ಸೋಮವಾರ, ಫೆಬ್ರವರಿ 17, 2020
30 °C
ಸಮ್ಮೇಳನದ ಸ್ವಾಗತ ಸಮಿತಿಯಿಂದ ಆಯೋಜನೆ; ಹೆಸರು ನೋಂದಾಯಿಸಲು ಮನವಿ

ಸಮ್ಮೇಳನ: ‘ಗುಲ್ಲೆಬ್ಬಿಸಿದ್ದ’ ಕನ್ನಡ ಸಂಘಟನೆಗಳಿಗೆ ಕಾಗುಣಿತ ಸ್ಪರ್ಧೆ!

ಗಣೇಶ ಡಿ. ಚಂದನಶಿವ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ನಗರದಲ್ಲಿ ಫೆ.5 ರಿಂದ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಮ್ಮನ್ನು ಕಡೆಗಣಿಸಲಾಗಿದೆ’ ಎಂದು ಪ್ರತಿಭಟನೆ ನಡೆಸಿದ್ದ ಕನ್ನಡಪರ ಸಂಘಟನೆಗಳಿಗೆ ಜಿಲ್ಲಾಡಳಿತವು ಕಾಗುಣಿತ ಬರೆಯುವುದು ಸೇರಿ ಹಲವು ಸ್ಪರ್ಧೆಗಳನ್ನು ಆಯೋಜಿಸಿದೆ!

ಕನ್ನಡ ಸಾಹಿತ್ಯ ಕುರಿತ ರಸಪ್ರಶ್ನೆ, ಕಾಗುಣಿತ ಉಕ್ತಲೇಖನ (ಡಿಕ್ಟೇಷನ್‌), ಉಲ್ಲೇಖ ಬರೆಯುವುದು, ಪ್ರಬಂಧ, ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯನ್ನು ಸಮ್ಮೇಳನದ ಸ್ವಾಗತ ಸಮಿತಿ ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಸೂಚಿಸಲಾಗಿದೆ.

‘ಈ ಸ್ಪರ್ಧೆಗಳಲ್ಲಿ ಜಿಲ್ಲೆಯ ಎಲ್ಲಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಮನವಿ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು,ಪದಾಧಿಕಾರಿಗಳು ಮಾತ್ರ ಭಾಗವಹಿಸಬೇಕು ಎಂದು ಸಮ್ಮೇಳನದ ಸಂಘಟಕರು ನಿಯಮ ರೂಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದಅಧ್ಯಕ್ಷ ಮಂಜುನಾಥ ನಾಲವಾರಕರ್‌, ‘ಸ್ಪರ್ಧೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ನಮಗೆ ಹಿಂಜರಿಕೆ ಇಲ್ಲ. ಆದರೆ, ಒಂದು ಷರತ್ತು
ಹಾಕಿದ್ದೇವೆ. ಒಂದು ಕೊಠಡಿಯಲ್ಲಿ ಸ್ಪರ್ಧೆನಡೆಸುವುದು ಬೇಡ. ಸಮ್ಮೇಳನದ ಉದ್ಘಾಟನೆ ದಿನ ಫೆ 5ರಂದು ಮುಖ್ಯ ವೇದಿಕೆಯಲ್ಲೇ  ಸ್ಪರ್ಧೆ ನಡೆಯಲಿ. ಅದರಲ್ಲಿ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳೂ ಭಾಗವಹಿಸಲಿ. ಅಲ್ಲಿ ನಮ್ಮ ವಿದ್ವತ್ತು ತೋರಿಸುತ್ತೇವೆ’ ಎಂದರು.

‘ಸಮ್ಮೇಳನಕ್ಕೆ ಕಸಾಪ ಹಿಂದಿನ ಅಧ್ಯಕ್ಷರು, ಕನ್ನಡಪರ ಸಂಘಟನೆಗಳ ಮುಖಂಡರನ್ನು ಏಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದೇ ತಪ್ಪಾಗಿದೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಅಚ್ಚು ಹಾಕಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಕಾಗುಣಿತ ದೋಷವಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಸ್ಪರ್ಧೆಯಲ್ಲಿ ಸಿಂಪಿ ಅವರೂ ಭಾಗವಹಿಸಲಿ’ ಎಂದು ಸವಾಲು ಹಾಕಿದರು.

***

ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಿಗೆ ಕನ್ನಡ ಸಾಹಿತ್ಯ ಕುರಿತಾದ ಸ್ಪರ್ಧೆ ಆಯೋಜಿಸುವ ಮೂಲಕ ಅವರನ್ನೂ ತೊಡಗಿಸಿಕೊಂಡಿದ್ದೇವೆ

- ಶರತ್ ಬಿ. ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು