ಬುಧವಾರ, ಜೂನ್ 3, 2020
27 °C

ಲಾಕ್‌ಡೌನ್ ಎಕ್ಸಿಟ್ ಕುರಿತು ತಜ್ಞರ ಸಮಿತಿಯಿಂದ ಸಿಎಂಗೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸದ್ಯ ನಿಯಂತ್ರಣಕ್ಕೆ ಬಂದರೂ, ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ ಹಾಟ್‌ಸ್ಟಾಟ್‌ಗಳಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕು ಎಂಬ ಶಿಫಾರಸನ್ನು ಡಾ.ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿ ಸರ್ಕಾರಕ್ಕೆ ನೀಡಿದೆ.

ಬುಧವಾರ ಇಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಮಿತಿ ಲಾಕ್‌ಡೌನ್‌ ಹಣೆಬರಹದ ಕುರಿತ ವರದಿ ಸಲ್ಲಿಸಿತು.

‘ಲಾಕ್‌ಡೌನ್‌ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್‌ಡೌನ್‌ ಮಾಡಬೇಕು. ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು. ಶಾಲೆ ಕಾಲೇಜುಗಳನ್ನು ಮೇ 31ರವರೆಗೆ ಮುಚ್ಚಬೇಕು. ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು' ಎಂದು ವರದಿ ಹೇಳಿದೆ.

‘ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು. ಅಂತರರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು. ಅಂತರರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು. ಏಪ್ರಿಲ್ 30ರ ವರೆಗೆ ಹವಾನಿಯಂತ್ರಿತ ಸೌಲಭ್ಯ ಇರುವ ಬಸ್‌ ಹಾಗೂ ಮೆಟ್ರೊ (ಬೆಂಗಳೂರು) ಸೇವೆ ಬೇಡ. ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು.

‘ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ, ಗುರುವಾರದ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು. ಒಂದು ವೇಳೆ ಲಾಕ್‌ಡೌನ್‌ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಕೇಂದ್ರವು ರಾಜ್ಯಗಳಿಗೆ ಬಿಟ್ಟರೆ ಈ ಶಿಫಾರಸುಗಳನ್ನು ಜಾರಿಗೆ ತರಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಇದ್ದರು.

ಸಮಿತಿಯ ಇತರ ಶಿಫಾರಸುಗಳು

*ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು, ಇತರ ಅರೆ ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಇತರ ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು.

*ಇದೇ 30ರ ವರೆಗೆ ಎಸಿ ಬಸ್, ಮೆಟ್ರೊ ಸೇವೆ ಬೇಡ.

*ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರ ಅನುಸರಿಸಬೇಕು.

*ಚೂಯಿಂಗ್‌ ಗಮ್‌ ತಿನ್ನುವುದನ್ನು ನಿರ್ಬಂಧಿಸುವುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು