ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಸಾವಿರ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ!

Last Updated 13 ಜೂನ್ 2020, 1:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಅಪಾರ ಹಾನಿ ಉಂಟಾಗಿ ವರ್ಷವೇ ಸಮೀಪಿಸುತ್ತಿದೆ. ಆದರೆ, ಬರೋಬ್ಬರಿ 9 ಸಾವಿರಕ್ಕೂ ಹೆಚ್ಚಿನ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ.

ಹೋದ ವರ್ಷ ಜುಲೈ ಅಂತ್ಯದಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರವಾಹ ಬಂದು ಅಪಾರ ಹಾನಿ ಉಂಟಾಗಿತ್ತು. ಆಗ ಮನೆ ಕಳೆದುಕೊಂಡ ಅವರಿಗೆ ತಾಂತ್ರಿಕ ಸಮಸ್ಯೆ ಅಥವಾ ಸಮರ್ಪಕ ದಾಖಲೆಗಳಿಲ್ಲ ಎನ್ನುವ ಕಾರಣಕ್ಕೆ ಪರಿಹಾರ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕೃತ ಅಂಕಿ–ಅಂಶಗಳು ಹೇಳುತ್ತಿವೆ.

ಇವರಲ್ಲಿ ಚಿಕ್ಕೋಡಿ, ಅಥಣಿ, ನಿಪ್ಪಾಣಿ, ಗೋಕಾಕ, ರಾಮದುರ್ಗ, ಬೆಳಗಾವಿ, ಸವದತ್ತಿ, ಖಾನಾಪುರ ತಾಲ್ಲೂಕುಗಳವರು ಹೆಚ್ಚಿದ್ದಾರೆ. ಮನೆಗಳ ದುರಸ್ತಿ ಅಥವಾ ಮರು ನಿರ್ಮಾಣಕ್ಕೆ ಆರ್ಥಿಕ ಶಕ್ತಿ ಇಲ್ಲದೆ ಅವರು ಅತಂತ್ರರಾಗಿಯೇ ಇದ್ದಾರೆ. ಬಿದ್ದ ಜಾಗದಲ್ಲೇ ಶೆಡ್‌ನಲ್ಲೋ ಅಥವಾ ಬಂಧುಗಳ ಮನೆಯಲ್ಲೋ ಇದ್ದಾರೆ. ಸಂಪೂರ್ಣವಾಗಿ ಸೂರು ಕಳೆದುಕೊಂಡಿರುವವರಿಗೂ ನೆರವು ದೊರೆತಿಲ್ಲ. ಇನ್ನೊಂದು ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ಅವರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಹೋರಾಟದ ಎಚ್ಚರಿಕೆ:ಈ ನಡುವೆ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವ ರಾಮದುರ್ಗದ ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರು, ಕೂಡಲೇ ಪರಿಹಾರ ನೀಡದಿದ್ದಲ್ಲಿ ಜೂನ್ 15ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಪಂಚಾಯಿತಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ, ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಅಲೆದು ಸಾಕಾಗಿದೆ. ಪಂಚಾಯಿತಿಯವರು, ಬರುತ್ತದೆ ಎಂದಷ್ಟೇ ಹೇಳುತ್ತಾರೆ. ಇರುವ ಒಂದೇ ಕೊಠಡಿಯಲ್ಲೇ ಮಕ್ಕಳನ್ನು ಕಟ್ಟಿಕೊಂಡು 9 ಜನ ಇದ್ದೇವೆ. ಮತ್ತೆ ಪ್ರವಾಹ ಬರುತ್ತದೆ ಎನ್ನುತ್ತಿದ್ದಾರೆ. ಮತ್ತೆ ಎಲ್ಲಿಗೆ ಹೋಗಬೇಕೋ ಗೊತ್ತಿಲ್ಲ’ ಎಂದು ಚಿಕ್ಕೋಡಿ ತಾಲ್ಲೂಕು ಕಲ್ಲೋಳದ ಸಂತ್ರಸ್ತೆ ಜೈತುನ್ ಚಂದೂರೆ ಅಳಲು ತೋಡಿಕೊಂಡರು.

ಹಲವು ಕಾರಣ:‘ಇವುಗಳಲ್ಲಿ ಸಂಪೂರ್ಣ, ಭಾಗಶಃ ಹಾಗೂ ಕಡಿಮೆ ಪ್ರಮಾಣದಲ್ಲಿ ಹಾನಿಗೆ ಒಳಗಾಗಿರುವ ಮನೆಗಳು ಸೇರಿವೆ. ಸರ್ಕಾರಿ ಅಥವಾ ಅರಣ್ಯ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿರುವ 3ಸಾವಿರಕ್ಕೂ ಹೆಚ್ಚಿನ ಮನೆಗಳಿವೆ. ಐದುಸಾವಿರ ಮನೆಗಳು ಸಕ್ರಮವಾಗಿ ನಿರ್ಮಿಸಿದವು. ಆಸ್ತಿಯ ದಾಖಲೆ ಇಲ್ಲದಿರುವುದು, ಕೌಟುಂಬಿಕ ವ್ಯಾಜ್ಯ ಇರುವುದು, ಸಹೋದರರಿಂದ ತಕರಾರು ಅರ್ಜಿ ಸಲ್ಲಿಕೆ ಆಗಿರುವುದು, ಬೇರೆ ರಾಜ್ಯಗಳ ಪಡಿತರ ಚೀಟಿ ಹೊಂದಿರುವುದು ಮೊದಲಾದ ಕಾರಣಗಳಿಂದಾಗಿ ಪರಿಹಾರ ನೀಡಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನಿಗದಿತ ತಂತ್ರಾಂಶದಲ್ಲಿ ಡೇಟಾ ಎಂಟ್ರಿ ಮಾಡಲು ಅವಕಾಶ ನೀಡುವಂತೆ ಕೋರಿದ್ದೇವೆ. ಅನುಮತಿ ದೊರೆತರೆ ಮತ್ತೆ ಜಿಪಿಎಸ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಬಳಿಕ ಪರಿಹಾರ ವಿತರಣೆ ಸಾಧ್ಯವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

**

ತಾಂತ್ರಿಕ ಕಾರಣದಿಂದ ಬಹಳ ಮಂದಿ ನರೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಿದ್ದೇನೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಯತ್ನಿಸುವೆ.
-ರಮೇಶ ಜಾರಕಿಹೊಳಿ,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT