ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಪುನಃಶ್ಚೇತನಕ್ಕೆ ಅನುವು: ಮೇ 4ರಿಂದ ಕೈಗಾರಿಕಾ ಚಟುವಟಿಕೆ ಆರಂಭ

ಕಂಟೇನ್ಮೆಂಟ್‌ ವಲಯಕ್ಕೆ ಅನ್ವಯವಾಗದು * ಕೊರೊನಾ ಸಮಸ್ಯೆ 3–4 ತಿಂಗಳು ಮುಂದುವರಿಯುವ ಸಾಧ್ಯತೆ
Last Updated 30 ಏಪ್ರಿಲ್ 2020, 18:38 IST
ಅಕ್ಷರ ಗಾತ್ರ

ಬೆಂಗಳೂರು: ಮೇ 4 ರ ಬಳಿಕ ಕೋವಿಡ್‌ ಕಂಟೈನ್‌ಮೆಂಟ್ (ನಿರ್ಬಂಧಿತ)‌ ವಲಯಗಳ ಹೊರತಾಗಿ ಬೆಂಗಳೂರು ನಗರವೂ ಸೇರಿ ರಾಜ್ಯದ ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಮೂಲಕ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ‘ಆರ್ಥಿಕ ಯಂತ್ರ’ಕ್ಕೆ ದೊಡ್ಡ ಮಟ್ಟದಲ್ಲಿ ಮರು ಚಾಲನೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇದಕ್ಕೆ ಪೂರಕವೆಂಬಂತೆ ಉದ್ಯಮಿಗಳ ಜತೆ ಸಂಜೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್‌ ಸಂಬಂಧ ಕೆಲವು ಷರತ್ತುಗಳನ್ನು ಪಾಲಿಸುವ ಮೂಲಕ ಉದ್ಯಮಗಳ ಪುನರಾರಂಭಕ್ಕೆ ಪೂರ್ವ ತಯಾರಿ ನಡೆಸಿಕೊಳ್ಳಿ ಎಂದು ಸಲಹೆಯನ್ನೂ ನೀಡಿದರು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ,‘ಕೋವಿಡ್‌–19 ನಿಯಂತ್ರಣಕ್ಕೆ ಕೈಗೊಂಡ ಕಠಿಣ ಕ್ರಮಗಳು, ಚಿಕಿತ್ಸಾ ಕ್ರಮ, ಸರ್ಕಾರ ಕಲ್ಪಿಸಿದ ಸೌಲಭ್ಯ ಮತ್ತು ಮಾಧ್ಯಮಗಳು ನಡೆಸಿದ ಜಾಗೃತಿ ಆಂದೋಲನದಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಕಳೆದ 3– 4 ದಿನಗಳಿಂದ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಬೆಂಗಳೂರು ನಗರದ ಸುತ್ತುಮುತ್ತ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಆರಂಭಿಸಲು ಅನುಕೂಲವಾಗುತ್ತದೆ. ಇನ್ನು ಎರಡು ಮೂರು ದಿನ ಕಾದು ನೋಡುತ್ತೇವೆ’ ಎಂದರು.

‘ಒಂದು ವೇಳೆ ಕೊರೊನಾ ಸಮಸ್ಯೆ ಇನ್ನೂ 2–3 ತಿಂಗಳು ಮುಂದುವರಿದರೆ, ಕೆಂಪು ವಲಯದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿ, ಉಳಿದ ಕಡೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅನಿವಾರ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ, ಕೊರೊನಾ ಸಮಸ್ಯೆ ಜತೆಗೆ ಹೋರಾಡುತ್ತಲೇ, ಆರ್ಥಿಕ ಚಟುವಟಿಕೆಗೆ ಪುನಶ್ಚೇತನ ನೀಡಬೇಕು. ಎರಡೂ ಒಟ್ಟಿಗೆ ನಡೆಯಬೇಕು’ ಎಂದು ಅವರು ಹೇಳಿದರು.

ಉದ್ಯಮಗಳು ಆರಂಭವಾದಾಗ ಕೆಲವರು ಅಂತರ್‌ ಜಿಲ್ಲೆಗಳ ಮಧ್ಯೆ ಓಡಾಡಬೇಕಾಗುತ್ತದೆ. ಅಂತಹವರಿಗೆ ಪಾಸ್‌ ನೀಡಲು ಕೈಗಾರಿಕಾ ಆಡಳಿತ ಮಂಡಳಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಬಹುದು ಎಂದರು.

ಮೇ 3ರವರೆಗೆ ಮದ್ಯದಂಗಡಿ ಇಲ್ಲ: ಮದ್ಯದಂಗಡಿಗಳು, ಹೇರ್‌ ಕಟ್ಟಿಂಗ್‌ ಸಲೂನ್‌ಗಳು, ಮಾಲ್‌, ಸಿನಿಮಾ ಮಂದಿರ ಮತ್ತು ರೆಸ್ಟೊರೆಂಟ್‌ಗಳನ್ನು ಮೇ 3ರ ವರೆಗೆ ತೆರೆಯುವಂತಿಲ್ಲ. ಆ ಬಳಿಕ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಅಂತರ ಜಿಲ್ಲೆ – ಅಂತರ ರಾಜ್ಯ ಸಂಚಾರ
ವಿವಿಧ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ಸಿಕ್ಕಿಕೊಂಡವರು ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳಿಗೆ ಹೋಗಲು ಅಥವಾ ಬರಲು ಒಂದು ಬಾರಿ ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ.

ಇದರಿಂದ ವಿದ್ಯಾರ್ಥಿಗಳು ಮತ್ತು ಇತರರಿಗೆ ಅನುಕೂಲವಾಗಲಿದೆ. ಈ ಸಂಬಂಧ ಮುಖ್ಯಕಾರ್ಯದರ್ಶಿಯವರು ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಹೊರ ರಾಜ್ಯಗಳಿಂದ ಬರುವವರು ಇದ್ದರೆ ಅವರನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್‌ ಬಂದರೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ಸಂಬಂಧ ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.

‘ಊರುಗಳಿಗೆ ಹೋಗುವವರು ತಮ್ಮದೇ ಖರ್ಚಿನಲ್ಲಿ ಹೋಗಬೇಕು. ಸರ್ಕಾರ ಖರ್ಚು ಭರಿಸುವುದಿಲ್ಲ. ಒಂದು ಗುಂಪು ಸೇರಿ ಬಸ್ಸಿನಲ್ಲಿ ಹೋಗಲು ಬಯಸಿದರೆ ಅವರಿಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ. ಆಗಲೂ ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಪ್ರಯಾಣಕ್ಕೆ ಅನುಮತಿಯನ್ನು ಸರ್ಕಾರ ನೀಡುತ್ತದೆ’ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಮೇ 3ರವರೆಗೆ ಮದ್ಯದಂಗಡಿ, ಸಲೂನ್‌ ಇಲ್ಲ
ಮದ್ಯದಂಗಡಿಗಳು, ಹೇರ್‌ ಕಟ್ಟಿಂಗ್‌ ಸಲೂನ್‌ಗಳು, ಮಾಲ್‌, ಸಿನಿಮಾ ಮಂದಿರ ಮತ್ತು ರೆಸ್ಟೊರೆಂಟ್‌ಗಳನ್ನು ಮೇ 3ರ ವರೆಗೆ ತೆರೆಯುವಂತಿಲ್ಲ. ಆ ಬಳಿಕ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

₹ 30 ಲಕ್ಷ ಪರಿಹಾರ
ಕೋವಿಡ್‌–19 ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು ಮತ್ತು ಪೊಲೀಸ್‌ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT