ಬುಧವಾರ, ಮೇ 27, 2020
27 °C
ಮದ್ಯ ಸಿಗದೆ ಪರದಾಟ

ಲಾಕ್‌ಡೌನ್‌: ಮದ್ಯ ವ್ಯಸನಿಗಳಲ್ಲಿ ಹೆಚ್ಚುತ್ತಿದೆ ‘ವಿತ್‌ಡ್ರಾವಲ್‌ ಎಫೆಕ್ಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ನಂತರ ಕುಡಿಯಲು ಹನಿ ಹೆಂಡ ಸಿಕ್ಕಿಲ್ಲ. ಕಣ್ಣಿಗೆ ನಿದ್ದೆ ಬರುತ್ತಿಲ್ಲ. ಹಗಲು, ರಾತ್ರಿ  ಗೊತ್ತಾಗುತ್ತಿಲ್ಲ. ಮೈಮೇಲೆ ಹುಳು ಹರಿದಾಡಿದ ಅನುಭವವಾಗುತ್ತಿದೆ. ಕಣ್ಣ ಮುಂದೆ ಚಿತ್ರ, ವಿಚಿತ್ರ ಆಕೃತಿ ಓಡಾಡಿದಂತಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಜೀವನವೇ ಸಾಕಾಗಿದೆ... 

‘ಮೂರ‍್ನಾಲ್ಕು ದಿನವಾಯ್ತು ಒಂದೇ ಒಂದು ಹನಿ ಎಣ್ಣೆ ತುಟಿಗೆ ಅಂಟಿಲ್ಲ. ಕುಡಿಯದೆ ಬದುಕುವ ಆಸೆಯೇ ಹೊರಟು ಹೋಗಿದೆ. ಈ ದರಿದ್ರ ಜೀವನವೇ ಸಾಕೆನಿಸಿದೆ. ಸತ್ತು ಬಿಡೋಣ ಎನಿಸುತ್ತಿದೆ. ಪ್ಲೀಸ್ ಏನಾದರೂ ಮಾಡಿ...‘

ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ 104 ಸಹಾಯವಾಣಿಗೆ ಬರುತ್ತಿರುವ ದೂರವಾಣಿ ಕರೆಗಳು ಇವು. ಅವರ ಪ್ರಶ್ನೆಗಳು ಅಷ್ಟಕ್ಕೆ ನಿಲ್ಲುವುದಿಲ್ಲ.‘ಈ ಲಾಕ್‌ಡೌನ್‌ ಯಾವಾಗ ಮುಗಿಯುತ್ತದೆ?’ ಎಂಬ ಪ್ರಶ್ನೆಯೊಂದಿಗೆ ಕೊನೆಗೊಳ್ಳುತ್ತವೆ. 

* * *

ಇಡೀ ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ವೈರಸ್‌ ಮದ್ಯ ವ್ಯವಸನಿಗಳಿಗೆ ತಂದೊಡ್ಡಿರುವ ಹೊಸ ಸಮಸ್ಯೆ ಇದು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಐದಾರು ದಿನಗಳಿಂದ ಮದ್ಯ ಸಿಗದೆ ಪರದಾಡುತ್ತಿರುವ ರಾಜ್ಯದ ಸಾವಿರಾರು ಮದ್ಯ ವ್ಯಸನಿಗಳು ‘ವಿತ್‌ಡ್ರಾವಲ್‌ ಎಫೆಕ್ಟ್‌’ನಿಂದ ಬಳಲುತ್ತಿದ್ದಾರೆ.

ಹಠಾತ್‌ ಮದ್ಯ ಸರಬರಾಜು ನಿಲ್ಲಿಸಿದ ಕಾರಣ ಮದ್ಯ ವ್ಯವಸನಿಗಳಲ್ಲಿ ‘ವಿತ್‌ಡ್ರಾವಲ್‌ ಎಫೆಕ್ಟ್‌’ ಕಾಣಿಸಿಕೊಂಡಿದೆ. ಇದು ಆತ್ಮಹತ್ಯೆ ಆಲೋಚನೆ ಮತ್ತು ತುಡಿತಕ್ಕೆ ದಾರಿ ಮಾಡಿಕೊಡುತ್ತಿದೆ. ಅಲ್ಲದೇ, ನಾನಾ ಬಗೆಯ ದೈಹಿಕ ಮತ್ತು ಮಾನಸಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ನಿದ್ರೆ, ಹಸಿವು ಇಲ್ಲದೆ ಮನೋರೋಗಿಗಳಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.  

ರಾಜ್ಯದಲ್ಲಿ ಈಗಾಗಲೇ ಕೆಲವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ವರದಿಯಾಗಿವೆ.  

ಕೊರೊನಾ ಲಾಕ್‌ಡೌನ್‌ ನಂತರ ಬೆಂಗಳೂರಿನ ನಿಮಾನ್ಸ್‌ ತುರ್ತು ನಿಗಾ ಘಟಕ ಮತ್ತು ವ್ಯಸನಮುಕ್ತ ಕೇಂದ್ರಗಳಲ್ಲಿ ದಾಖಲಾಗುವವರು ಕೂಡ ಹೆಚ್ಚಾಗುತ್ತಿದ್ದಾರೆ. ಮಾನಸಿಕ ಚಿಕಿತ್ಸೆ ನೆರವು ಕೋರಿ ಪ್ರತಿನಿತ್ಯ 104 ಸಹಾಯವಾಣಿಗೆ ಬರುತ್ತಿರುವ ಕರೆಗಳ ಸಂಖ್ಯೆ ಕೂಡ ಗಣನೀಯವಾಗಿ ಏರುಗತಿಯಲ್ಲಿದೆ.

ಇಂಥವರಿಗೆ ನೆರವು ನೀಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿಯಾಗಿ ಎರಡು ನೂರು ಮನೋರೋಗ ತಜ್ಞರನ್ನು ಸ್ವಯಂ ಸೇವಕರಾಗಿ ನಿಯೋಜಿಸಲು ಮುಂದಾಗಿದೆ. 

ರಾಜ್ಯದ ಯಾವುದೇ ಮೂಲೆಯಿಂದಲೂ 104 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಜಿಲ್ಲಾವಾರು ಮನೋ ವೈದ್ಯರ ದೂರವಾಣಿ ಸಂಖ್ಯೆ ನೀಡಲಾಗುತ್ತದೆ. ಮದ್ಯ ಸಿಗದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ದೂರವಾಣಿಯಲ್ಲಿ ಉಚಿತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುವುದು ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋರೋಗ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ. 

ಏನಿದು ವಿತ್‌ಡ್ರಾವಲ್‌ ಎಫೆಕ್ಟ್‌?
ಹಲವಾರು ವರ್ಷಗಳಿಂದ ಮದ್ಯ, ಮಾದಕ ವಸ್ತು, ಸಿಗರೇಟ್‌, ತಂಬಾಕು ಸೇವನೆ ಯಂತಹ ಚಟಗಳಿಗೆ ದಾಸರಾದವರು ಹಠಾತ್ತನೆ ಅವುಗಳ ಸೇವನೆ ನಿಲ್ಲಿಸಿದರೆ ಅಂಥವರಲ್ಲ ಕಂಡು ಬರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ‘ವಿತ್‌ಡ್ರಾವಲ್‌ ಎಫೆಕ್ಟ್‌’ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು