ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಹಂತದಲ್ಲಿ ₹46,000 ಕೋಟಿ ರೈತರ ಸಾಲ ಚುಕ್ತಾ– ’ಇದು ಲಾಲಿಪಪ್‌ ಅಲ್ಲ’

Last Updated 13 ಜನವರಿ 2019, 11:24 IST
ಅಕ್ಷರ ಗಾತ್ರ

ಬೆಂಗಳೂರು:ಫೆಬ್ರುವರಿ 8ರಂದು ಮಂಡಿಸಲಿರುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಎರಡನೇ ಬಜೆಟ್‌ನಲ್ಲಿರಾಜ್ಯದ ರೈತರ ₹ 46 ಸಾವಿರ ಕೋಟಿ ಸಾಲವನ್ನು ಒಂದೇ ಸಲಕ್ಕೆ ಮನ್ನಾಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಪಿಟಿಐ ವಿಶೇಷ ವರದಿ ಮಾಡಿದೆ.

ರೈತರ ಸಾಲ ಮನ್ನಾ ಕುರಿತು ಆಗಸ್ಟ್‌ 8ರಂದು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದಾಗ ನಾಲ್ಕು ಹಂತಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮ‌ನ್ನಾ ಮಾಡಲು ತೀರ್ಮಾನಿಸಲಾಗಿತ್ತು. ಸಾಲ ಮನ್ನಾ ವಿಳಂಬದ ಬಗ್ಗೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲೇ ಸಂಪೂರ್ಣ ಸಾಲ ತೀರಿಸಲು ಅಗತ್ಯವಿರುವ ಅನುದಾನವನ್ನು ಫೆ.8ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಹಂಚಿಕೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲದ ವಿವರಗಳ ನಿರ್ವಹಣೆಗೆ ಐಎಎಸ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ಘಟಕವೂ ರಚನೆಯಾಗಿದೆ.ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ದೇಶದಲ್ಲೇ ಮಾದರಿ ಮಾಡುವ ವಿಶ್ವಾಸವನ್ನೂ ಸಿಎಂ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಪ್ರಧಾನಿ ಮೋದಿ, ರೈತರಿಗೆ ’ಲಾಲಿಪಪ್‌’ ತೋರಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಹೀಗಳೆದಿದ್ದರು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ತೀರಿಸಲು ನೋಟಿಸ್‌ ಜಾರಿ ಮಾಡಿತ್ತು ಎಂದು ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.

’ಮುಂಬರುವ ಬಜೆಟ್‌ನಲ್ಲಿಯೇ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಅದಕ್ಕಾಗಿ ನಾನು 4 ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ. ಇದೇನೂ ಲಾಲಿಪಪ್‌ ಅಲ್ಲ ಎಂಬುದನ್ನು ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ...’ ಎಂದಿದ್ದಾರೆ.

’ಚುನಾಯಿತ ಸರ್ಕಾರವು ಮನಸ್ಸು ಮಾಡಿದರೆ, ವಿತ್ತೀಯ ಹೊಣೆಗಾರಿಕೆಯನ್ನು ಕಡೆಗಣಿಸದ ಹಾಗೆ ನಿಯೋಜಿತ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ. ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಿರುವ ಅನುದಾನದಿಂದ ₹46,000 ಕೋಟಿ ಸಾಲ ಪೂರ್ಣ ಮನ್ನಾ ಆಗಲಿದೆ’ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2018ರ ಜುಲೈನಲ್ಲಿ ಸರ್ಕಾರ ರೈತರ ಸಾಲ ಪೂರ್ಣ ಮನ್ನಾ ಘೋಷಣೆ ಮಾಡಿತ್ತು.ಜನವರಿ 11ರ ವರೆಗೂ 1,70,000 ರೈತರ ಸಾಲ ಮನ್ನಾ ಆಗಿದ್ದು, ಇದಕ್ಕಾಗಿ ₹900 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ. ಸರ್ಕಾರ ರಚನೆಯಾಗಿ ಮೊದಲ ವರ್ಷದಲ್ಲೇ ಸಾಲ ಮನ್ನಾಕ್ಕಾಗಿ ₹9,000 ಕೋಟಿ ಅನುದಾನ ಘೋಷಣೆಯಾಗಿದೆ. ಜನವರಿ 31ರೊಳಗೆ 11–12 ಲಕ್ಷ ರೈತರು ಸಾಲ ಮನ್ನಾ ಯೋಜನೆಯ ಲಾಭ ಪಡೆಯಲಿದ್ದಾರೆ.

ಸರ್ಕಾರಕ್ಕೆ ಇನ್ನೂ ಏಳು ತಿಂಗಳು

ಯುಪಿಎ ಸರ್ಕಾರ ₹70 ಸಾವಿರ ಕೋಟಿ ರೈತರ ಸಾಲ ಮನ್ನಾ ಘೋಷಿಸಿತ್ತು. ಆದರೆ, ಆ ಹಣ ತಲುಪಲು ಎಷ್ಟು ಸಮಯ ಹಿಡಿದಿದೆ ಎಂಬುದನ್ನು ಪರಿಶೀಲಿಸಬಹುದು. ನನಗಿಂತಲೂ ಮುಂಚೆ ಅಧಿಕಾರಕ್ಕೆ ಬಂದಿರುವ ಅನೇಕ ರಾಜ್ಯ ಸರ್ಕಾರಗಳೂ ಸಹ ಸಾಲ ಮನ್ನಾ ಘೋಷಿಸಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ,...ಈ ರಾಜ್ಯಗಳಲ್ಲಿಯೂ ಯೋಜನೆಗಾಗಿ ಈಗಾಗಲೇ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ನೀವೇ ಪರಿಶೀಲಿಸಬಹುದು. ನಮ್ಮ ಸರ್ಕಾರಕ್ಕೆ ಇನ್ನೂ ಏಳು ತಿಂಗಳು ಕಳೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಸರ್ಕಾರವು ಚರ್ಚೆಯಲ್ಲಿದ್ದು, ಒಂದೇ ಬಾರಿಗೆ ಸಾಲ ತೀರಿಸುವ ಯೋಜನೆ ಇರುವುದರಿಂದ ಬ್ಯಾಂಕ್‌ಗಳಿಂದ ರಿಯಾಯಿತಿ ನಿರೀಕ್ಷಿಸಲಾಗುತ್ತಿದೆ. ಸಹಕಾರಿ ಬ್ಯಾಂಕ್‌ಗಳಿಂದ ರೈತರ ಸಾಲದ ಮೊತ್ತ ₹9,500 ಕೋಟಿ ಎಂಬುದು ಸರ್ಕಾರಕ್ಕೆ ದೊರೆತಿರುವ ಮಾಹಿತಿ. ಆದರೆ, ಇವುಗಳಲ್ಲಿ ಕೆಲವು ನಕಲಿ ಅರ್ಜಿಗಳೂ ಸೇರಿವೆ ಎಂದರು.

ಬೀದಿ ಬದಿಯ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವ ಬಡವರ ಬಂಧುಯೋಜನೆ ಹಾಗೂ ಇಸ್ರೇಲಿ ಮಾದರಿ ಕೃಷಿ ವ್ಯವಸ್ಥೆ ಅನುಷ್ಠಾನದ ಹಂತದಲ್ಲಿದ್ದು, ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ಹೊಸ ಕಾರ್ಯಕ್ರಮಗಳು ಇರಲಿವೆ ಎಂಬ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT