ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ನಾಯಕತ್ವ ಬದಲಾವಣೆ ಮುನ್ನೆಲೆಗೆ

Last Updated 9 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ವಲಯದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆಯ ವಿಚಾರವೂ ಮುನ್ನೆಲೆಗೆ ಬಂದಿದೆ.

ಲೋಕಸಭೆ ಚುನಾವಣೆಯ ಸೋಲಿನ ನಂತರ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಮಾಡಬೇಕು ಎಂಬ ಕೂಗು ಆರಂಭವಾಗಿತ್ತು. ಈ ಒತ್ತಡದ ಪರಿಣಾಮ ಎಂಬಂತೆ ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ನಂತರ ‘ಮೂಲ– ವಲಸಿಗ’ ಎಂಬ ತಿಕ್ಕಾಟ ಜೋರಾಗಿತ್ತು. ಅವರು ಹೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‘ಅಸ್ತು’ ಎನ್ನುತ್ತಾರೆ. ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಹಿರೀಕ
ರಿಂದ ಕೇಳಿಬಂದಿತ್ತು. ಸಿದ್ದರಾಮಯ್ಯ ಆಪ್ತರಾಗಿದ್ದವರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರ ಕೆಡವಿದ್ದಾರೆ.ಮೂಲ ಕಾಂಗ್ರೆಸಿಗರನ್ನು ಕಾಪಾಡದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಹೈಕಮಾಂಡ್‌ಗೆ ಹಿರಿಯ ನಾಯಕರು ದೂರು ಸಲ್ಲಿಸಿದ್ದರು. ನಾಯಕತ್ವ ಬದಲಾವಣೆಗೂ ಪಟ್ಟು ಹಿಡಿದಿದ್ದು, ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರವೂ ಸಿದ್ದರಾಮಯ್ಯ– ಹಿರಿಯರ ನಡುವಿನ ಜಟಾಪಟಿಗೂ ಕಾರಣವಾಗಿತ್ತು.

ಉಪಚುನಾವಣೆಯ ಅಂತಿಮ ಘಟ್ಟದಲ್ಲಿ ಮಧ್ಯೆ ಪ್ರವೇಶಿಸಿದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಡಿ.9ಕ್ಕೆ ಸಿಹಿ ಸುದ್ದಿ
ನೀಡುವುದಾಗಿ ಹೇಳಿದ್ದರು. ಈಗ ಆ ಬಗ್ಗೆ ಅವರೂ ಏನೂ ಹೇಳುತ್ತಿಲ್ಲ. ನಾಯಕತ್ವದ ವಿರುದ್ಧ ಸಿಡಿದೆದ್ದಿರುವಹಿರಿಯ ನಾಯಕರೂ ಸೋಲಿನ ಹೊಣೆ ಹೊರುತ್ತಿಲ್ಲ, ಇಲ್ಲವೆ ಯಾರ ಮೇಲೂ ಅದನ್ನು ಹಾಕುತ್ತಿಲ್ಲ. ಎಲ್ಲರೂ ಮೌನಕ್ಕೆ ಜಾರಿದ್ದಾರೆ.‌‌

ಹಿರಿಯರಿಗೆ ಅವಕಾಶ

ಲೋಕಸಭೆ ಸೋಲಿನ ನಂತರ ರಾಜ್ಯ ರಾಜಕಾರಣದತ್ತ ಮುಖಮಾಡಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರಿಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ
ನಾಯಕನ ಸ್ಥಾನವನ್ನು ಇಬ್ಬರಿಗೆ ನೀಡಲಾಗಿತ್ತು. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸತತ ಸೋಲು

ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರಲಿಲ್ಲ. ನಂತರ ಅವರ ನೇತೃತ್ವದಲ್ಲೇ ನಡೆದ 2018ರ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆ ಕಂಡಿತ್ತು. ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಬ್ಬರನ್ನು ಮಾತ್ರ ಸಂಸತ್‌ಗೆ ಕಳುಹಿಸಲು ಸಾಧ್ಯವಾಯಿತು. ಉಪಚುನಾವಣೆ ನಡೆದ 15ರಲ್ಲಿ 11 ಕ್ಷೇತ್ರಗಳನ್ನು ಕಾಂಗ್ರೆಸ್ ಪ್ರತಿನಿಧಿಸಿತ್ತು. ಈಗ 2 ಕಡೆ ಗೆದ್ದಿದ್ದು, 9 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಸತತ ಸೋಲು ನಾಯಕತ್ವದ ಮೇಲೂ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT