ಭಾನುವಾರ, ಏಪ್ರಿಲ್ 5, 2020
19 °C

ಕೋವಿಡ್-19 ಮುಂಜಾಗ್ರತೆ | ರಾಜ್ಯದಲ್ಲಿ ಒಂದು ವಾರ ಬಂದ್, ಪರೀಕ್ಷೆ ಅಬಾಧಿತ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ರೈಲ್ವೆ ನಿಲ್ದಾಣದ ಸಮೀಪ ಮಾಸ್ಕ್‌ ಧರಿಸಿ ಸಾಗುತ್ತಿರುವ ಪ್ರಯಾಣಿಕರು– ಸಂಗ್ರಹ ಚಿತ್ರ

ಬೆಂಗಳೂರು: ಕೊರೊನಾ ವೈರಸ್‌ ಆತಂಕ ಸೃಷ್ಟಿಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದ (ಮಾ.14) ಒಂದು ವಾರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಮಾರಂಭಗಳು, ಸಭೆಗಳು, ಕಾಲೇಜು ಹಾಗೂ ಮಾಲ್‌ಗಳನ್ನು ಬಂದ್‌ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.

ದಿನೇ ದಿನೇ ಕೋವಿಡ್‌–19 ಭೀತಿ ಹೆಚ್ಚುತ್ತಿರುವುದರಿಂದ ಒಂದು ವಾರ ಚಿತ್ರಮಂದಿರ ಸೇರಿದಂತೆ ನೂರಾರು ಜನರು ಸೇರುವ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಮದುವೆ, ಜಾತ್ರೆ ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸಮಾರಂಭಗಳನ್ನು ನಡೆಸದಿರುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಶಾಪಿಂಗ್‌ ಮಾಲ್‌ಗಳು, ಬೇಸಿಗೆ ಶಿಬಿರಗಳು, ಸಭೆ ಮತ್ತು ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸದಿರಲು ಸೂಚಿಸಲಾಗಿದೆ. ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸುವುದಾಗಿ ತಿಳಿಸಿದ್ದಾರೆ. ಆದರೆ, ಕಾಲೇಜುಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದಾರೆ. 

ಐಟಿ ಕಂಪೆನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲು ಸಲಹೆ ನೀಡಲಾಗಿದೆ. ಕಲಬುರ್ಗಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ರಥೋತ್ಸವ, ಜಾತ್ರೆ ರದ್ದು ಪಡಿಸಿರುವುದಾಗಿಯೂ ತಿಳಿಸಿದ್ದಾರೆ. 

ಕರೊನಾ ವೈರಸ್ ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಉನ್ನತ ಮಟ್ಟದ ಸಭೆ ನಡೆದಿದ್ದು, ಮಾರ್ಚ್‌ 14ರಿಂದಲೇ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. 

ಕರೊನಾ ವೈರಸ್ ಸೋಂಕಿನಿಂದ ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಡಾ.ದೇವಿ ಶೆಟ್ಟಿ ಹಾಗೂ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ನಂತರ ಸಿಎಂ ಯಡಿಯೂರಪ್ಪ ಈ ನಿರ್ಧಾರಗಳನ್ನು ಪ್ರಕಟಿಸಿದರು.

ಇದನ್ನೂ ಓದಿ: 

* ನಾಳೆಯಿಂದ ಒಂದು ವಾರದ ಅವಧಿಗೆ ರಾಜ್ಯದಾದ್ಯಂತ ಶಾಪಿಂಗ್‌ ಮಾಲ್‍ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ ಮುಚ್ಚುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ

* ಬೇಸಿಗೆ ಶಿಬಿರಗಳು, ಸಭೆ ಮತ್ತು ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸದಿರಲು ಸೂಚನೆ. ಸಾರ್ವಜನಿಕರು ಸಹಕರಿಸಲು ಸಿಎಂ ಮನವಿ.

* ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚನೆ

* ಪರೀಕ್ಷೆಗಳು, ಸರ್ಕಾರಿ ಕಚೇರಿಗಳು, ಅಧಿವೇಶನ ಅಬಾಧಿತವಾಗಿ ನಡೆಯಲಿವೆ

* ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುತ್ತದೆ

* ಐಟಿ ಕಂಪೆನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲು ಸಲಹೆ 

* ಸೋಂಕು ತಗುಲದೆ ಇರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ

* ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಂಘಟನೆಯವರಿಗೂ ಸೂಚನೆ ನೀಡಲಾಗಿದೆ.

* ವಿದೇಶ ಪ್ರಯಾಣದಿಂದ ಬಂದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಅವರ ಕುಟುಂಬದವರು ಅವರು ಯಾವುದೇ ದೇಶದಿಂದ ಹಿಂದಿರುಗಿದರೂ, ಕಡ್ಡಾಯವಾಗಿ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು(ಐಸೋಲೇಷನ್)

* ಎಲ್ಲ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್‍ನವರು ಕಳೆದ 14 ದಿನಗಳಿಂದ ವಿದೇಶದಿಂದ ಹಿಂದಿರುಗಿ ಚಿಕಿತ್ಸೆ ಪಡೆದವರು ಇದ್ದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಖಾಸಗಿ ಆಸ್ಪತ್ರೆಗಳು ಎಲ್ಲ ರೀತಿಯಲ್ಲೂ ಸಹಕರಿಸಬೇಕು.

* ಸುಧಾ ಮೂರ್ತಿ ಅವರು ಇನ್ಫೊಸಿಸ್‌ ಫೌಂಡೇಷನ್ ವತಿಯಿಂದ ಸೋಂಕು ತಡೆಗಟ್ಟಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ

* ಮತ್ತೊಬ್ಬರೊಂದಿಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ. ಯಾರನ್ನೂ ಮುಟ್ಟಬೇಡಿ (ಸೋಷಿಯಲ್ ಡಿಸ್ಟೆನ್ಸಿಂಗ್)

* ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು

* ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಒಂದು ಸಮಿತಿ ರಚಿಸಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು