ಗುರುವಾರ , ಆಗಸ್ಟ್ 5, 2021
26 °C
ಮುಖ್ಯ ರಸ್ತೆಯಲ್ಲೇ ಒಂಟಿ ಸಲಗ ಸಂಚಾರ

ಕೊಡಗು: ರಸ್ತೆಗೆ ಬಂದ ಕಾಡಾನೆ, ಅಪಾಯದಿಂದ ಪಾರಾದ ಕಾರ್ಮಿಕ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಇಲ್ಲಿನ ಮಾಲ್ದಾರೆ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೂಲಕ ಕಾಡಾನೆಯೊಂದು ರಾಜಾರೋಷವಾಗಿ ಸಂಚರಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಲ್ದಾರೆಯ ಕಳ್ಳಲ ಎಂಬಲ್ಲಿ ಗುರುವಾರ ಬೆಳಿಗ್ಗೆ ಅಲ್ಲಿನ ಕಾರ್ಮಿಕ ಮಹಿಳೆ ಉಷಾ ಎಂಬುವರು ಎಂದಿನಂತೆ  ತೋಟಕ್ಕೆ ತೆರಳುತ್ತಿದ್ದರು. ಈ ಸಂದರ್ಭ ರಸ್ತೆಯಲ್ಲೇ ರಾಜಾರೋಷವಾಗಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ‌‌ಕಾಡಾನೆ ಸಂಚರಿಸುತ್ತಿರುವ ದೃಶ್ಯ ಚಿತ್ರೀಕರಿಸಿರುವ ಸ್ಥಳೀಯರು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಒಂಟಿ ಸಲಗವು ಮುಖ್ಯರಸ್ತೆಯಲ್ಲೇ ದಾಟುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಾಲ್ದಾರೆ ಪಟ್ಟಣದ ಗಣಪತಿ ದೇವಾಲಯದ ಬಳಿಯಲ್ಲೂ ಕೂಡ ಪ್ರತಿದಿನ ಕಾಡಾನೆ ಹಿಂಡು ಕಾಫಿ ತೋಟದಿಂದ ಅರಣ್ಯಕ್ಕೆ ದಾಟುತ್ತಿದ್ದು, ಮುಖ್ಯ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ ಎದುರಾಗಿದೆ. ಪ್ರತಿದಿನ ಬೆಳಗ್ಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಕಾಫಿ ತೋಟದಿಂದ ಅರಣ್ಯಕ್ಕೆ ಹಾಗೂ ಅರಣ್ಯದಿಂದ ಕಾಫಿ ತೋಟಕ್ಕೆ ಸಂಚರಿಸುತ್ತಿದೆ.

ಪ್ರತಿಭಟನೆಯ ಎಚ್ಚರಿಕೆ: ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ ಆಂಟೋನಿ, ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಡುತ್ತಿದ್ದು, ಬೆಳೆಗಳನ್ನು ನಾಶಪಡಿಸುತ್ತಿದೆ. ಮತ್ತೊಂದೆಡೆ ಕಾರ್ಮಿಕರು ಕೂಡ ಭಯದಲ್ಲೇ ಕೆಲಸಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು, ಅರಣ್ಯ ಇಲಾಖೆ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು