ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪದಲ್ಲೂ ಸಿಎಎ ವಿರೋಧಿ ಪ್ರತಿಧ್ವನಿ

‘ಕಾಲಹರಣ’ ಸರಿಯಲ್ಲ ಎಂದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ: ಕಾಂಗ್ರೆಸ್ ಸಭಾತ್ಯಾಗ
Last Updated 18 ಫೆಬ್ರುವರಿ 2020, 20:22 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್) ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಪ್ರತಿಧ್ವನಿಸಿ ಕೋಲಾಹಲಕ್ಕೆ ಕಾರಣವಾಯಿತು.

ಈ ವಿಚಾರದ ಬಗ್ಗೆ ಮಂಗಳವಾರವೇ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.

ವಿಧಾನಸಭೆಯಲ್ಲಿ ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳೂರು ಗೋಲಿಬಾರ್‌ಗೆ ಇಬ್ಬರ ಸಾವು ಹಾಗೂ ಬೀದರ್‌ನ ಶಾಹಿನ್‌ ಪ್ರಾಥಮಿಕ ಶಾಲೆಯಲ್ಲಿ ನಾಟಕ ಪ್ರದರ್ಶನ ‍ಪ್ರಕರಣದಲ್ಲಿ ದೇಶದ್ರೋಹ ಪ್ರಕರಣದಡಿ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯ ತಾಯಿಯನ್ನು ಜೈಲಿಗಟ್ಟಿದ ಪ್ರಕರಣವನ್ನು ಪ್ರಸ್ತಾಪಿಸಿ ದರು. ಪೊಲೀಸರು ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅಮಾಯಕರ ಮೇಲೆ ದೇಶದ್ರೋಹದ ‍ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಕಿಡಿಕಾರಿ ದರು. ನಿಲುವಳಿ ಸೂಚನೆ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

‘ಈ ವಿಷಯವನ್ನು ನಿಯಮ 68ಕ್ಕೆ ಪರಿವರ್ತಿಸಲಾಗಿದೆ. ಬುಧವಾರ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಪ್ರಸ್ತಾವ ಮಂಡಿಸುವಂತೆ ಬಿಜೆಪಿಯ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಸೂಚಿಸಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಡಹಳ್ಳಿ ಮಾತನಾಡಲು ಆರಂಭಿಸಿದರು. ಆಗ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

‘ವಿಷಯದ ಪ್ರಾಥಮಿಕ ಮಂಡನೆಗೆ ಅವಕಾಶ ನೀಡಿದ್ದೇನೆ. ಈಗ ರಾಜ್ಯಪಾಲರ ವಂದನಾ ನಿರ್ಣಯದ ಬಗ್ಗೆ ಚರ್ಚೆ ಆರಂಭವಾಗಿದೆ. ನಿಯಮ 60 ಹೆಸರಿನಲ್ಲಿ ಕಾಲಹರಣ ಮಾಡುವುದು ಸರಿಯಲ್ಲ’ ಎಂದು ಕಾಗೇರಿ ಹೇಳಿದರು. ಈ ಮಾತು ವಿರೋಧ ಪಕ್ಷದ ನಾಯಕರನ್ನು ಕೆರಳಿಸಿತು. ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಪಟ್ಟು ಹಿಡಿದರು. ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸದಸ್ಯರ ಜತೆಗೆ ಸಭಾತ್ಯಾಗ ಮಾಡಿದರು.

ಜೆಡಿಎಸ್‌ ಮೌನ: ಸಿಎಎ ಬಗ್ಗೆ ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸುತ್ತಿದ್ದಾಗ ಜೆಡಿಎಸ್‌ ನಾಯಕರು ಮೌನಕ್ಕೆ ಶರಣಾಗಿದ್ದರು.

ತುರ್ತು ಪರಿಸ್ಥಿತಿಯಿಂದ ತುಕ್ಡೆ ಗ್ಯಾಂಗ್‌ವರೆಗೆ

ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ: 1975ರಲ್ಲಿ ದೇಶದಲ್ಲಿ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.

ರಾಮಲಿಂಗಾರೆಡ್ಡಿ, ಕಾಂಗ್ರೆಸ್‌: ಸಂವಿಧಾನದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಗೆ ಅವಕಾಶ ಇದೆ.

ಕೆ.ಎಸ್‌.ಈಶ್ವರಪ್ಪ,ಸಚಿವ: ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿ ಇದ್ದಾಗ ತುರ್ತು ಪರಿಸ್ಥಿತಿ ವಿರೋಧಿಸಿದ್ದರು. ಈಗ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರದ್ದು ದ್ವಿಮುಖ ನೀತಿ.

ಬಸವರಾಜ ಬೊಮ್ಮಾಯಿ, ಸಚಿವ: ತುರ್ತು ಪರಿಸ್ಥಿತಿ ಹೇರಿಕೆ ಬಗ್ಗೆ ನಿಮಗೆ ಈಗ ಜ್ಞಾನೋದಯ ಆಯಿತೇ? ತುಕ್ಡೆ ಗ್ಯಾಂಗ್‌ನ ಮಾಲೀಕರು ಯಾರು ಎಂಬ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಅದನ್ನು ಬಹಿರಂಗಪಡಿಸುತ್ತೇವೆ.

ಪ್ರಿಯಾಂಕ್‌ ಖರ್ಗೆ, ಕಾಂಗ್ರೆಸ್: ಬಿಜೆಪಿಯ ಐಟಿ ಘಟಕದ ಮಾದರಿಯಲ್ಲೇ ಗೃಹ ಸಚಿವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.

ಸೌಮ್ಯಾ ರೆಡ್ಡಿ, ಕಾಂಗ್ರೆಸ್‌: ತುಕ್ಡೆ ಗ್ಯಾಂಗ್‌ನ ನಿಜವಾದ ಮಾಲೀಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT