ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈದ್ಯಕೀಯ ಸೌಲಭ್ಯ: ಸಂಪೂರ್ಣ ವಿವರ ಕೇಳಿದ ಹೈಕೋರ್ಟ್

Last Updated 8 ಏಪ್ರಿಲ್ 2020, 15:58 IST
ಅಕ್ಷರ ಗಾತ್ರ

ಬೆಂಗಳೂರು: "ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಬಗೆಯ ಮಾಸ್ಕ್, ಪಿಪಿಇ, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್‌ ಬೇಡಿಕೆ ಎಷ್ಟಿದೆ. ಅದಕ್ಕೆ ಅನುಗುಣವಾಗಿ ಯಾವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸಂಪೂರ್ಣ ವಿವರ ಒದಗಿಸಿ" ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಾದ ಮಂಡಿಸಿದರು.

"2.40 ಲಕ್ಷ ಎನ್-95 ಮಾಸ್ಕ್, 6.94 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 53 ಸಾವಿರ ಪಿಪಿಇ ಕಿಟ್‌ಗಳು ಕರ್ನಾಟಕ ಡ್ರಗ್‌ ಲಾಜಿಸ್ಟಿಕ್ ಅಂಡ್ ವೇರ್‌ ಹೌಸಿಂಗ್ ಸೊಸೈಟಿಯಲ್ಲಿ ಸ್ಟಾಕ್ ಇದೆ. 324 ವೆಂಟಿಲೇಟರ್, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 10 ಲಕ್ಷ ಪಿಪಿಇ ಕಿಟ್ಸ್, 25 ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್‌ಗಳ ಖರೀದಿಗೆ ಆದೇಶಗಳನ್ನು ಹೊರಡಿಸಲಾಗಿದೆ" ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯ ಡಾ. ಝೀನತ್ ಆಸ್ಪತ್ರೆಯ ಸಿಬ್ಬಂದಿಗೆ ಮಾಸ್ಕ್‌ಗಳನ್ನು ನೀಡಿಲ್ಲ ಎಂದು ಹೈಕೋರ್ಟ್ ಗೆ ಇ-ಮೇಲ್ ಮಾಡಿದ್ದಾರೆ. ಅಲ್ಲದೇ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್‌ಗಳನ್ನು ಒದಗಿಸಿಲ್ಲ ಎಂದು ಬೀದರ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಆರೋಗ್ಯ ಸಹಾಯಕಿಯರೂ ಮೇಲ್ ಮಾಡಿದ್ದಾರೆ. ಆದ್ದರಿಂದ ಈ ಕುರಿತ ಸಂಪೂರ್ಣ ವಿವರ ನೀಡಿ" ಎಂದು ಸೂಚಿಸಿ ಇದೇ 9ಕ್ಕೆ ವಿಚಾರಣೆ ಮುಂದೂಡಿದೆ.

537 ಐಸೋಲೇಷನ್ ಬೆಡ್‌: "ರಾಜ್ಯದಲ್ಲಿ 332 ಖಾಸಗಿ, 206 ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ 537 ಐಸೋಲೇಷನ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ" ಎಂಬ ಅಂಶವನ್ನು ಸರ್ಕಾರ ನ್ಯಾಯಪೀಠಕ್ಕೆ ವಿವರಿಸಿದೆ.

"ಎಂಟು ಜಿಲ್ಲಾ ಲ್ಯಾಬ್‌ಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,114, ಖಾಸಗಿ ಆಸ್ಪತ್ರೆಗಳಲ್ಲಿ 1,544 ಸೇರಿದಂತೆ ಒಟ್ಟು 2,658 ಐಸೋಲೇಷನ್ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ" ಎಂದು ತಿಳಿಸಲಾಗಿದೆ.

"ಬೆಂಗಳೂರಿನಲ್ಲಿ 862 ಐಸೋಲೇಷನ್ ಬೆಡ್‌ಗಳಿವೆ. 740 ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದೂ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT