ಮಂಗಳವಾರ, ಆಗಸ್ಟ್ 3, 2021
23 °C

ಕೊರೊನಾ ನಮ್ಮ ಕೈಮೀರಿದೆ, ನಿಗ್ರಹ ಕಷ್ಟವಾಗುತ್ತಿದೆ: ಸಚಿವ ಜೆ.ಸಿ.ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೂ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ಸಮುದಾಯದಲ್ಲಿ ಹರಡುತ್ತಿರುವುದು ಆಘಾತವನ್ನುಂಟು ಮಾಡಿದೆ. ಇದರಿಂದ ಸೋಂಕು ನಿಯಂತ್ರಣ ನಮ್ಮ ಕೈತಪ್ಪುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಮುನ್ನೆಚ್ಚರಿಕೆ ವಹಿಸುವ ಮೂಲಕ ಸಹಕರಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮನವಿ ಮಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್–19 ಚಿಕಿತ್ಸೆಗಾಗಿ 200 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚುವರಿಯಾಗಿ 150 ಸೇರಿ ಒಟ್ಟು 350 ಹಾಸಿಗೆಗಳ ಹಾಗೂ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಕನಿಷ್ಠ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವೈದ್ಯಕೀಯ ಕಾಲೇಜುಗಳಲ್ಲಿ 500 ಹಾಸಿಗೆಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆಗಳ ವ್ಯವಸ್ಥೆ ಒದಗಿಸಲು ಮನವಿ ಮಾಡಲಾಗಿದೆ ಎಂದರು.

ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ತಗುಲಿದರೆ ಗುಣಪಡಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಉದಾಸೀನ ಮಾಡದೆ ಕೆಮ್ಮು, ನೆಗಡಿ, ಶೀತ, ಜ್ವರ, ಮತ್ತಿತರ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದ ರೋಗಿಗಳಿಗೆ ಮನೆಯಲ್ಲಿಯೇ ಸ್ವಯಂ ಔಷಧೋಪಚಾರದ ಪ್ರಯೋಗ ಮಾಡಬಾರದು. ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸೋಂಕು ಗ್ರಾಮಗಳಿಗೂ ಕಾಲಿಟ್ಟಿರುವುದರಿಂದ ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯನೇ ಆಗಿದ್ದರೂ ಸಹ ಹೊರಗಿನಿಂದ ಬಂದವರನ್ನು ತಪಾಸಣೆಗೊಳಪಡಿಸದೇ ಮನೆಯಲ್ಲಿಟ್ಟುಕೊಳ್ಳಬಾರದು. ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.

ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆಗಾಗಿ ಸರ್ಕಾರ ನಿಯೋಜಿಸಿರುವ ಮೇಲುಸ್ತುವಾರಿ ತಂಡದ ಮುಖ್ಯಸ್ಥ ಹಾಗೂ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಸ್ಥಳದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಸೂಚಿಸಲಾದ ರೋಗಿಗಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಉಪ ವಿಭಾಗಾಧಿಕಾರಿ ಅಜಯ್ ಇದ್ದರು.

ಹೊರಗೆ ಮಕ್ಕಳ ಬಿಡಬೇಡಿ

‘ಮಕ್ಕಳಿಗೆ ರೋಗ ತಗುಲಿದರೆ ನಿಯಂತ್ರಿಸುವುದು ಬಹಳ ಕಷ್ಟ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಡಬಾರದು. ಅಲ್ಲದೆ, ಸೋಂಕಿತರು ಗುಣಮುಖರಾದ ಕೂಡಲೇ ಎಲ್ಲೆಂದರಲ್ಲಿ ಓಡಾಡದೆ, ಸಮುದಾಯದಲ್ಲಿ ಬೆರೆಯದೆ ಕನಿಷ್ಠ ಒಂದು ವಾರ ಕಾಲ ಹೋಮ್ ಕ್ವಾರೆಂಟೈನ್‌ಗೊಳಗಾಗಬೇಕು. ಕ್ವಾರೆಂಟೈನ್ ಅವಧಿ 14 ದಿನಗಳ ನಂತರವೂ ಸೋಂಕು ದೃಢಪಟ್ಟ ನಿದರ್ಶನಗಳಿರುವುದರಿಂದ ಮುಂಜಾಗ್ರತೆಯಿಂದ ಇರಬೇಕು’ ಎಂದು ಮಾಧುಸ್ವಾಮಿ ತಿಳಿಸಿದರು.

‘8 ಮಂದಿ ಜೀವಕ್ಕೆ ಖಾತರಿ ಇಲ್ಲ’

ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 8 ಮಂದಿ ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಅವರ ಜೀವದ ಬಗ್ಗೆ ಯಾವುದೇ ಖಾತರಿ ಕೊಡಲು ಸಾಧ್ಯವಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

8 ಸೋಂಕಿತ ಮಕ್ಕಳು ಗುಣಮುಖರಾಗುತ್ತಿದ್ದಾರೆ. ಇನ್ನೂ ಸೋಮವಾರ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆತರುವ ವೇಳೆಯೇ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು