರು ಪಡೆಯುವ ಸಾಮರ್ಥ್ಯ ಸದ್ಯಕ್ಕೆ ಇಲ್ಲ ಎಂದರು.

‘ಬೋರ್‌ವೆಲ್‌ಗಳು ಬತ್ತಿರುವುದರಿಂದ ಆಗಿರುವ ವ್ಯತ್ಯಾಸವನ್ನು ಕಾವೇರಿ ನೀರಿನ ಮೂಲಕ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರಿಲ್ಲ. ಇದರ ನಡುವೆಯೂ ನಗರದ ಅಲ್ಲಲ್ಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಸತ್ಯ’ ಎಂದು ಹೇಳಿದರು.

**

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾವೇರಿ ನೀರಿನ ಪೂರೈಕೆ ಪ್ರಮಾಣ ಹೆಚ್ಚಾಗಿದೆ. ಅಂತರ್ಜಲ ಕುಸಿದು ಕೊಳವೆಬಾವಿಗಳು ಬತ್ತಿರುವುದರಿಂದ ಸಮಸ್ಯೆ ಕಾಣಿಸುತ್ತಿದೆ.
-ತುಷಾರ್‌ ಗಿರಿನಾಥ್‌, ಜಲ ಮಂಡಳಿಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !