ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆಯಲ್ಲಿ ಗರ್ಭಿಣಿಯಾದ ಬಾಲಕಿಯರು: ಪೋಕ್ಸೊ ಅಡಿ ದೂರು

ಚನ್ನಪಟ್ಟಣದ ಇರುಳಿಗರ ದೊಡ್ಡಿಯಲ್ಲಿ ಬಾಲ್ಯವಿವಾಹ ಹೆಚ್ಚಳ: ಕಾನೂನು ಅಸ್ತ್ರದ ಪ್ರಯೋಗ
Last Updated 13 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ರಾಮನಗರ: ಇರುಳಿಗ ಸಮುದಾಯದ ಬಾಲಕಿಯರಜೊತೆಗೆ ಸಹಬಾಳ್ವೆ ನಡೆಸಿ ಅವರ ಗರ್ಭಧಾರಣೆಗೆ ಕಾರಣರಾದ ಅದೇ ಸಮುದಾಯದ ಮೂವರು ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ!

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುಳಿಗರ ದೊಡ್ಡಿಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿವೆ. ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೆ ಅಲ್ಲಿನ ವಸ್ತುಸ್ಥಿತಿ ಕಂಡು ಆಶ್ವರ್ಯವಾಗಿದೆ. ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ವೇಳೆಗೆ ಐದಕ್ಕೂ ಹೆಚ್ಚು ಮಂದಿ ಬಾಲ್ಯ ವಿವಾಹಕ್ಕೆ ಒಳಗಾಗಿದ್ದು, ಅವರಲ್ಲಿ ಮೂವರು ಗರ್ಭಿಣಿಯರಾಗಿರುವುದು ಕಂಡು ಬಂದಿದೆ. ಇವರೆಲ್ಲರೂ 14ರಿಂದ 17 ವಯಸ್ಸಿನವರು.

‘18 ವಯಸ್ಸಿನ ಒಳಗಿನ ಬಾಲಕಿಯರು ವಿವಾಹವಾಗಿದ್ದರೂ ಅದು ಊರ್ಜಿತವಲ್ಲ. ಹೀಗಾಗಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕಾಗುತ್ತದೆ. ಅಂತಹ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ಪೋಕ್ಸೊ ಕಾಯ್ದೆ ಅಡಿ ಅತ್ಯಾಚಾರ ಎಂದೇ ಕಾನೂನು ಹೇಳುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಪೋಕ್ಸೊಕಾಯ್ದೆ ಅಡಿ ದೂರು ದಾಖಲಿಸುತ್ತಿದ್ದೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುರೇಂದ್ರ ತಿಳಿಸಿದರು.

‘ಗರ್ಭ ಧರಿಸಿರುವ ಬಾಲಕಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೆರಿಗೆ ಆದರೆ ಕಷ್ಟ. ನಾಲ್ಕು ತಿಂಗಳು ತುಂಬಿರುವ ಕಾರಣ ಕಾನೂನಿನ ಪ್ರಕಾರ ಗರ್ಭಪಾತ ಮಾಡಿಸಲೂ ಆಗದು’ ಎಂದು ವಿವರಿಸಿದರು.

ಸಹಬಾಳ್ವೆ ಹೆಚ್ಚು: ಈ ಇರುಳಿಗರ ಕಾಲೊನಿಯಲ್ಲಿ ಸುಮಾರು 70 ಮನೆಗಳಿದ್ದು, 380ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಪೈಕಿ 110 ಮತದಾರರು ಇದ್ದಾರೆ. ಮಕ್ಕಳ ಸಂಖ್ಯೆ ಅತ್ಯಧಿಕವಾಗಿದೆ. ಸ್ಥಳೀಯಅಂಗನವಾಡಿಗೆ 40 ಮಕ್ಕಳು ಬಂದರೆ, ಪಕ್ಕದ ಶಾಲೆಗಳಿಗೆ 100ಕ್ಕೂ ಹೆಚ್ಚು ಮಕ್ಕಳು ಹೋಗುತ್ತಾರೆ. 30ಕ್ಕೂ ಹೆಚ್ಚು ಮಕ್ಕಳು ಅರ್ಧದಲ್ಲೇ ಶಾಲೆ ಬಿಟ್ಟಿದ್ದಾರೆ. ಬಾಲ್ಯವಿವಾಹದ ಜೊತೆಗೆ ಅಪೌಷ್ಟಿಕತೆ ಪ್ರಮಾಣವೂ ಹೆಚ್ಚಿದೆ.

‘ಹೆಣ್ಣುಮಕ್ಕಳು ಗರ್ಭ ಧರಿಸಿದಾಗಲೇ ನಮಗೂ ಗೊತ್ತಾಗುತ್ತದೆ. ನಂತರ ಅಂತಹವರಿಗೆ ಮದುವೆ ಮಾಡಿಬಿಡುತ್ತೇವೆ’ ಎಂದು ಕಾಲೊನಿಯ ಪೋಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

***

ಕಾಲೊನಿಯ ಮೂವರು ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಅದಕ್ಕೆ ಕಾರಣರಾದವರ ಮೇಲೆ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲಾಗಲಿದೆ
ಸುರೇಂದ್ರ
- ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT